ಧಾರವಾಡ: ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಅಗ್ರಗಣ್ಯ ಹೋರಾಟಗಾರರಾಗಿದ್ದ ಅದರಗುಂಚಿ ಶಂಕರಗೌಡರು ಹಾಗೂ ಜಕ್ಕಲಿಯ ದೊಡ್ಡಮೇಟಿ ಅಂದಾನಪ್ಪನವರ ಗೌರವಾರ್ಥ ಸ್ಮಾರಕಗಳನ್ನು ಕೂಡಲೇ ಸ್ಥಾಪಿಸಿ ಅವರಿಗೆ ಸೂಕ್ತ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ನಾಡೋಜ ಡಾ| ಪಾಟೀಲ ಪುಟ್ಟಪ್ಪ ಹೇಳಿದರು.
ನಗರದ ಕವಿಸಂನಲ್ಲಿ ರಾಮು ಮೂಲಗಿ ಸ್ಥಾಪಿಸಿರುವ ಅದರಗುಂಚಿ ಶಂಕರಗೌಡರ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಇಬ್ಬರು ಮಹಾನ್ ದೇಶಭಕ್ತರ ಪುತ್ಥಳಿಗಳನ್ನು ಸ್ಥಾಪಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಮಗ್ರ ಕರ್ನಾಟಕದ ಪ್ರಭಾವಿ ಧುರೀಣರಾಗಿದ್ದ ಈ ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರನ್ನು ಸಮಾಜ, ಸರ್ಕಾರ ಮರೆತಿದ್ದು ವಿಷಾದನೀಯ. ಮೂರು ತಿಂಗಳೊಳಗಾಗಿ ಪುತ್ಥಳಿಗಳು ಸ್ಥಾಪನೆಯಾಗಬೇಕೆಂಬುದು ಸಮಸ್ತ ಕನ್ನಡಿಗರ ಸಂಕಲ್ಪವಾಗಿದ್ದು, ಈ ಸಂಕಲ್ಪ ಸಾಧನೆಗೆ ಉಗ್ರ ಹೋರಾಟ ಮಾಡಲೂ ಸಿದ್ಧನಿದ್ದೇನೆ ಎಂದರು.
ಪಾಪು-ಬೆಲ್ಲದ ಆಯ್ಕೆ: ಶಂಕರಗೌಡ-ಅಂದಾನಪ್ಪ ಅವರ ಸ್ಮಾರಕ ರಚನೆಗಾಗಿ ಡಾ| ಪಾಟೀಲ ಪುಟ್ಟಪ್ಪ ಅವರನ್ನು ಅಧ್ಯಕ್ಷರನ್ನಾಗಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಹೋರಾಟದ ಕ್ರಿಯಾಸಮಿತಿ ರಚಿಸಲಾಗುವುದು ಎಂದು ಕವಿಸಂ ಕೋಶಾಧ್ಯಕ್ಷ ಕೃೃಷ್ಣ ಜೋಶಿ ಪ್ರಕಟಿಸಿದರು.
ಕರ್ನಾಟಕ ಏಕೀಕರಣದಲ್ಲಿ ಶಂಕರಗೌಡರ ಪಾತ್ರದ ಕುರಿತು ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಉಪನ್ಯಾಸ ನೀಡಿ, ಸುಭಾಸಚಂದ್ರ ಬೋಸರ ಕ್ರಾಂತಿಕಾರಿ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಶಂಕರಗೌಡರು ನಂತರ ಮಹಾತ್ಮಾ ಗಾಂಧೀಜಿಯವರ ಸತ್ಯ, ಶಾಂತಿ, ಅಹಿಂಸಾ ತತ್ವಗಳಿಗೆ ಮಾರು ಹೋಗಿ ಆ ತತ್ವಗಳನ್ನು ತಮ್ಮ ಇಡೀ ಜೀವನದಲ್ಲಿ ಅಳವಡಿಸಿಕೊಂಡರು. ಕ್ರಾಂತಿ-ಶಾಂತಿ ಎರಡೂ ಮಾರ್ಗದಲ್ಲಿ ನಡೆದ ಶಂಕರಗೌಡರು ಅಪರೂಪದ ಗಾಂಧೀವಾದಿ ಎಂದರು.
ಅದರಗುಂಚಿ ಶಂಕರಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಡಾ| ಲಿಂಗರಾಜ ಅಂಗಡಿ, ಸುರೇಶಗೌಡ್ರು ಪಾಟೀಲ, ದತ್ತಿದಾನಿ ಡಾ| ರಾಮು ಮೂಲಗಿ ಇದ್ದರು. ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ ಸ್ವಾಗತಿಸಿದರು. ಕೃಷ್ಣ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ| ಅಮೃತಾ ಮಡಿವಾಳ ನಿರೂಪಿಸಿದರು. ಸಿದ್ದು ಹಿರೇಮಠ ವಂದಿಸಿದರು.