ಹೊಸದಿಲ್ಲಿ: ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಷ್ಠಿತ ನವದೆಹಲಿ ವಿಧಾನಸಭಾ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿನ ಕದನಕ್ಕೆ ಸಾಕ್ಷಿಯಾಗುವ ಸಾಧ್ಯತೆಗಳು ಕಂಡು ಬರುತ್ತಿವೆ . ಹಾಲಿ ಶಾಸಕ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮಾಜಿ ಮುಖ್ಯಮಂತ್ರಿಗಳಿಬ್ಬರ ಪುತ್ರರ ವಿರುದ್ಧ ಹಣಾಹಣಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಾಗಿ ಮಾಜಿ ಸಿಎಂ ಗಳಿಬ್ಬರ ಪುತ್ರರೇ ಅಭ್ಯರ್ಥಿಗಳಾಗುವ ಸಾಧ್ಯತೆಗಳು ದಟ್ಟವಾಗಿವೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಪ್ರಕಟಿಸಿದ್ದು, ದೆಹಲಿಯ ಮೂರು ಬಾರಿಯ, ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಅವರನ್ನು ಕಣಕ್ಕಿಳಿಸಿದೆ.
ಬಿಜೆಪಿ ಯಿಂದ ವರ್ಮ?
ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮ ಅವರ ಪುತ್ರ ಪರ್ವೇಶ್ ವರ್ಮ ಅವರು ಪಿಟಿಐಗೆ ಶನಿವಾರ ಹೇಳಿಕೆ ನೀಡಿದ್ದು, ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸುವಂತೆ ಬಿಜೆಪಿ ನಾಯಕರು ಕೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಪಶ್ಚಿಮ ದೆಹಲಿಯ ಮಾಜಿ ಲೋಕಸಭಾ ಸಂಸದ ವರ್ಮ, ಪಕ್ಷ ತಯಾರಿ ನಡೆಸುವಂತೆ ನನ್ನನ್ನು ಕೇಳಿದೆ, ಅಭ್ಯರ್ಥಿಗಳ ಪಟ್ಟಿ ಇನ್ನಷ್ಟೇ ಹೊರಬೀಳಬೇಕಿದೆ’ ಎಂದಿದ್ದಾರೆ.
ಈ ಎಲ್ಲ ವಿಚಾರಗಳ ಕುರಿತು ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ನವದೆಹಲಿ ಕ್ಷೇತ್ರದಿಂದ ಬೇರೆ ಕ್ಷೇತ್ರಕ್ಕೆ ಹೊಗಳಿದ್ದಾರೆ ಎಂಬ ವದಂತಿಗಳನ್ನು ತಳ್ಳಿಹಾಕಿದ್ದಾರೆ. ನಮ್ಮಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಾನು ನವದೆಹಲಿ ಕ್ಷೇತ್ರದಿಂದ ಮತ್ತು ಮುಖ್ಯಮಂತ್ರಿ ಅತಿಶಿ ಕಲ್ಕಾಜಿಯಿಂದ ಸ್ಪರ್ಧಿಸಲಿದ್ದೇವೆ’ ಎಂದು ಹೇಳಿಕೆ ನೀಡಿದ್ದಾರೆ.
2013 ರ ವಿಧಾನಸಭಾ ಚುನಾವಣೆಯಲ್ಲಿ ಹೊಸದಿಲ್ಲಿ ಕ್ಷೇತ್ರದಿಂದ ಅಂದಿನ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರನ್ನು 25,000 ಮತಗಳ ಅಂತರದಿಂದ ಸೋಲಿಸುವ ಮೂಲಕ ಕೇಜ್ರಿವಾಲ್ ದೇಶದ ರಾಜಕೀಯ ರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದರು. 2015 ರಲ್ಲಿ, ಅವರು ಮತ್ತೆ ಹೊಸದಿಲ್ಲಿಯಿಂದ ಬಿಜೆಪಿ ಅಭ್ಯರ್ಥಿಯನ್ನು 31,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿ ಪುನರಾಯ್ಕೆಯಾಗಿದ್ದರು. 2020 ರಲ್ಲೂ ಗೆದ್ದಿದ್ದರು.
ಹೊಸದಿಲ್ಲಿ ಕ್ಷೇತ್ರವು ಒಟ್ಟು 70 ಅಸೆಂಬ್ಲಿ ಸ್ಥಾನಗಳ ಪೈಕಿ ಚಿಕ್ಕದಾಗಿದ್ದು, ಸಂಖ್ಯಾತ್ಮಕವಾಗಿ ಹೇಳುವುದಾದರೆ, ಮತದಾರರಾಗಿ ಸರಕಾರಿ ನೌಕರರು ಪ್ರಾಬಲ್ಯ ಹೊಂದಿದ್ದಾರೆ.