ರಾಮನಗರ: ಧನದಾಹದಿಂದ ಭ್ರೂಣಹತ್ಯೆಯಂತಹ ಪಾಪದ ಕೃತ್ಯಕ್ಕೆ ಸರ್ಕಾರಿ ವೈದ್ಯರೇ ಮುಂದಾಗಿದ್ದಾರಾ…? ಹೌದು ಎನ್ನುತ್ತಿದೆ. ಭ್ರೂಣಹತ್ಯೆ ಮಾಡಲು ವೈದ್ಯರು 45 ಸಾವಿರ ರೂ. ಲಂಚ ಕೇಳಿದ್ದಾರೆ ಎನ್ನಲಾದ ವಿಡಿಯೋ ಕ್ಲಿಪ್ಪಿಂಗ್!.
ಜಿಲ್ಲೆಯಲ್ಲಿ 2022ರ ಮಾರ್ಚ್‌ನಲ್ಲಿ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ಹೆಣ್ಣುಭ್ರೂಣ ಪತ್ತೆಯಾಗಿತ್ತು. 2023ರ ಮೇ ತಿಂಗಳಲ್ಲಿ ಮಾಗಡಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ಹೆಣ್ಣು ಭ್ರೂಣ ಪತ್ತೆಯಾಗಿತ್ತು. ಇದೀಗ ಚನ್ನಪಟ್ಟಣ ತಾಲೂಕಿನ ಕೋಡಂಬಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ಭ್ರೂಣ ಹತ್ಯೆ ಮಾಡುವುದಕ್ಕೆ ಡೀಲಿಂಗ್ ನಡೆಸಿದ್ದಾರೆ ಎಂಬ ವಿಡಿಯೋ ಲೀಕ್ ಆಗಿದ್ದು, ಸರ್ಕಾರಿ ಆಸ್ಪತ್ರೆಗಳು ಭ್ರೂಣ ಹತ್ಯೆಯ ಕರಾಸ್ಥಾನವಾಗಿದೆಯಾ ಎಂಬ ಸಂದೇಹ ಜನರಲ್ಲಿ ಮೂಡುವಂತೆ ಮಾಡಿದೆ.
45 ಸಾವಿರಕ್ಕೆ ಬೇಡಿಕೆ: ತಾಲೂಕಿನ ಕೋಡಂಬಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಪತೆ ಆಲಿಖಾನ್ ಎಂಬವರು ನಡೆಸಿದ್ದಾರೆ ಎನ್ನಲಾದ ಆಡಿಯೋ-ವಿಡಿಯೋ ತುಣುಕು ಲಭ್ಯವಾಗಿದ್ದು, ಇವರೊಂದಿಗೆ ಆಸ್ಪತ್ರೆಯ ನರ್ಸ್, ಗ್ರೂಪ್ ಡಿ.ನೌಕರರು ಶಾಮೀಲಾಗಿರುವುದು ಸಂಭಾಷಣೆಯಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯಲ್ಲಿ ದಂಧೆ ವ್ಯಾಪಕ: ಇತ್ತೀಚೆಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಣ್ಣುಮಕ್ಕಳ ಜನನ ಪ್ರಮಾಣ ರಾಮನಗರ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ಕುಸಿಯುತ್ತಿರುವ ಸಂಗತಿ ಬಹಿರಂಗಗೊಂಡಿತ್ತು. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ಗಮನಹರಿಸುವಂತೆ ಆರೋಗ್ಯ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಈ ವಿಡಿಯೋ ಬಹಿರಂಗಗೊಂಡ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ಜಗದೀಶ್ ಎಂಬವರು, ರಾಜ್ಯ ಮಾನವ ಹಕ್ಕುಗಳ ಆಯೋಗ, ಕರ್ನಾಟಕ ವೈದ್ಯಕೀಯ ಮಂಡಳಿ, ಆರೋಗ್ಯ ಸಚಿವರು, ಲೋಕಾಯುಕ್ತ, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಆದರೆ, ಇನ್ನೂ ಯಾವುದೇ ಕ್ರಮವಿಲ್ಲ. ಇನ್ನು ಬಿಡದಿ ಖಾಸಗಿ ನರ್ಸಿಂಗ್ ಹೋಂ ನಲ್ಲಿ ಈ ವೈದ್ಯ ಅನುಮತಿ ಇಲ್ಲದೆ ಸೇವೆ ಸಲ್ಲಿಸುತ್ತಿರುವ ಬಗ್ಗೆ ಸಹ ದೂರು ಕೇಳಿ ಬಂದಿದ್ದವು. ಇನ್ನು ಈ ಆಸ್ಪತ್ರೆ ಮೇಲೆ ಜಿಲ್ಲಾ ಪಿಎನ್‌ಡಿಸಿ ಜಾಗೃತ ಸಮಿತಿ ಸದಸ್ಯರೂ ದಾಳಿ ಮಾಡಿ ಪರಿಶೀಲಿಸಿದ್ದರು.
ಕಾಯಿದೆ ಏನು ಹೇಳುತ್ತದೆ?: ಸದ್ಯಕ್ಕೆ ಚಾಲ್ತಿಯಲ್ಲಿರುವ ಕಾಯಿದೆ ಪ್ರಕಾರ ಭ್ರೂಣ ಗಂಭೀರತಮವಾದ ಆರೋಗ್ಯ ಸಮಸ್ಯೆ ಎದುರಿಸುತ್ತಿದೆ ಎಂದಾದಲ್ಲಿ ಗರ್ಭಪಾತ ಮಾಡಲು ಅವಕಾಶವಿದೆ. 20 ವಾರಗಳವರೆಗೆ ಭ್ರೂಣಹತ್ಯೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ಪ್ರಕರಣದಲ್ಲಿ ಮದುವೆಯೇ ಆಗದಿರುವವರಿಗೆ ಗರ್ಭಪಾತ ನಡೆಸಲು ವೈದ್ಯರು ಸಮ್ಮತಿ ಸೂಚಿಸಿರುವುದು ಮಾತ್ರವಲ್ಲದೇ, 45ಸಾವಿರಕ್ಕೆ ಬೇಡಿಕೆ ಇಟ್ಟಿರುವುದು, ಸುದೀರ್ಘವಾಗಿ ಅಕ್ರಮಗಳ ಮಾತನಾಡಿ, 15ವರ್ಷದಿಂದಲೂ ಇದೇ ಕೆಲಸ ಮಾಡುತ್ತಿರುವು ದಾಗಿಯೂ ವೈದ್ಯರೇ ಹೇಳಿರುವುದು ದಂಧೆ ಅವ್ಯಾಹತವಾಗಿದೆ ಎಂಬುದಕ್ಕೆ ಸಾಕ್ಷಿಯೊದಗಿಸಿದೆ.
ವಿಡಿಯೋದಲ್ಲಿ ಏನಿದೆ?: ಕೋಡಂಬಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಗ್ರೂಪ್ ಡಿ ನೌಕರ ರವಿ ಎಂಬವರು ಸ್ಕ್ಯಾನಿಂಗ್ ಕಾಫಿಯನ್ನು ನನಗೆ ಕಳುಹಿಸಿ ನಾನು 10 ಸಾವಿರ ರೂ.ಗೆ ಅಭಾಷನ್ ಮಾಡಿಸುತ್ತೇನೆ ಎಂದು ನಂಬಿಸಿ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಾರೆ. ಬಳಿಕ, ಆಸ್ಪತ್ರೆಯಲ್ಲಿ ವೈದ್ಯ ಡಾ.ಪತೆಆಲಿಖಾನ್, ನರ್ಸ್ ಜೆ.ಶೋಭಾ ಮಾತುಕತೆ ನಡೆಸಿ ನಿಮ್ಮ ಮಗಳ ಹೊಟ್ಟೆಯಲ್ಲಿನ ಭ್ರೂಣಕ್ಕೆ 14 ವಾರವಾಗಿದೆ. ಈ ಕಾರಣದಿಂದ 45 ಸಾವಿರ ರೂ. ಖರ್ಚಾಗುತ್ತದೆ ಎಂದು ಹೇಳಿದ್ದಾರೆ. ಈ ಕುರಿತ ಸಂಭಾಷಣೆಯನ್ನೊಳಗೊಂಡ ಸುಮಾರು 20 ನಿಮಿಷಗಳ ವಿಡಿಯೋ ಇದೀಗ ಲೀಕ್ ಆಗಿದೆ.
ವೈದ್ಯರು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಬಗ್ಗೆ ನಮ್ಮ ಇಲಾಖೆಗೆ ದೂರು ಬಂದಿದೆ. ಈ ಸಂಬಂಧ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ವರದಿ ಬಳಿಕ ಮುಂದಿನ ಕ್ರಮ.
– ·ಡಾ.ನಿರಂಜನ್, ಜಿಲ್ಲಾ ಆರೋಗ್ಯಾಧಿಕಾರಿ, ರಾಮನಗರ
-ಸು.ನಾ.ನಂದಕುಮಾರ್