Advertisement

ಪಾಟೀಲ ಬೇಷರತ್‌ ಕ್ಷಮೆಯಾಚಿಸದಿದ್ದರೆ ಉಗ್ರ ಹೋರಾಟ

04:33 PM Jan 11, 2022 | Shwetha M |

ವಿಜಯಪುರ: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ವಿರುದ್ಧ ಸಲ್ಲದ ಪದ ಬಳಸಿ ನಿಂದನೆ ಮಾಡಿರುವ ಮಾಜಿ ಸಚಿವ ಎಂ.ಬಿ. ಪಾಟೀಲ ವರ್ತನೆ ಖಂಡನಾರ್ಹವಾಗಿದೆ. ಹೀಗಾಗಿ ಕೂಡಲೇ ಎಂ.ಬಿ. ಪಾಟೀಲ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಎಚ್ಚರಿಸಿದ್ದಾರೆ.

Advertisement

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ನಾಯಕನಿಗೆ ಅವಮಾನ ಮಾಡಿರುವುದು ದಲಿತ ಸಮುದಾಯಕ್ಕೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ನೋವಾಗಿದೆ. ಅವರ ಶಬ್ದಗಳನ್ನು ಪುನರುಚ್ಚಿಸಲೂ ನನಗೆ ಮುಜುಗುರವಾಗುತ್ತದೆ ಎಂದರು.

ದಲಿತ ಸಮುದಾಯಕ್ಕೆ ಸೇರಿದ ಹಿರಿಯ ರಾಜಕೀಯ ಮುತ್ಸದ್ದಿ ಗೋವಿಂದ ಕಾರಜೋಳ ಅವರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಕ್ಕೆ ಕೂಡಲೇ ಬೇಷರತ್‌ ಕ್ಷಮೆಯಾಚಿಸದಿದ್ದರೆ ಬಿಜೆಪಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದವರು ಈಗ ಹಾಲಿ ಶಾಸಕರೂ ಹೌದು. ಆದರೆ ತಮ್ಮ ಲೋಪ ಮುಚ್ಚಿಕೊಳ್ಳಲು ಹಿರಿಯ ಸಚಿವ ಗೋವಿಂದ ಕಾರಜೋಳ ಅವರ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿ ಸಮಸ್ತ ಬಿಜೆಪಿ, ದಲಿತ ಸಮುದಾಯಕ್ಕೆ ನೋವುಂಟು ಮಾಡಿದ್ದಾರೆ. ಹೀಗಾಗಿ ಬೇಷರತ್‌ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕ ಬದುಕಿನಲ್ಲಿ ಪಕ್ಷದಲ್ಲಿ ಟೀಕೆ-ಟಿಪ್ಪಣಿ ಸಹಜ. ಆದರೆ ಹಿರಿಯರಾದ ಕಾರಜೋಳ ಅವರನ್ನು ಏಕ ವಚನದಲ್ಲಿ ಪದ ಪ್ರಯೋಗ ಮಾಡಿರುವುದು ಖಂಡನಾರ್ಹ. ಜಲ ಸಂಪನ್ಮೂಲ ಮಾಜಿ ಸಚಿವರಿಗೆ ಹಿರಿಯ ಸಚಿವರಿಗೆ ಯಾವರೀತಿ ಶಬ್ದ ಬಳಸಬೇಕು ಎಂಬ ಅರಿವಿಲ್ಲ ಎಂದು ವಾಗ್ಧಾಳಿ ನಡೆಸಿದರು.

ದಶಕದ ಹಿಂದೆ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಜಲಸಂಪನ್ಮೂಲ ಸಚಿವರಾಗಿದ್ದ ಕೆ.ಎಸ್‌. ಈಶ್ವರಪ್ಪ ಅವರು ಕೆರೆ ತುಂಬುವ ಯೋಜನೆಗೆ ಚಾಲನೆ ನೀಡಿದ್ದಾರೆ. ಆದರೆ ಜಲಸಂಪನ್ಮೂಲ ಮಾಜಿ ಸಚಿವರು ಇದನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇನ್ನು ಈಗ ಟೀಕೆ ಮಾಡುವವರೇ ಜಲಸಂಪನ್ಮೂಲ ಸಚಿವರಾಗಿದ್ದಾಗ ಮೇಕೆದಾಟು ಯೋಜನೆಯನ್ನು ಏಕೆ ಕೈಗೆತ್ತಿಕೊಳ್ಳಲಿಲ್ಲ ಎಂದು ವಾಗ್ಧಾಳಿ ನಡೆಸಿದರು.

Advertisement

ಏತನ್ಮಧ್ಯೆ ಬೀಳಗಿ ಭಾಗದಲ್ಲಿ ರೈತರಿಗೆ ಮುಳುಗಡೆಯಾಗುವ ಜಮೀನುಗಳಿಗೆ ವೈಜ್ಞಾನಿಕ ಪರಿಹಾರ ದೊರಕಲಿದೆ. ಆದರೆ ಬಬಲೇಶ್ವರ ಭಾಗದ 14 ಹಳ್ಳಿಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗದಿ ಮಾಡದೇ ಮೋಸ ಮಾಡಲಾಗಿದೆ. ಕೇವಲ ಗೂಂಡಾಗಿರಿ ಬಲ ಪ್ರಯೋಗಿಸಿ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಮಲ್ಲಿಕಾರ್ಜುನ ಜೋಗೂರ, ಶಿವರುದ್ರ ಬಾಗಲಕೋಟ, ವಿಜಯ ಜೋಶಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next