ದೋಹಾ: ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ನಾಯಕತ್ವದ ಪೋರ್ಚುಗಲ್ ತಂಡವು ಫಿಫಾ ಫುಟ್ಬಾಲ್ ವಿಶ್ವಕಪ್ 2022ರ ರೌಂಡ್ 16 ಪ್ರವೇಶ ಮಾಡಿದೆ. ಬ್ರೂನೋ ಫೆರ್ನಾಂಡಿಸ್ ಅವರ ಅವಳಿ ಗೋಲಿನ ಸಹಾಯದಿಂದ ಪೋರ್ಚುಗಲ್ ತಂಡವು ಉರುಗ್ವೆ ವಿರುದ್ಧ ಜಯ ಸಾಧಿಸಿದೆ.
ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ 54ನೇ ನಿಮಿಷದಲ್ಲಿ ಎಡಭಾಗದಿಂದ ಕ್ರಾಸ್ ನಲ್ಲಿ ಫೆರ್ನಾಂಡಿಸ್ ಹೊಡೆದ ಚೆಂಡು ಸುರುಳಿಯಾಗಿ ಗೋಲು ಪೋಸ್ಟ್ ಕಡೆ ಸಾಗಿತ್ತು. ಈ ವೇಳೆ ಜಿಗಿದ ರೊನಾಲ್ಡೊ ಹೆಡ್ಡರ್ ಮೂಲಕ ಗೋಲು ಗಳಿಸಲು ನೋಡಿದರು. ಚೆಂಡು ಗೋಲು ಪೋಸ್ಟ್ ಗೆ ಸೇರಿತ್ತು. ಆದರೆ ರೊನಾಲ್ಡೊ ತಲೆ ಚೆಂಡಿಗೆ ತಾಗಿರಲಿಲ್ಲ. ಆದರೂ ರೊನಾಲ್ಡೊ ಕೂಡಲೇ ಮೈದಾನದಲ್ಲಿ ಓಡಾಡಿ ಸಂಭ್ರಮಾಚರಣೆ ಮಾಡಿದರು. ಆದರೆ ಆ ಗೋಲನ್ನು ಫೆರ್ನಾಂಡಿಸ್ ಗೆ ನೀಡಲಾಯಿತು. ಈ ಗೋಲಿನ ಮೂಲಕ ಫೆರ್ನಾಂಡಿಸ್ ಪೋರ್ಚುಗಲ್ ಗೆ 1-0 ಮುನ್ನಡೆ ಒದಗಿಸಿದರು.
ಇದನ್ನೂ ಓದಿ:ಕುಕ್ಕೆ: ಸ್ಕಂದ ಪಂಚಮಿಯಂದು 163 ಭಕ್ತರಿಂದ ಎಡೆಸ್ನಾನ ಸೇವೆ, ಇಂದು ಮಹಾರಥೋತ್ಸವ
ಬಳಿಕ ಕೊನೆಯಲ್ಲಿ 90+3 ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ 2-0 ಮುನ್ನಡೆ ಒದಗಿಸಿದರು. ಉರುಗ್ವೆ ಆಟಗಾರರು ಗೋಲು ಗಳಿಸಲು ವಿಫಲರಾದರು. 2-0 ಅಂತರದಿಂದ ಗೆದ್ದ ಪೋರ್ಚುಗಲ್ ಎಚ್ ಗುಂಪಿನಿಂದ ರೌಂಡ್ 16ಗೆ ಪ್ರವೇಶ ಪಡೆಯಿತು. ಮತ್ತೊಂದೆಡೆ ಫ್ರಾನ್ಸ್, ಬ್ರೆಜಿಲ್ ತಂಡಗಳು ಸೂಪರ್ 16ಗೆ ಅರ್ಹತೆ ಪಡೆದಿವೆ.