Advertisement
ಈ ಭಾಗದಲ್ಲಿ ಮಠಗಳಲ್ಲಿ ಜಯಂತ್ಯುತ್ಸವ, ಜಾತ್ರಾ ಮಹೋತ್ಸವ ಸೇರಿದಂತೆ ಯಾವುದೇ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಬೇಕಾದರೂ ಮೊದಲು ಸಿದ್ಧಗಂಗಾ ಮಠಕ್ಕೆ ತೆರಳಿ ಶಿವಕುಮಾರ ಮಹಾಸ್ವಾಮಿಗಳ ಮಾರ್ಗದರ್ಶನಪಡೆದು ಬರಲಾಗುತ್ತಿತ್ತು. ಕಳೆದ ಎರಡು ವರ್ಷಗಳ ಹಿಂದೆ ಅನಾರೋಗ್ಯಪೀಡಿತರಾಗುವವರೆಗೂ ಸ್ವತಃ ಶಿವಕುಮಾರ ಮಹಾಸ್ವಾಮಿಗಳೇ ಎಲ್ಲಾ ಕಾರ್ಯಕ್ರಮಗಳಿಗೂ ಬಂದು ನೇತೃತ್ವವಹಿಸಿ ಆಶೀರ್ವಾದ ಮಾಡಿ ಹೋಗುತ್ತಿದ್ದರು.
Related Articles
Advertisement
ಕೊನೆಯ ಭೇಟಿ: 2015ರ ಜನವರಿ 2ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜನ್ಮ ಶತಮಾನೋತ್ಸವ ಸಮಾರಂಭದ ಉದ್ಘಾಟನಾ ಕಾರ್ಯಕ್ರಮವೇ ಮೈಸೂರಿಗೆ ಶಿವಕುಮಾರ ಮಹಾಸ್ವಾಮಿಗಳ ಕೊನೆಯ ಭೇಟಿ. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಆ ಕಾರ್ಯಕ್ರಮಕ್ಕೆ ಶಿವಕುಮಾರ ಸ್ವಾಮೀಜಿ ಅವರನ್ನು ಹೆಲಿಕಾಪ್ಟರ್‌ನಲ್ಲಿ ಕರೆತರಲಾಗಿತ್ತು.
ಪಾದಪೂಜೆಗೆ ಬೇಡಿಕೆ: ಯಾವ ಹಳ್ಳಿಯಲ್ಲಿ ಭಕ್ತರು ಪಾದಪೂಜೆಗೆ ಕರೆದರು ಶಿವಕುಮಾರ ಮಹಾಸ್ವಾಮಿಗಳು ಹೋಗುತ್ತಿದ್ದರು. ದೊಡ್ಡ ಬುದ್ಧಿಯೋರು ಹೋದರೆಂದರೆ ಹಳ್ಳಿಗಳಲ್ಲಿ ಪಾದಪೂಜೆ ಕಾರ್ಯಕ್ರಮವನ್ನೇ ಜಾತ್ರೆಗಳಂತೆ ಆಚರಿಸುತ್ತಿದ್ದರು. ಶಿವಕುಮಾರ ಮಹಾಸ್ವಾಮಿಗಳಿಗೆ 100 ವರ್ಷ ತುಂಬಿದ ನಂತರ ಪಾದಪೂಜೆಗೆ ಬನ್ನಿ , ಹೆಲಿಕಾಪ್ಟರ್‌ನಲ್ಲಿ ಕರೆದೊಯ್ಯುತ್ತೇವೆ ಎಂದು ಬಹಳಷ್ಟು ಜನ ಬೇಡಿಕೆ ಇಡುತ್ತಿದ್ದರು. ಚಾಮರಾಜ ನಗರದ ಬದನಗುಪ್ಪೆಯಲ್ಲಿ ಶಿವಕುಮಾರ ಮಹಾಸ್ವಾಮಿಗಳ ಪಾದಪೂಜೆ ಕಾರ್ಯಕ್ರಮಕ್ಕೆ ಸುಮಾರು 50 ಸಾವಿರ ಜನ ಸೇರಿದ್ದರು.
ಹುಟ್ಟೂರಿಗೆ ಕಾಲಿಟ್ಟಿರಲಿಲ್ಲ ಹಠಯೋಗಿ!: ಕಾಲೇಜು ಶಿಕ್ಷಣದ ಸಂದರ್ಭದಲ್ಲೇ ಸಿದ್ಧಗಂಗಾ ಮಠದ ಒಡನಾಟ ಹೊಂದಿದ್ದ ಪೂರ್ವಾಶ್ರಮದ ಹೆಸರು ಶಿವಣ್ಣ ಅವರನ್ನು ಸ್ವಾಮೀಜಿ ಮಾಡುವುದಾಗಿ ಸಿದ್ಧಗಂಗಾ ಮಠದ ಹಿರಿಯ ಸ್ವಾಮೀಜಿಗಳಾದ ಉದ್ದಾನೇಶ್ವರರು, ಶಿವಣ್ಣ ಅವರ ಮನೆಗೆ ಹೇಳಿ ಕಳುಹಿಸಿದಾಗ ಇವರ ತಂದೆ ಬೈದು ಕಳುಹಿಸಿದ್ದರು. ಈ ವಿಷಯ ತಿಳಿದ ಶಿವಣ್ಣ, ನನ್ನ ಗುರುಗಳಿಗೆ ಅವಮಾನ ಮಾಡಿದ್ದರಿಂದ ಈ ಊರಿಗೇ 25 ವರ್ಷಗಳ ಕಾಲ ಕಾಲಿಡಲ್ಲ ಎಂದು ಶಪಥ ಮಾಡಿದ್ದರು.
ಆದರೆ, ಶಿವಣ್ಣ ಅವರ ತಮ್ಮನ ಮಗ ಗ್ರಾಮದಲ್ಲಿ ಹೊಸ ಮನೆಯನ್ನು ಕಟ್ಟಿ, ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿಗಳಾಗಿದ್ದ ಶಿವಕುಮಾರ ಸ್ವಾಮೀಜಿಯವರನ್ನು ಗೃಹಪ್ರವೇಶಕ್ಕೆ ಕರೆಯಲು ಹೋದಾಗ, ನನ್ನ ಗುರುಗಳಿಗೆ ಅವಮಾನ ಮಾಡಿರುವ ಆ ಊರಿಗೆ ಕಾಲಿಡಲ್ಲ ಎಂದು ಶಪಥ ಮಾಡಿರುವುದಾಗಿ ಹೇಳುತ್ತಾರೆ. ಆದರೆ, ನೀವು ಬರದೇ ನಾನು ಗೃಹಪ್ರವೇಶವನ್ನೇ ಮಾಡುವುದಿಲ್ಲ ಎಂದು ಹಠ ಹಿಡಿದು ಕೂರುತ್ತಾರೆ. ಕಡೆಗೂ ಭಕ್ತರ ಮನವಿ ಮೇರೆಗೆ ಶಿವಕುಮಾರ ಸ್ವಾಮೀಜಿ ಹುಟ್ಟೂರಿಗೆ ಹೋಗಿ ಗೃಹಪ್ರವೇಶದಲ್ಲಿ ಭಾಗಿಯಾಗಿ ಬಂದಿದ್ದರಂತೆ.
ದಸರಾ ಉದ್ಘಾಟನೆ: 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಯನ್ನು ಸಿದ್ಧಗಂಗಾ ಶ್ರೀಗಳು ಚಾಮುಂಡಿಬೆಟ್ಟದಲ್ಲಿ ನೆರವೇರಿಸಿದ್ದರು.
* ಗಿರೀಶ್ ಹುಣಸೂರು