Advertisement

ಚುನಾವಣ ಪ್ರಚಾರದಲ್ಲಿ ಬಿರುಸುಗೊಂಡ ಮಾತಿನೇಟು

12:37 AM Feb 08, 2023 | Team Udayavani |

ವಿಧಾನಸಭಾ ಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಯಾತ್ರೆ-ಸಮಾವೇಶಗಳ ಅಬ್ಬರದ ನಡುವೆ ಮೂರೂ ಪಕ್ಷಗಳ ನಾಯಕರ ನಡುವಿನ ವಾಗ್ಯುದ್ಧ ಜೋರಾಗಿದೆ. ಪರಸ್ಪರ ಮಾತಿನೇಟಿನ ಮೂಲಕ ಆಯಾ ಪಕ್ಷಗಳ ನಾಯಕರನ್ನು ಹಣಿಯುವ ಬೆಳವಣಿಗೆಯೂ ನಡೆಯುತ್ತಿದೆ.

Advertisement

ಡಿವಿಎಸ್‌ ವಿರುದ್ಧ ಜೆಡಿಎಸ್‌ ವಾಗ್ಧಾಳಿ
ಬೆಂಗಳೂರು: ಪಂಚರತ್ನ ಯಾತ್ರೆ “ಪಂಕ್ಚರ್‌’ ಆಗಿದೆ ಎಂಬ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಹೇಳಿಕೆ ವಿರುದ್ಧ ಜೆಡಿಎಸ್‌ ಟ್ವಿಟರ್‌ನಲ್ಲಿ ಹರಿಹಾಯ್ದಿದೆ.ಕರುನಾಡಿನ ಸಮಗ್ರ ಏಳಿಗೆಗಾಗಿ ಸಿದ್ಧಪಡಿಸಿರುವ “ಪಂಚರತ್ನ’ ಪಂಕ್ಚರ್‌ ಆಗಿದೆ ಎಂದು ಸದಾನಂದ ಗೌಡರು ನಾಲಿಗೆ ಹರಿಬಿಟ್ಟಿದ್ದಾರೆ. “ವೀಡಿಯೊ ಕಾಲ್ ‘ನಲ್ಲಿ ಏನನ್ನೋ ನೋಡಿ ಹಲ್ಕಿರಿದು ಮಾತನಾಡಿ ಜನಪ್ರಿಯ’ ರಾದ ಸದಾನಂದ ಗೌಡರೇ, ವರ್ಚುವಲ್‌ ಜಗತ್ತಿನಿಂದ ಮೊದಲು ಹೊರಬನ್ನಿ’ ಎಂದು ಟಾಂಗ್‌ ನೀಡಿದೆ. ಪಂಚರತ್ನ ಕಾರ್ಯಕ್ರಮವು ಈಗಾಗಲೇ ರಾಜ್ಯದ 6,700 ಕಿ.ಮೀ. ಕ್ರಮಿಸಿದೆ. ಕಾರ್ಯಕ್ರಮ ನಡೆದಲ್ಲೆಲ್ಲ ನಮಗೆ ಸಿಗುತ್ತಿರುವ ಜನ ಸ್ಪಂದನೆ ನೋಡಿ ಸರಕಾರ ಪತರಗುಟ್ಟಿದೆ. ವೀಡಿಯೊ ಕಾಲ್ ನಲ್ಲಿ ಮುಳುಗುವ ಸದಾನಂದ ಗೌಡರೇ, ಒಮ್ಮೆ ಪಂಚರತ್ನ ಕಾರ್ಯಕ್ರಮಕ್ಕೆ ಬಂದು ನೋಡಿ. ಆಗಲಾದರೂ ಸತ್ಯ ಗೊತ್ತಾಗಲಿದೆ ಎಂದು ಜೆಡಿಎಸ್‌ ಹೇಳಿದೆ.

ಅದಾನಿ, ಪ್ರಧಾನಿ ಮೋದಿ ಒಂದೇ ನಾಣ್ಯದ ಎರಡು ಮುಖ: ಉಗ್ರಪ್ಪ
ಬಳ್ಳಾರಿಯಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಅವರು, ಅದಾನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಅದಾನಿ ಆಸ್ತಿ 2018ರಲ್ಲಿ 71,200 ಕೋ. ರೂ. ಗಳಷ್ಟಿತ್ತು. 2022ಕ್ಕೆ 10.94 ಲಕ್ಷ ಕೋಟಿಗಳಿಗೆ ಏರಿದೆ. ಕೇವಲ ಒಂದು ವರ್ಷದಲ್ಲೇ 5.88 ಲಕ್ಷ ಕೋಟಿ ಆಸ್ತಿ ಗಳಿಕೆಯಾಗಿದೆ. ಅದಾನಿ ಒಂದು ದಿನದ ಆದಾಯ 1,600 ಕೋ. ರೂ.ಗಳಷ್ಟಿದೆ. ಕೇವಲ ಎಸ್‌ಬಿಐ ಬ್ಯಾಂಕ್‌ ಒಂದರಿಂದಲೇ ಸುಮಾರು 81 ಸಾವಿರ ಕೋಟಿಗೂ ಹೆಚ್ಚು ಸಾಲ ನೀಡಲಾಗಿದೆ. ಈಗ ಅದಾನಿ ವಂಚನೆಯಿಂದ ಎಸ್‌ಬಿಐ, ಎಲ್‌ಐಸಿಗೆ ಸುಮಾರು 80 ಸಾವಿರ ಕೋಟಿಗಳಷ್ಟು ನಷ್ಟವಾಗಿದೆ. ದೇಶದ ಆರ್ಥಿಕ ಸ್ಥಿತಿ ಬುಡಮೇಲು ಆಗುವ ಪರಿಸ್ಥಿತಿ ಬಂದಿದೆ ಎಂದರು.

“ನಪುಂಸಕ ಸರಕಾರ’ ಎಂದ ಎಚ್‌.ಡಿ. ಕುಮಾರಸ್ವಾಮಿ
ರಾಜ್ಯ ಬಿಜೆಪಿ ಸರಕಾರವನ್ನು “ನಪುಂಸಕ’ ಎಂದು ಟ್ವಿಟರ್‌ನಲ್ಲಿ ಟೀಕಿಸಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಕರ್ನಾಟಕ ಬಿಜೆಪಿ ಪಾಲಿಗೆ ಇಂದು “ಪಾಲಕರನ್ನು ಶಾಲೆಗೆ ಬರಮಾಡಿಕೊಳ್ಳುವ ದಿನ’ದ ಹಾಗೆ. ಪ್ರಧಾನಿ ಮೋದಿ ಯವರು ರಾಜ್ಯಕ್ಕೆ ಆಗಮಿಸುತ್ತಿರುವ ಈ ವೇಳೆ, ಅವರನ್ನು ಸ್ವಾಗತಿಸಿ ಚುನಾವಣೆ ಗೆಲ್ಲಲು ಅಣಿಯಾಗುವ ಉತ್ಸಾಹಲ್ಲಿ ರಾಜ್ಯ ಬಿಜೆಪಿಯವರಿದ್ದಾರೆ ಎಂದು ಟೀಕಿಸಿದ್ದಾರೆ. ಕರುನಾಡು ಬರಗಾಲ, ಪ್ರವಾಹದಿಂದ ತತ್ತರಿಸಿದಾಗೆಲ್ಲ “ಮಾಯವಾಗುವ’ ಪ್ರಧಾನಿ ಯವರು, ಚುನಾವಣೆ ಹತ್ತಿರ ಬಂದ ಕೂಡಲೇ ಪ್ರತ್ಯಕ್ಷ ರಾಗುತ್ತಾರೆ. ಇಡೀ ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿ ರುವ ಪ್ರಮುಖ ರಾಜ್ಯಗಳಲ್ಲೊಂದಾದ ಕರ್ನಾಟಕದ ಸಮಸ್ಯೆಗಳಿಗೆ ಕುರುಡಾಗಿ ವರ್ತಿಸುವವರು, ಈಗ ಮತ ಕೇಳಲು ಯಾವ ಮುಖ ಹೊತ್ತು ಬರುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಬಿಜೆಪಿಯೂ ನಪುಂಸಕ ವಾಗಿರುವುದು ದಿಟ. ಬರಡು ಭೂಮಿ ಯಂತೆ ಯಾವ ಪ್ರಯೋಜನವೂ ಇಲ್ಲದ ರಾಜ್ಯ ಸರಕಾರವಿದು. ಜನರ ಹಣ ಬಾಚುವ, ದೋಚುವುದಷ್ಟೆ ಇವರ ಕೆಲಸ. ಕೇಂದ್ರದ ತಾಳಕ್ಕೆ ಕುಣಿಯುತ್ತಾ, ರಾಜ್ಯದ ನೆಮ್ಮದಿ ಕಸಿ ಯುವ ಕೀಚಕ ಸರಕಾರವನ್ನು ಜನರು ಕಿತ್ತೂಗೆಯುವುದು ಖಚಿತ ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next