Advertisement

ಸುಂದರ ಮೌಲ್ಯಗಳ ತರಲಿ ಹಬ್ಬ

01:30 AM Mar 18, 2018 | |

ಯುಗಾದಿ ಹಬ್ಬವು ಸಾಮಾಜಿಕ ಮಹತ್ವವನ್ನೂ ಹೊಂದಿರುವಂಥದ್ದು. ಬೇವು-ಬೆಲ್ಲವು ಮನುಷ್ಯನ ಸುಖ-ದುಃಖಗಳ ಸಂಕೇತವಾಗಿದೆ. ಏರಿಳಿತಗಳ ಬದುಕಿನಲ್ಲಿ ಈ ನೋವು ನಲಿವಿನ ಸಮ ಮಿಶ್ರಣವೇ ಬದುಕಿನ ಸಾರವೆಂಬ ನೆಲೆಯಲ್ಲಿ ಬೇವು ಬೆಲ್ಲವನ್ನು ಸೇವಿಸಲಾಗುತ್ತದೆ.

Advertisement

ಹಬ್ಬಗಳೆಂದರೆ ಸಡಗರ ಸಂಭ್ರಮಗಳನ್ನು ಹೊತ್ತು ತರುವ, ಮನದ ನೋವುಗಳನ್ನೆಲ್ಲಾ ಮರೆಸಿ ನಲಿವಿನ ದೀಪಹೊತ್ತಿಸುವ, ಬಾಂಧವ್ಯದ ಸುಮಧುರತೆಯನ್ನು ಮರು ವ್ಯಾಖ್ಯಾನಿಸುವ ಹಾಗೂ ಸಂಸ್ಕೃತಿ, ಸಂಪ್ರದಾಯ ಮತ್ತು ಆಧ್ಯಾತ್ಮಿಕತೆಯನ್ನು ಒಟ್ಟಾಗಿ ಬೆಸೆಯುವ ಶುಭ ಸಂದರ್ಭ. ಭಾರತೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಹಬ್ಬಗಳಿಗೆ ಎಲ್ಲಿಲ್ಲದ ಪ್ರಾಧಾನ್ಯತೆಯಿದೆ. ಜನರ ಜೀವನದೊಂದಿಗೆ ಅತ್ಯಂತ ಆಪ್ತ ನಂಟನ್ನು ಹೊಂದಿದೆ. ಅಂತಹ ಹಲವು ಹಬ್ಬಗಳಲ್ಲಿ ಯುಗಾದಿ ಹಬ್ಬವು ಮುಂಚೂಣಿಯಲ್ಲಿ ನಿಲ್ಲುತ್ತದೆ. ಆಧುನಿಕತೆಯ ವ್ಯಾಮೋಹಕ್ಕೆ ಬಲಿಯಾಗಿರುವ ಇಂದಿನ ಜನಾಂಗ ಹಬ್ಬಗಳ ಮಹತ್ವ ಹಾಗೂ ಅದರ ಗಾಂಭೀರ್ಯತೆಯನ್ನು ಉಪೇಕ್ಷಿಸುತ್ತಿರುವುದು ತರವಲ್ಲ. ಪಾಶ್ಚಾತ್ಯ ಪ್ರಣೀತ ಆಚರಣೆಗಳನ್ನು, ಅದರ ತಲೆಬುಡ ಗೊತ್ತಿಲ್ಲದಿದ್ದರೂ ಪ್ರತಿಷ್ಠೆಗೆಂಬಂತೆ ಎಲ್ಲಿಲ್ಲದ ಆಸಕ್ತಿಯಿಂದ ಆಚರಿಸಿ ದಾಂಗುಡಿಯೆಬ್ಬಿಸಲು ಮುಂದಾಗು ತ್ತಿರುವವರಿಗೆ ಭಾರತೀಯ ನೆಲದ ಆಚರಣೆಗಳೆಂದರೆ ಏಕೋ ಒಂಥರಾ ನಿರ್ಲಕ್ಷ್ಯಭಾವ. ಇದು ನಿಜಕ್ಕೂ ಆತಂಕಕಾರಿ. ಗ್ರೆಗೋರಿಯನ್‌ ಕ್ಯಾಲೆಂಡರ್‌ ಪ್ರಕಾರ ಹೊಸ ವರ್ಷವನ್ನು ಆಚರಿಸಲು ಇನ್ನಿಲ್ಲದ ತಯಾರಿಯಲ್ಲಿ ನಿರತರಾಗುವ ಅದೆಷ್ಟೋ ಜನಕ್ಕೆ ಯುಗಾದಿ ಕೂಡಾ ಅಂತಹದೇ ಹಬ್ಬ, ಹಿಂದೂ ಪಂಚಾಂಗಗಳ ಪ್ರಕಾರ ನವ ವರುಷದ ಹೊಸ ಉಲ್ಲಾಸವನ್ನು ಮೂಡಿಸುವ ಮಹತ್ವದ ಪರ್ವವೆಂಬ ಅರಿವಿದೆ ಹೇಳಿ? ಹೌದು ಯುಗಾದಿ ಯುಗದ ಆದಿ ಅಂದರೆ ಹೊಸ ವರ್ಷದ ಪ್ರಾರಂಭ.

ಸಾಮಾನ್ಯವಾಗಿ ನಮ್ಮಲ್ಲಿ ಷಷ್ಠ ಬ್ದವನ್ನು ಆಚರಿಸಲಾಗುತ್ತದೆ. ಅಂದರೆ 60 ವರುಷಗಳನ್ನು ಪೂರೈಸಿದವರೆಂದರೆ ಎಲ್ಲಾ ಅರವತ್ತು ಸಂವತ್ಸರಗಳನ್ನು ನೋಡಿದವರು ಎಂಬ ಕಾರಣಕ್ಕೆ ಈ ಷಷ್ಠ ಬ್ದಿ ಆಚರಣೆ ಮಹತ್ತರವೆನಿಸುತ್ತದೆ. ಕಾಲಗಣನೆಯ ಲೆಕ್ಕಾಚಾರಕ್ಕೆ ಅನುಕೂಲವಾಗುವಂತೆ ಗ್ರಹ, ನಕ್ಷತ್ರ, ಋತು ಮಾಸ, ಪಕ್ಷ, ತಿಥಿಗಳಿರುವಂತೆ ಅರವತ್ತು ಸಂವತ್ಸರಗಳ ಒಂದು ಆವೃತ್ತಿಯೂ ಅಸ್ತಿತ್ವದ್ದಲ್ಲಿದೆ. ಅವುಗಳಿಗೆ ಬೇರೆ ಬೇರೆ ಹೆಸರುಗಳೂ ಇವೆ. ಈ ಒಂದು ಸಂವತ್ಸರವೆಂಬುದು ನಾವೆಲ್ಲ ಅನುಸರಿಸುವ ಇಂಗ್ಲಿಷ್‌ ಕ್ಯಾಲೆಂಡರ್‌ನ ಒಂದು ವರ್ಷವಿದ್ದಂತೆ. ಈ ಸಂವತ್ಸರಗಳು ಆರಂಭವಾಗುವುದೇ ಚೈತ್ರ ಮಾಸದ ಶುಕ್ಲ ಪಕ್ಷದದಂದು. ಚೈತ್ರ ಮಾಸದ ಮೊದಲ ಶುಭದಿನವನ್ನು ಯುಗಾದಿಯೆಂದು ಆಚರಿಸುತ್ತೇವೆ. ಕಾಲಗಣನೆಯ ಆಧಾರದ ವ್ಯತ್ಯಾಸಗಳಿಗೆ ಅನುಗುಣವಾಗಿ ಚಾಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ ಎಂಬ ಎರಡು ವಿಧಗಳನ್ನು ಕಾಣಬಹುದು.

ಯುಗಾದಿಯು ಒಂದು ಸಂವತ್ಸರದಿಂದ ಮತ್ತೂಂದಕ್ಕೆ ಹೊರಳುವ ಸಂಧಿ ಕಾಲ. ಪೂರಕವಾಗಿ ಪ್ರಕೃತಿಯೂ ಹೊಸತನದ ಹುರುಪನ್ನು ಮೂಡಿಸುವ ಲಕ್ಷಣಗಳನ್ನು ತಳೆಯುತ್ತದೆ. ಶಿಶಿರ ಋತು ಆರಂಭವಾಗುತ್ತಿರುವಂತೆ ಕ್ರಮೇಣ ತನ್ನ ಹಸಿರುಡುಗೆಯನ್ನು ಕಳಚುವ ಪ್ರಕೃತಿ ಮತ್ತೆ ವಸಂತನ ಆಗಮನವಾಗು ತ್ತಿದ್ದಂತೆ ನಿಧಾನಕ್ಕೆ ಎಳೆ ಚಿಗುರುಗಳ ಮೊಳಕೆಯೊಂದಿಗೆ ಹಸಿರನ್ನು ಉಸಿರಾಡಲಾ ರಂಭಿಸುತ್ತದೆ. ಹೊಸ ಕಳೆಯ ಜೀವಸೆಲೆಯ ಚೈತನ್ಯದೊಂದಿಗೆ ನಳನಳಿಸುವ ಈ ದೃಶ್ಯವೈಭವಕ್ಕೆ ಪ್ರಕೃತಿಯ ಇತರ ಅಂಶಗಳು ಸಾಥ್‌ ನೀಡುವುದರೊಂದಿಗೆ ವಿಶೇಷ ಮೆರುಗನ್ನು ತಂದಿಕ್ಕುತ್ತವೆ. ಪಂಚಾಂಗದ ಲೆಕ್ಕಾಚಾರ ಮತ್ತು ಅದಕ್ಕೆ ಪೂರಕವಾಗಿ ಪ್ರಕೃತಿಯಲ್ಲಿ ಕಂಡುಬರುವ ಬದಲಾವಣೆ ಈ ಎರಡರ ನಡುವೆಯೂ ಸಹಸಂಬಂಧವಿದ್ದು ಇದು, ನವೋಲ್ಲಾಸದ ಹೊಸ ವರ್ಷದ ಪ್ರಾರಂಭವೆನ್ನಲು ಪುಷ್ಟಿಒದಗಿಸುತ್ತದೆ. ಈ ಆಚರಣೆಗೆ ಸಂಬಂಧಿಸಿದಂತೆ ಹಲವಾರು ಪೌರಾಣಿಕ ಆಧಾರಗಳ ಹಿನ್ನೆಲೆಯನ್ನು ನೋಡಬಹುದು. ಬ್ರಹ್ಮ ದೇವ ಜಗತ್ತನ್ನು ಸೃಷ್ಟಿಸಿದ ದಿನ, ಶ್ರೀರಾಮಚಂದ್ರ ಅಯೋಧ್ಯೆಗೆ ಮರಳಿ ರಾಜ್ಯ ಭಾರ ಪುನರಾರಂಭಿಸಿದ ಸ್ಮರಣೀಯ ದಿನ, ಭಗವಂತ ಮತ್ಸಾವತಾರವೆತ್ತಿದ ದಿನ, ಶಾಲಿವಾಹನ ವಿಜಯಿಯಾದ ದಿನ ಹೀಗೆ ಬೇರೆ ಬೇರೆ ಉಲ್ಲೇಖಗಳನ್ನು ನಮ್ಮ ಧರ್ಮಗ್ರಂಥಗಳಿಂದ ಆರಿಸಿ ತೆಗೆಯಬಹುದಾದರೂ ಅವೆಲ್ಲವು ಪ್ರತಿಬಿಂಬಿಸುವುದು ಮತ್ತದೆ ಮರುಹುಟ್ಟು, ಶುಭಾರಂಭ ಹಾಗೂ ಹಳೆಯದರಿಂದ ಬಿಡಿಸಿಕೊಂಡು ಹೊಸತನದತ್ತ ಭರವಸೆಯೊಂದಿಗೆ ಜೀಕುವ ನಿರಂತರತೆ ಹಾಗೂ ಚಲನಾಶೀಲತೆಯ ಹೊಳಹುಗಳನ್ನೆ.

ಆದರೆ ಅದು ಕಾಲಗಣನೆಯ ತಂತುವಿನೊಂದಿಗೆ ಬೆಸೆದು ಕೊಂಡಿದೆ ಅಷ್ಟೇ. ಅದನ್ನು ಕಂಡುಕೊಳ್ಳುವ ಹಾಗೂ ಮುಂದಿನ ತಲೆಮಾರಿಗೆ ದಾಟಿಸುವ ಕೆಲಸಗಳಾಗಬೇಕೆಂದರೆ ಈ ಹಬ್ಬಗಳನ್ನು ಆಚರಿಸುವುದರೊಂದಿಗೆ ಅದರ ಮಹತ್ವವನ್ನು ಇಂದಿನ ಯುವ ಸಮುದಾಯಕ್ಕೆ ಅರುಹುತ್ತಿರಬೇಕು. ಹಬ್ಬಗಳನ್ನು ಅದರ ಮಹತ್ವಪೂರ್ಣ ಹಿನ್ನೆಲೆಗಳ ಬಂಧದಿಂದ ಕಡಿದುಕೊಂಡು ಆಡಂಬರ ಹಾಗೂ ವೈಭೋಗದ ಪ್ರದರ್ಶನಕ್ಕೆಂಬಂತೆ ಆಚರಿಸಿದರೆ ಅದರೆಡೆಗೆ ಮೂಡುವ ಭಾವನೆಯಲ್ಲಿ ಯಾವ ಹೆಚ್ಚುಗಾರಿಕೆಯೂ ಇರುವುದಿಲ್ಲ. ಅದೊಂದು ಸಾಮಾನ್ಯ ಆಚರಣೆಯಾಗಿ ಮುಂದೊಂದು ದಿನ ಜನಮಾನಸ ದಿಂದ ಮಾಸಿ ಹೋದರೂ ಅಚ್ಚರಿಯಿಲ್ಲ. ಯುಗಾದಿಯ ಆಚರಣಾ ಕ್ರಮಕ್ಕೆ ಅದರದೇ ಆದ ವಿಧಿ ವಿಧಾನವಿದೆ. ಎಲ್ಲವನ್ನೂ ಸಂಪೂರ್ಣವಾಗಿ ಅಳವಡಿಸಿಕೊಳ್ಳಲಾಗದಿದ್ದರೂ ಕೆಲವೊಂದಷ್ಟನ್ನಾದರೂ ಅರ್ಥಪೂರ್ಣವಾಗಿ ಯಾವುದೇ ಚ್ಯುತಿಯಿಲ್ಲದಂತೆ ಅನುಸರಿಸ ಬೇಕಾಗಿರುವುದು ಅವಶ್ಯ. ತೈಲಾಭ್ಯಂಜನ, ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸುವುದು, ಪಂಚಾಂಗ ಪಠಣ, ಬೇವು ಬೆಲ್ಲ ಸೇವಿಸುವುದು, ಹೋಮಗಳನ್ನು ನಡೆಸುವುದು, ಯಥಾನುಶಕ್ತಿ ದಾನ ನೀಡುವುದು, ಧರ್ಮ ಧ್ವಜವನ್ನೇರಿಸುವುವದು, ಹೊಸ ಉಡುಪುಗಳನ್ನು ಧರಿಸುವುದು, ವಿಶೇಷ ಅಡುಗೆಯನ್ನು ತಯಾರಿಸಿ ಎಲ್ಲರೂ ಒಟ್ಟಾಗಿ ಬೆರೆತು ಊಟ ಮಾಡುವುದು ಹೀಗೆ ಈ ಹಬ್ಬದ ಆಚರಣಾ ಕ್ರಮವು ಇಂಥ ಹಲವಾರು ಅಂಶಗಳನ್ನು ತನ್ನೊಳಗೆ ಅಡಕವಾಗಿಸಿಕೊಂಡಿದೆ. ಇದು ಪ್ರಾದೇಶಿಕವಾಗಿ ಭಿನ್ನವಾಗಿದ್ದರೂ ಬಹುತೇಕ ಅಂತಃಸತ್ವದಲ್ಲಿ ಮಾತ್ರ ಸಾಮ್ಯತೆಯನ್ನು ಕಾಣಬಹುದು. ಯುಗಾದಿ ಹಬ್ಬವು ಸಾಮಾಜಿಕ ಮಹತ್ವವನ್ನೂ ಹೊಂದಿರುವಂತದ್ದು.ಬೇವು- ಬೆಲ್ಲವು ಮನುಷ್ಯನ ಸುಖ-ದುಃಖಗಳ ಸಂಕೇತ. ಏರಿಳಿತಗಳ ಬದುಕಿನಲ್ಲಿ ಈ ನೋವು ನಲಿವಿನ ಸಮ ಮಿಶ್ರಣವೇ ಬದುಕಿನ ಸಾರವೆಂಬ ನೆಲೆಯಲ್ಲಿ ಬೇವು ಬೆಲ್ಲವನ್ನು ಸೇವಿಸ ಲಾಗುತ್ತದೆ. ಇದು ಬೆಲ್ಲದ ಸಿಹಿಯೊಂದಿಗೆ ಬೇವಿನ ಕಹಿಯನ್ನು ಮರೆಸುವ ಮೂಲಕ ಜೀವನದ ಸವಿಯನ್ನು ಹೆಚ್ಚಿಸಿಕೊಳ್ಳಬಹುದೆಂಬ ಉದಾತ್ತ ತತ್ವವನ್ನು ಪಸರಿಸುತ್ತದೆ. ಎಲ್ಲರೂ ಬೆರೆತು ಬೀರುಚೆಂಡು, ಕಬಡ್ಡಿಯಂತಹ ಜಾನಪದ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪರಸ್ಪರ ಮನುಷ್ಯನ ಬದುಕಿಗೆ ಬೇಕಾದ ಸುಂದರ ಮೌಲ್ಯಗಳನ್ನು ಬೆಳೆಸುವ ಹಬ್ಬ ಈ ಯುಗಾದಿ. ಏಳು-ಬೀಳು, ಸುಖ-ಕಷ್ಟ, ಪಾಪ-ಪುಣ್ಯ, ನೋವು-ನಲಿವು, ಸೋಲು-ಗೆಲುವು, ಹಳೆತನ-ಹೊಸತನ ಎಲ್ಲವುಗಳನ್ನೂ ಅತ್ಯಂತ ಸಾಮರಸ್ಯ ಹಾಗೂ ಸೌಹಾರ್ದತೆಯಿಂದ ಸ್ವೀಕರಿಸುವುದರೊಂದಿಗೆ ಬದುಕಿನ ಒಟ್ಟಂದವನ್ನು ಹೆಚ್ಚಿಸಿಕೊಳ್ಳುವ ಉತ್ಸಾಹದ ಕುಡಿಯನ್ನು ಮಾನವನೆದೆಯಲ್ಲಿ ಊರುವುದೇ ಈ ಹಬ್ಬಗಳ ಮೂಲ ಆಶಯ.

Advertisement

    ಮಾವಿನ ಬೇವಿನ ತೋರಣಕಟ್ಟು
    ಬೇವು ಬೆಲ್ಲಗಳನೊಟ್ಟಿಗೆ ಕುಟ್ಟು
    ಜೀವನವೆಲ್ಲಾ ಬೇವೂ ಬೆಲ್ಲ
    ಎರಡೂ ಸವಿವವನೆ ಕಲಿ ಮಲ್ಲ|

ಎಂಬ ಕುವೆಂಪುರವರ ಸಾಲುಗಳಂತೆ ಬದುಕಿಗೆ ನವ ಚೈತನ್ಯದ ತೋರಣ ಕಟ್ಟುವುದರೊಂದಿಗೆ ಹೊಸ ಸಂವತ್ಸರವನ್ನು ಸಂಭ್ರಮದಿಂದ ಸ್ವಾಗತಿಸೋಣ. ತಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಸಂದೇಶ್‌ ಎಚ್‌.ನಾಯ್ಕ… 

Advertisement

Udayavani is now on Telegram. Click here to join our channel and stay updated with the latest news.

Next