Advertisement

ಸ್ವರ್ಣವಲ್ಲೀಯಲ್ಲಿ ಕ್ಷೇತ್ರೀಯ ವೇದ ಸಮ್ಮೇಳನ; 13ರಿಂದ 15ರವರೆಗೆ ಕಾರ್ಯಕ್ರಮ

05:57 PM Jan 04, 2024 | Team Udayavani |

ಉದಯವಾಣಿ ಸಮಾಚಾರ
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಜ. 13ರಿಂದ 15ರವರೆಗೆ ಮೂರು ದಿನಗಳ ಕಾಲ ದಕ್ಷಿಣ ಭಾರತದ
ಕ್ಷೇತ್ರೀಯ ವೇದ ಸಮ್ಮೇಳನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀರಾಜರಾಜೇಶ್ವರೀ ವಿದ್ಯಾ ಸಂಸ್ಥೆ ಮತ್ತು ಉಜ್ಜಯಿನಿ ಮಹರ್ಷಿ ಸಾಂದೀಪನಿ ರಾಷ್ಟ್ರಿಯ ವೇದವಿದ್ಯಾ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಕಾರ್ಯಕ್ರಮವು ಜ.13ರಂದು ಯತಿಗಳ ದಿವ್ಯ ಸಾನ್ನಿಧ್ಯ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಯಾಗಲಿದೆ.

Advertisement

ಉದ್ಘಾಟನಾ ಸಮಾರಂಭದಲ್ಲಿ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಹಾಗೂ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಅಭಿನವ ಶಂಕರ ಭಾರತೀ ಸ್ವಾಮಿಗಳವರು ಸಾನ್ನಿಧ್ಯ ನೀಡಲಿದ್ದಾರೆ. ಅತಿಥಿಗಳಾಗಿ ಶಾಸಕ ಶಿವರಾಮ ಹೆಬ್ಟಾರ್‌, ಉಜ್ಜಯಿನಿಯ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ| ಪ್ರಫುಲ್ಲಕುಮಾರ ಮಿಶ್ರ, ಕಾರ್ಯದರ್ಶಿ ಪ್ರೊ| ವಿರೂಪಾಕ್ಷ ವಿ. ಜಡ್ಡೀಪಾಲ, ಮಾಜಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಯಲ್ಲಾಪುರದ ಧಾತ್ರೀ ಫೌಂಡೇಶನ್‌ ಅಧ್ಯಕ್ಷ ಶ್ರೀನಿವಾಸ ಭಟ್ಟ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಬೆಂಗಳೂರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಕಾ. ಈ. ದೇವನಾಥನ್‌ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ವೇದಶೋಭಾ -ಶೋಭಾಯಾತ್ರೆ:
ಚತುರ್ವೇದಗಳ ಮಹತ್ವವನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಜ. 13ರಂದು 4ಗಂಟೆಯಿಂದ ಶಿರಸಿ ನಗರದಲ್ಲಿ ವೇದಶೋಭಾ-ಶೋಭಾಯಾತ್ರೆಯನ್ನು ಆಯೋಜಿಸಲಾಗಿದೆ. ಶಿರಸಿಯ ಮಾರಿಕಾಂಬಾ ದೇವಾಲಯದಿಂದ ಆರಂಭಗೊಂಡು ಶಿವಾಜಿ ಚೌಕ, ಸಿ. ಪಿ. ಬಜಾರ್‌, ದೇವಿಕೆರೆ ಮಾರ್ಗವಾಗಿ ಸಾಗಿ ಯೋಗಮಂದಿರದಲ್ಲಿ ಸಮಾಪ್ತಿಗೊಳ್ಳಲಿದೆ.

ಈ ವಿಶಿಷ್ಟ, ವಿನೂತನ ವೇದಮಾತೆಯ ಸೇವಾಕೈಂಕರ್ಯದ ಶೋಭಾಯಾತ್ರೆಯಲ್ಲಿ ಸ್ವರ್ಣವಲ್ಲೀ ಸ್ವಾಮಿಗಳು, ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮಿಗಳು ಮತ್ತು ಸಿದ್ದಾಪುರದ ಶ್ರೀಮನ್ನೆಲೆಮಾವಿನಮಠದ ಶ್ರೀಮಾಧವಾನಂದ ಭಾರತೀ ಸ್ವಾಮಿಗಳು ಸಾನ್ನಿಧ್ಯ ನೀಡಲಿದ್ದಾರೆ.

Advertisement

ವೈದಿಕರು, ವಿದ್ವಾಂಸರು, ವಿದ್ಯಾರ್ಥಿಗಳು, ಮಾತೆಯರು, ವೇದಾಭಿಮಾನಿಗಳು, ಆಸ್ತಿಕ ಮಹನೀಯರು ಸಹಸ್ರಾರು ಸಂಖ್ಯೆಯಲ್ಲಿ
ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ವೇದಪಾರಾಯಣ: ಕ್ಷೇತ್ರೀಯ ವೇದ ಸಮ್ಮೇಳನವು ಮೂರು ದಿನಗಳ ಕಾಲ
ಶ್ರೀ ಸ್ವರ್ಣವಲ್ಲಿಯಲ್ಲಿ ನಡೆಯಲಿದ್ದು, ವೇದಪಾರಾಯಣ, ವಿದ್ವಾಂಸರಿಗೆ ಸಂಮಾನ, ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು
ಮುಂತಾದ ವಿವಿಧ ಆಯಾಮಗಳಲ್ಲಿ ಜರುಗಲಿದೆ. ಜ. 13ರಿಂದ 15ರವರೆಗೆ ಪ್ರತಿದಿನ ಬೆಳಗ್ಗೆ 8:30ರಿಂದ 11ರವರೆಗೆ ಐದು
ರಾಜ್ಯಗಳಿಂದ ಆಮಂತ್ರಿತರಾದ ನೂರಕ್ಕೂ ಹೆಚ್ಚು ವೇದವಿದ್ವಾಂಸರಿಂದ ನಾಲ್ಕು ವೇದಗಳ 8 ಶಾಖೆಗಳ ವೇದ ಪಾರಾಯಣವು ಪ್ರತ್ಯೇಕವಾಗಿ 8 ಸ್ಥಳಗಳಲ್ಲಿ ನಡೆಯಲಿದೆ.

ವೇದಗಳ ಕುರಿತು ವಿಶೇಷ ಜ್ಞಾನ ಜನಸಾಮಾನ್ಯರಿಗೂ ಅರಿವಿಗೆ ಬರುವಂತಾಗಬೇಕು ಎಂಬ ಘನೋದ್ದೇಶದಿಂದ
ಚತುರ್ವೇದಗಳ ಕುರಿತಾದ ಉಪನ್ಯಾಸಗಳ 4 ಗೊಷ್ಠಿಗಳನ್ನು ಆಯೋಜಿಸಲಾಗಿದೆ. ಜ. 13ರಂದು ಬೆಳಗ್ಗೆ 12ರಿಂದ ಮೈಸೂರಿನ ವೇದ ವಿಜ್ಞಾನ ವಿಪ್ಪರಮ್‌ ಸಂಸ್ಥಾಪಕರಾದ ವೇ| ಡಾ| ವಂಶೀಕೃಷ್ಣ ಘನಪಾಠಿಗಳಿಂದ ಕೃಷ್ಣಯಜುರ್ವೇದದ ಕುರಿತು ಜ. 14ರಂದು 11ರಿಂದ 1ರವರೆಗೆ ಹಾಸನದ ವೇ| ಶ್ರೀ ಎಂ. ವಿ. ಕೃಷ್ಣಮೂರ್ತಿ ಘನಪಾಠಿಗಳು ಹಾಗೂ ಬ್ಯಾಡಗಿಯ ವೇ| ಶ್ರೀ ಗೋಪಾಲಕೃಷ್ಣ ಶಿವಪೂಜಿ ಅವರಿಂದ ಋಗ್ವೇದ ಮತ್ತು ಶುಕ್ಲಯಜುರ್ವೇದದ ಕುರಿತು, ಜ. 14ರಂದು 3ರಿಂದ5ರವರೆಗೆ ಮೈಸೂರಿನ ವೇ| ಶ್ರೀ ಸುಬ್ರಹ್ಮಣ್ಯ ಭಟ್ಟ ಹಾಗೂ ಕುಮಟಾದ ವೇ| ಶ್ರೀ ರಮೇಶ ವರ್ಧನ ಅವರಿಂದ ಸಾಮವೇದ ಮತ್ತು ಅಥರ್ವವೇದದ ಕುರಿತು ಉಪನ್ಯಾಸಗಳು ಜರುಗಲಿವೆ. ಜ. 15ರಂದು ಬೆಳಗ್ಗೆ 11:30ರಿಂದ 12:30ರವರೆಗೆ ಮೈಸೂರಿನ ಪ್ರಾಚಾರ್ಯ, ಟಿ. ಎನ್‌. ಪ್ರಭಾಕರ ಅವರಿಂದ ಮಹಾಭಾರತದ ಕುರಿತು ಉಪನ್ಯಾಸವನ್ನು ಸಂಯೋಜಿಸಲಾಗಿದೆ.

ವಿದ್ವಾಂಸರಿಗೆ ಸಂಮಾನ:
ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಋಗ್ವೇದ ವಿದ್ವಾಂಸ ವೇ| ಶ್ರೀ ಗಣೇಶ ಘನಪಾಠಿಗಳನ್ನು ಹಾಗೂ ಸಾಮವೇದ ವಿದ್ವಾಂಸರಾದ ವಿಜಯವಾಡದ ವೇ| ಸುಂದರರಾಮ ಶೌತಿಗಳನ್ನು ಸಂಮಾನಿಸಲಾಗುವುದು. ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಆಹಿತಾಗ್ನಿಗಳಾದ ವೇ| ಶ್ರೀ ಗೋವಿಂದ ಪ್ರಕಾಶ ಘನಪಾಠಿಗಳನ್ನು ಹಾಗೂ ಅಥರ್ವವೇದದ ವಿದ್ವಾಂಸರಾದ ಓರಿಸ್ಸಾದ ಪುರಿಯ ವೇ| ಶ್ರೀ ಕುಂಜಬಿಹಾರೀ ಉಪಾಧ್ಯಾಯರನ್ನು ಸಂಮಾನಿಸಲಾಗುವುದು.

ಜ. 14ರಂದು ಸಾಯಂಕಾಲ 5:30ರಿಂದ ವಿ| ಸುಬ್ರಾಯ ಭಟ್ಟ, ವಿ. ಗೀತಾ ಚಿನ್ನಾಪುರ ಅವರಿಂದ ಭಕ್ತಿಸಂಗೀತ, ಶ್ರೀ ಸ್ವರ್ಣವಲ್ಲಿ
ಮಾತೃವೃಂದದವರಿಂದ ಭಜನಾಮೃತ ಕಾರ್ಯಕ್ರಮ ನಡೆಯಲಿದೆ.

ಜ. 15ರಂದು 3:30ರಿಂದ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದ್ದು, ಸ್ವರ್ಣವಲ್ಲೀ ಶ್ರೀಗಳು, ಕೂಡಲಿ ಶೃಂಗೇರಿ
ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ.

ಅಭ್ಯಾಗತರಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಅನಂತಕುಮಾರ ಹೆಗಡೆ, ಶಾಸಕ ಭೀಮಣ್ಣ ನಾಯ್ಕ ಹಾಗೂ ಉಜ್ಜಯಿನಿಯ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ| ಪ್ರಫುಲ್ಲಕುಮಾರ ಮಿಶ್ರ ಹಾಗೂ ಕಾರ್ಯದರ್ಶಿ ಪ್ರೊ| ವಿರೂಪಾಕ್ಷ ವಿ. ಜಡ್ಡೀಪಾಲ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next