ಬೆಂಗಳೂರು: ಮಾನಸಿಕ ರೋಗ ಹಾಗೂ ಮಾನಸಿಕ ಚಿಕಿತ್ಸಾ ಕೇಂದ್ರಗಳ ಕುರಿತು ಜನರು ಹೊಂದಿರುವ ಅಪನಂಬಿಕೆ ಹೋಗಲಾಡಿಸುವ ನಿಟ್ಟಿನಲ್ಲಿ ನಿಮ್ಹಾನ್ಸ್ ಸಂಸ್ಥೆ ಹಮ್ಮಿಕೊಂಡಿದ್ದ “ವಾಕಿಂಗ್ ಟೂರ್ ಆಫ್ ನಿಮ್ಹಾನ್ಸ್’ ವಿಶೇಷ ಅಭಿಯಾನದ ಮೊದಲ ಕ್ಯಾಂಪಸ್ ನಡಿಗೆ ಕಾರ್ಯಕ್ರಮ ಶನಿವಾರ ಯಶಸ್ವಿಯಾಗಿ ನಡೆಯಿತು.
ಅಭಿಯಾನದ ಮೊದಲ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡ 40 ಮಂದಿ ಎರಡು ತಂಡಗಳಾಗಿ ನಿಮ್ಹಾನ್ಸ್ ಆಸ್ಪತ್ರೆಯನ್ನು ಒಂದು ಸುತ್ತು ಹಾಕಿದರು. ಆಸ್ಪತ್ರೆಯ ಕುರಿತು ತಮ್ಮಲ್ಲಿದ್ದ ಒಂದಿಷ್ಟು ಭಯ, ತಪ್ಪು ಕಲ್ಪನೆಗಳನ್ನು ದೂರಮಾಡಿಕೊಂಡರು.
ನಿಮ್ಹಾನ್ಸ್ ಮಾನಸಿಕ ಆರೋಗ್ಯ ಶಿಕ್ಷಣ ವಿಭಾಗದ ಪೊ›.ಕೆ.ಎಸ್.ಮೀನಾ, ಡಾ.ಸಂತೋಷ್ ಲೋಗನಾಥ್, ಡಾ.ಅನೀಶ್, ಡಾ.ಲತಾ ತಂಡವು ಅಭಿಯಾನದಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಅಗತ್ಯ ಮಾರ್ಗದರ್ಶನ, ಸಲಹೆ ಸೂಚನೆ ನೀಡುತ್ತಾ 300 ಎಕರೆ ವಿಸೀರ್ಣದ ಕ್ಯಾಂಪಸ್ ಸುತ್ತಿಸಿದರು. ಸುತ್ತಾಟ ಸಂದರ್ಭದಲ್ಲಿಯೇ ನಿಮ್ಹಾನ್ಸ್‌ನ ಇತಿಹಾಸ, ಇಲ್ಲಿನ ಚಿಕಿತ್ಸೆಗಳು, ಸೌಲಭ್ಯಗಳ ಮಾಹಿತಿಯನ್ನು ನೀಡಿದರು.
ಆಸ್ಪತ್ರೆಯ ಪ್ರತಿ ವಾರ್ಡ್‌ಗಳಿಗೂ ಕರೆದುಕೊಂಡು ಹೋಗಿ ರೋಗಿಗಳ ಚಲನವಲನ, ಅವರ ದಿನಚರಿ, ಅವರ ಚಿಕಿತ್ಸಾ ಕ್ರಮಗಳ ಕುರಿತು ತಿಳಿಸಿದರು. ಶಾಕ್‌ಟ್ರಿಟ್ಮೆಂಟ್ ಕುರಿತು ಹೊಂದಿರುವ ಭಯವನ್ನು ಹೋಗಲಾಡಿಸಲು ರೋಗಿಯೊಬ್ಬರಿಗೆ ಚಿಕಿತ್ಸಾ ನೀಡುತ್ತಿರವುದನ್ನು ನೇರವಾಗಿ ತೋರಿಸಿದರು.
ಅಭಿಯಾನದಡಿ ಸುತ್ತಾಟಕ್ಕೆ ಆಗಮಿಸುವ ಸಾರ್ವಜನಿಕರಿಗೆ ನಿಮ್ಹಾನ್ಸ್‌ನಲ್ಲಿರುವ ಬುದ್ಧಿಮಾಂದ್ಯ ಮಕ್ಕಳೇ ಮಾರ್ಗದರ್ಶಕರ ಸಹಾಯದಿಂದ ನಡೆಸುವ ಕೆಫೆಯಲ್ಲಿ ಆತಿಥ್ಯ ನೀಡಿದರು. ಮಕ್ಕಳೇ ತಮ್ಮ ಕೈಯಾರೆ ಸಿದ್ಧಪಡಿಸುವ ವಿವಿಧ ಬಗೆಯ ಕೇಕ್, ಬಿಸ್ಕತ್, ಬ್ರೆಡ್‌ಗಳು, ಜ್ಯೂಸ್‌ಗಳನ್ನು ಸೇವಿಸಿದೆವು. ಜತೆಗೆ ಮಕ್ಕಳು ತಮ್ಮ ಕೈಯಾರೆ ಮಾಡಿರುವ ಮೇಣದ ಬತ್ತಿ, ಇತರೆ ಕಲಾಕೃತಿಗಳು, ತಿನಿಸುಗಳನ್ನು ಖರೀದಿಸಿದರು ಎಂದು ನಡಿಗೆಯಲ್ಲಿ ಭಾಗವಹಿಸಿದ್ದ ಕಾಲೇಜು ವಿದ್ಯಾರ್ಥಿ ಮೋಹನ್ ತಿಳಿಸಿದರು.
ಸಿನಿಮಾಗಳಲ್ಲಿ ತೋರಿಸುವಂತೆ ಹುಚ್ಚರ ಆಸ್ಪತ್ರೆಯಲ್ಲಿ ರೋಗಿಗಳನ್ನು ಕತ್ತಲು ಕೋಣೆಯಲ್ಲಿ ಕೂಡಿ ಹಾಕುತ್ತಾರೆ, ಶಾಕ್ ಟ್ರೀಟ್‌ಮೆಂಟ್ ಕೊಡುತ್ತಾರೆ ಎಂಬ ತಪ್ಪು ಕಲ್ಪನೆಗಳಿದ್ದವು. ಅಂತಹ ಭಯದ ವಾತಾವರಣ ಇಲ್ಲಿಲ್ಲ. ಭೇಟಿ ಕೊಟ್ಟು ಖುದ್ದಾಗಿ ನೋಡಿದಾಗ ಅದೆಲ್ಲ ಸುಳ್ಳು ಎಂದು ತಿಳಿಯಿತು.
-ರಾಜೇಶ್ವರಿ, ಮುರುಗೇಶಪಾಳ್ಯ ನಿವಾಸಿ
ಮಾನಸಿಕ ಚಿಕಿತ್ಸಾ ಕೇಂದ್ರಗಳ ಕುರಿತು ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ದೂರಮಾಡಲು ಇದೊಂದು ಅತ್ಯುತ್ತಮ ಕಾರ್ಯಕ್ರಮ. ಸಾರ್ವಜನಿಕರು ಇದರಲ್ಲಿ ಭಾಗವಹಿಸಿ ತಮ್ಮ ಸಂಶಯಗಳನ್ನು ದೂರಮಾಡಿಕೊಳ್ಳಬಹುದು. ಮಾನಸಿಕ ರೋಗವು ಎಲ್ಲಾ ರೋಗಗಳಂತೆ ಒಂದು ರೋಗ, ಸೂಕ್ತ ಚಿಕಿತ್ಸೆಯಿಂದ ವಾಸಿಯಾಗುತ್ತದೆ ತಿಳಿದುಕೊಳ್ಳಬಹುದು.
-ಪ್ರಸನ್ನ, ಐಟಿ ಉದ್ಯೋಗಿ