ಅಜ್ಜಂಪುರ: ಬಗ್ಗವಳ್ಳಿ ಸೋಮಶೇಖರ್ ರಾಜು ಅವರು ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ನಿಯೋಜನೆಗೊಂಡಿರುವುದು ಕಾಫಿನಾಡು ಚಿಕ್ಕಮಗಳೂರು ಹಾಗೂ ಸ್ವಗ್ರಾಮ ಬಗ್ಗವಳ್ಳಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಭಾರತೀಯ ಸೇನೆಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಬಿ.ಎಸ್. ರಾಜು ಅವರು ಪ್ರತಿ ವರ್ಷ ತಮ್ಮ ಹುಟ್ಟೂರು ಬಗ್ಗವಳ್ಳಿಗೆ ಕುಟುಂಬ ಸಮೇತರಾಗಿ ಆಗಮಿಸಿ ಗ್ರಾಮದ ಜನರೊಂದಿಗೆ ಸ್ನೇಹಿತರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡು ಯುವಪೀಳಿಗೆಯಲ್ಲಿ ಸೈನ್ಯಕ್ಕೆ ಸೇರುವ, ದೇಶ ಸೇವೆ ಮಾಡುವ ಮನೋಭಾವ ಬೆಳೆಸುವ ಕಾರ್ಯ ಮಾಡುತ್ತಾರೆ.
ಹುಟ್ಟೂರಲ್ಲಿ ಹಬ್ಬದ ವಾತಾವರಣ
ಹುಟ್ಟೂರು ಬಗ್ಗವಳ್ಳಿಯಲ್ಲಿ ಶನಿವಾರ ಹಬ್ಬದ ವಾತಾವರಣ ಮನೆ ಮಾಡಿತ್ತು. ಗ್ರಾಮಸ್ಥರೆಲ್ಲಾ ಕುಟುಂಬದವರೊಡನೆ ಸಹಿ ಹಂಚಿ ಸಂಭ್ರಮಿಸಿದರು. ನಮ್ಮ ಹಳಿ ನಮ್ಮ ಹೆಮ್ಮೆ. ನಮ್ಮ ದೇಶ ನಮ್ಮ ಹೆಮ್ಮೆ ಎಂದು ಭಾರತ ಮಾತೆಗೆ ಜೈಕಾರ ಹಾಕಿ ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್. ರಾಜು ಅವರ ಸಹೋದರ ಪ್ರಭು, ನಮ್ಮ ತಂದೆ ಸೋಮಶೇಖರ್ ಸಿವಿಲ್ ಇಂಜಿನಿಯರ್ ಆಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು ಅವರ ನೇರನುಡಿ, ನಿಷ್ಪಕ್ಷಪಾತ ಮನೋಭಾವ, ಸೇವೆಯ ತುಡಿತಗಳನ್ನು ಚಿಕ್ಕವಯಸ್ಸಿನಲ್ಲಿಯೇ ಮೈಗೂಡಿಸಿಕೊಂಡ ನನ್ನ ಸಹೋದರ ರಾಜು ಇಂದು ದೇಶದ ಸೇನಾ ಉಪ ಮುಖ್ಯಸ್ಥರಾಗಿರುವುದು ಅತ್ಯಂತ ಸಂತಸದ ವಿಷಯ. ಇದು ನಮ್ಮ ಕುಟುಂಬಕ್ಕಷ್ಟೇ ಅಲ್ಲ. ನಮ್ಮ ಗ್ರಾಮ, ನಮ್ಮ ರಾಜ್ಯ, ದೇಶಕ್ಕೆ ಹೆಮ್ಮೆಯ ವಿಷಯ ಎಂದರು.
ನಿವೃತ್ತ ಕರ್ನಲ್ ವರದರಾಜು ಮಾತನಾಡಿ, ಇಂದಿನ ಯುವಪೀಳಿಗೆ ದೇಶ ಸೇವೆಗೆ ಮುಂದಾಗಬೇಕು. ಪೋಷಕರು ತಮ್ಮ ಮಕ್ಕಳಿಗೆ ಕೇವಲ ದುಡಿಮೆಗಾಗಿ ವಿದ್ಯಾಭ್ಯಾಸ ನೀಡದೆ ದೇಶ ಸೇವಾ ಮನೋಭಾವ ಬೆಳೆಸಬೇಕು. ಪ್ರತಿ ಹಳ್ಳಿ- ಹಳ್ಳಿಯಲ್ಲೂ ರಾಜು ಅವರಂತಹ ಸೈನಿಕರಿರಬೇಕು ಎಂದರು.
ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ, ಅಜ್ಜಂಪುರ ಪೊಲೀಸ್ ಠಾಣೆಯ ಪಿಎಸ್‌ಐ ಮಹಂತೇಶ್, ಯುವಕರಾದ ಯಶವಂತ್, ಸಿದ್ದೇಗೌಡ ಇತರರು ಇದ್ದರು.