Advertisement
ಇತ್ತೀಚಿನ ಕೆಲವು ವರ್ಷಗಳಲ್ಲಿ ಫಲವತ್ತತೆ ದರ ಕುಸಿತದಿಂದ ಎಚ್ಚೆತ್ತುಕೊಂಡಿರುವ ಹಲವು ರಾಷ್ಟ್ರಗಳು ಮಕ್ಕಳನ್ನು ಹೆರಲು ನಾನಾ ಆಫರ್‌ಗಳನ್ನು ನೀಡುತ್ತಿವೆ. ಜನಸಂಖ್ಯೆಯು ಅಭಿವೃದ್ಧಿಗೆ ಹೇಗೆ ಮಾರಕವೋ ಹಾಗೆಯೇ ಪೂರಕವೂ ಹೌದು. ಜನಸಂಖ್ಯೆ ನಿಯಂತ್ರಣವನ್ನು ಸಮತೋ ಲನದಲ್ಲಿಟ್ಟುಕೊಳ್ಳಬೇಕು. ತೀರಾ ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಮುಂದಾದರೆ, ದೇಶದಲ್ಲಿ ಯುವಕರ ಬದಲಿಗೆ ವಯಸ್ಸಾದವರ ಸಂಖ್ಯೆಯೇ ಹೆಚ್ಚಾಗುತ್ತದೆ.
ಯುದ್ಧದಿಂದ ಬಸವಳಿಯುತ್ತಿರುವ ರಷ್ಯಾದಲ್ಲಿ ವರ್ಷ ದಿಂದ ವರ್ಷಕ್ಕೆ ಜನನ ದರ ಕುಸಿಯುತ್ತಿದೆ. ಕಳೆದ ವರ್ಷ ಫಲ ವತತ್ತೆ ದರ ಪ್ರತಿ ಮಹಿಳೆಗೆ 1.826ರಷ್ಟಿತ್ತು. ಹಾಗಾಗಿ, ರಷ್ಯಾ ಹಾಗೂ ವಿವಿಧ ಪ್ರಾಂತೀಯ ಸರಕಾರಗಳು ಮಕ್ಕಳನ್ನು ಹೆರಲು ವಿಶೇಷ ಆಫರ್ ನೀಡುತ್ತಿವೆ. 2022ರಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು 10 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವ ತಾಯಂದಿರಿಗೆ 13 ಲಕ್ಷ ರೂ. ನಗದು ಪುರಸ್ಕಾರ ಘೋಷಿಸಿದ್ದರು.
Related Articles
Advertisement
2. ಚೀನ: 3 ಮಕ್ಕಳ ಹೆರಲು ಅವಕಾಶಹೆಚ್ಚುತ್ತಿರುವ ಜನಸಂಖ್ಯೆ ತಡೆಗೆ ಚೀನ ಕಟ್ಟುನಿಟ್ಟಾಗಿ 2 ಮಗು ನೀತಿಯನ್ನು ಜಾರಿಗೊಳಿಸಿತ್ತು. ಆದರೆ, ಈಗ ಚೀನದಲ್ಲಿ ವಯಸ್ಸಾದವರ ಸಂಖ್ಯೆಯೇ ಹೆಚ್ಚುತ್ತಿದೆ. ಪರಿಣಾಮ ಚೀನ ಹಾಗೂ ಇತರ ಪ್ರಾಂತೀಯ ಸರಕಾರಗಳು ಮಕ್ಕಳನ್ನು ಹೆರಲು ದಂಪತಿಗಳಿಗೆ ವಿಶೇಷ ಆಫರ್‌ಗಳನ್ನು ನೀಡುತ್ತಿವೆ. ಅಲ್ಲದೇ 3 ಮಕ್ಕಳನ್ನು ಹೆರಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳನ್ನು ಹೆರುವ ದಂಪತಿಗೆ 3.50 ಲಕ್ಷ ರೂ. ಸಬ್ಸಿಡಿ ನೀಡಲಾಗುತ್ತದೆ. ಜತೆಗೆ, ಕೆಲವು ರಾಜ್ಯಗಳಲ್ಲಿ 2 ಮತ್ತು 3ನೇ ಮಗು ಮಾಡಿಕೊಂಡರೆ ಹೆಚ್ಚುವರಿಯಾಗಿ 51 ಸಾವಿರ ಪ್ರೋತ್ಸಾಹಧನವಿದೆ. ಜತೆಗೆ ಮಗು ಆರೈಕೆಗೆ ಅನೇಕ ಕ್ರಮಗಳನ್ನು ಘೋಷಿಸಲಾಗಿದೆ. ಚೀನದಲ್ಲಿ ಸದ್ಯ 141 ಕೋಟಿ ಜನರಿದ್ದಾರೆ. 3. ಇಟಲಿ: ದಂಪತಿಗೆ 70,000 ರೂ.
ವಯಸ್ಸಾದವರು ಹೆಚ್ಚಿರುವ ದೇಶಗಳ ಪೈಕಿ ಇಟಲಿಯು ಪ್ರಮುಖ ರಾಷ್ಟ್ರ. 2024ರಲ್ಲಿ ಈ ದೇಶದಲ್ಲಿ ಫಲವತ್ತತೆ ದರ ಪ್ರತೀ 1,000 ಮಹಿಳೆಯರಲ್ಲಿ 7.026ರಷ್ಟಿತ್ತು(ಪ್ರತೀ ಮಹಿಳೆಗೆ 1.3 ಮಗು). 2015ರಿಂದಲೇ ಇಟಲಿಯಲ್ಲಿ ಮಕ್ಕಳ ಪೋಷಣೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತದೆ. ಪ್ರತೀ ಮಗುವಿಗಾಗಿ ದಂಪತಿಗೆ 70,000 ರೂ. ನೀಡಲಾಗುತ್ತದೆ. ಜತೆಗೆ ಅನೇಕ ಪ್ರಯೋಜನಗಳನ್ನು ನೀಡಲಾಗುತ್ತದೆ. ಇಷ್ಟಾಗಿಯೂ ಜನಸಂಖ್ಯೆ ಹೆಚ್ಚಳ ಆಗಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಇಟಲಿಯಲ್ಲಿ 5.93 ಕೋಟಿ ಜನಸಂಖ್ಯೆ ಇದೆ. 4. ಜಪಾನ್: ಮಗು ಆರೈಕೆಗೆ 32,000 ರೂ.!
ಜಪಾನ್ ದೇಶದಲ್ಲಿ ಮಕ್ಕಳ ಜನನ ದರ ವರ್ಷದಿಂದ ವರ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ.ಹಾಗಾಗಿ, ಕುಟುಂಬ ವಿಸ್ತರಣೆಗೆ ಅನೇಕ ಉತ್ತೇಜನ ನೀಡಲಾಗುತ್ತದೆ. ಮಹಿಳೆಯರಿಗೆ ಸಂಬಳ ಸಹಿತ ಮಾತೃತ್ವ ರಜೆ ನೀಡುವುದರ ಜತೆ 12 ವರ್ಷಗಳವರೆಗೆ ಮಗುವಿನ ಆರೈಕೆಗಾಗಿ ಪ್ರತಿ ತಿಂಗಳು ಭತ್ತೆ ನೀಡಲಾಗುತ್ತದೆ. ಸಿಂಗಲ್ ಪೇರೆಂಟ್‌ಗೆ 21,000 ರೂ.ನಿಂದ 32,000 ರೂ.ವರೆಗೂ ಮಾಸಿಕ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. 2023ರಲ್ಲಿ ಜಪಾನ್‌ನಲ್ಲಿ ಜನನ ದರ ಕನಿಷ್ಠ 1.20ಕ್ಕೆ ಇಳಿಕೆಯಾಗಿದೆ. ಸದ್ಯ 12.37 ಕೋಟಿ ಜನರಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ಮಕ್ಕಳ ಜನನ ದರ 1.12ರಷ್ಟಿದ್ದು, ಹೆಚ್ಚು ಮಕ್ಕಳನ್ನು ಹೆರಲು ಆಫರ್ ನೀಡಲಾಗುತ್ತಿದೆ. ಮಕ್ಕಳ ಆರೈಕೆಗೆ ಪ್ರೋತ್ರಾಹಧನವಾಗಿ ಪ್ರತೀ ತಿಂಗಳೂ 41,000ರೂ. ನೀಡುವುದರ ಜತೆಗೆ ಪ್ರತೀ ತಿಂಗಳ 3ನೇ ಬುಧವಾರ ಉದ್ಯೋಗಿಗಳಿಗೆ ಮನೆಗೆ ಬೇಗನೆ ಹೋಗಲು ಅವಕಾಶವನ್ನು ನೀಡಲಾಗುತ್ತಿದೆ. ಮಕ್ಕಳನ್ನು ಪಡೆದುಕೊಳ್ಳುವ ಪೋಷಕರಿಗೆ 18 ತಿಂಗಳು ಮಾತೃತ್ವ ರಜೆ ನೀಡಲಾಗುತ್ತದೆ. ಕೊರಿಯಾದಲ್ಲೀಗ 5.17 ಕೋಟಿ ಜನಸಂಖ್ಯೆ ಇದೆ. 6.ಟರ್ಕಿ: ತಾಯಿಗೆ ಬಂಗಾರದ ನಾಣ್ಯ
ಟರ್ಕಿ ದೇಶದಲ್ಲೂ ಜನಸಂಖ್ಯೆ ಕ್ಷೀಣಿಸುತ್ತಿದೆ. ಹಾಗಾ ಗಿಯೇ ಅಲ್ಲಿನ ಅಧ್ಯಕ್ಷರು ಮೊದಲ ಬಾರಿಗೆ ಮಗು ಹೆರುವ ತಾಯಿಗೆ ಬಂಗಾರದ ನಾಣ್ಯದ ಆಫರ್ ಅನ್ನು 2015ರಲ್ಲಿ ಘೋಷಿಸಿದ್ದಾರೆ. ಅಲ್ಲದೇ ತಾಯಂದಿರು ಅರೆಕಾಲಿಕ ಕೆಲಸ ಮಾಡಲು ಅವಕಾಶ ಮತ್ತು ಅದಕ್ಕಾಗಿ ಸರಕಾರದಿಂದಲೇ ಹಣ ಪಾವತಿಸಲಾಗುತ್ತಿದೆ. ಜತೆಗೆ ಇನ್ನೂ ಅನೇಕ ಪ್ರೋತ್ಸಾಹಕಾರಿ ಕ್ರಮಗಳನ್ನು ಘೋಷಿಸಿದ್ದಾರೆ. ಟರ್ಕಿಯಲ್ಲಿ 8.74 ಕೋಟಿ ಜನರಿದ್ದಾರೆ. 7. ನ್ಯೂಜಿಲ್ಯಾಂಡ್: 1 ವರ್ಷ ಭತ್ತೆ
ಜನಸಂಖ್ಯೆಯ ಹೆಚ್ಚಳ ಮಾಡುವುದಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿರುವ ನ್ಯೂಜಿಲ್ಯಾಂಡ್, ಮಕ್ಕಳನ್ನು ಹೊಂದುವ ಪೋಷಕರಿಗೆ ಸಾಕಷ್ಟು ಪ್ರೋತ್ಸಾಹದಾಯಕ ಕ್ರಮಗಳನ್ನು ಘೋಷಿಸುತ್ತಿದೆ. ಪ್ರತೀ ಕುಟುಂಬವು, ಒಂದು ವರ್ಷದವರೆಗೆ ಪ್ರತೀ ಮಗು ಆರೈಕೆ ಭತ್ತೆ ಪಡೆಯಲು ಅರ್ಹವಾಗಿರುತ್ತದೆ. ಇದು ಕುಟುಂಬದ ಆರ್ಥಿಕ ಸ್ಥಿತಿಯನ್ನಾಧರಿಸುತ್ತದೆ. ಈ ಪ್ರೋತ್ಸಾಹವನ್ನು 3 ವರ್ಷದವರೆಗೂ ವಿಸ್ತರಿಸಲು ಅವಕಾಶವಿದೆ. ನ್ಯೂಜಿಲೆಂಡ್ ಫಲವತ್ತತೆ ದರ 2022ರಲ್ಲಿ ಪ್ರತಿ ಮಹಿಳೆಗೆ 1.66ರಷ್ಟಿದೆ. ಸದ್ಯ 52.13 ಲಕ್ಷ ಜನಸಂಖ್ಯೆ ಇದೆ. 8.ಸ್ವೀಡನ್: ಮಾತೃತ್ವ, ಪಿತೃತ್ವ ರಜೆ
ಅತ್ಯುತ್ತಮ ಮಕ್ಕಳ ಆರೈಕೆ ಮತ್ತು ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯಕ್ಕೆ ಸ್ವೀಡನ್ ಹೆಚ್ಚು ಹೆಸರುವಾಸಿಯಾಗಿದೆ. ಮಕ್ಕುಳು ಮತ್ತು ಕುಟುಂಬಗಳಿಗಾಗಿ ಸ್ವೀಡನ್ ಪ್ರತೀ ವರ್ಷ ತನ್ನ ಜಿಡಿಪಿಯ ಶೇ.3ರಷ್ಟು ವೆಚ್ಚ ಮಾಡುತ್ತದೆ. 2024ರಲ್ಲಿ ಸ್ವೀಡನ್ ಫಲವತ್ತತೆ ದರ ಪ್ರತೀ ಮಹಿಳೆಗೆ 1.842ರಷ್ಟಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಚೂರು ಕಡಿಮೆಯಾಗಿದೆ. ಹಾಗಾಗಿ, ಮಾತೃತ್ವ ಮತ್ತು ಪಿತೃತ್ವ ರಜೆ ನೀಡಲಾಗುತ್ತದೆ. ಸ್ವೀಡನ್ ಜನಸಂಖ್ಯೆ 1.06 ಕೋಟಿ. 9.ಕೆನಡಾ: ವರ್ಷಕ್ಕೆ 6.69 ಲಕ್ಷ ರೂ.!
ಕೆನಡಾದಲ್ಲೂ ಜನಸಂಖ್ಯೆಯ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ. 2024ರ ಲೆಕ್ಕಾಚಾರ ಪ್ರಕಾರ ಜನನ ದರ ಪ್ರತೀ 1,000 ಮಹಿಳೆಯರಲ್ಲಿ 10.006ರಷ್ಟಿದೆ. ಹಾಗಾಗಿ ಮೊದಲಿನಿಂದಲೂ ಕೆನಡಾದಲ್ಲಿ ಮಕ್ಕಳ ಆರೈಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತದೆ. ಅದರಲ್ಲೂ ಅಂಗವಿಕಲ
ಮಕ್ಕಳಿದ್ದರೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. 6 ವರ್ಷ ವಯಸ್ಸಿನೊಳಗಿನ ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಮಕ್ಕಳ ಆರೈಕೆಗಾಗಿ ವಾರ್ಷಿಕ 6.69 ಲಕ್ಷ ರೂ. ನೀಡಲಾಗುತ್ತದೆ. ಸದ್ಯ 4.14 ಕೋಟಿ ಜಸಂಖ್ಯೆ ಇದೆ. ಕೊಡವರು ಹೆಚ್ಚು ಮಕ್ಕಳನ್ನು ಹೆತ್ತರೆ 1 ಲಕ್ಷ ರೂ.ವರೆಗೆ ಬಹುಮಾನ!
ಕೇವಲ ವಿದೇಶಗಳಷ್ಟೇ ಅಲ್ಲ ನಮ್ಮ ರಾಜ್ಯದಲ್ಲೂ ಮಕ್ಕಳನ್ನು ಹೆರಲು ಆಫರ್ ನೀಡಿರುವ ಸುದ್ದಿಗಳಿವೆ. ಕೊಡವರ ಸಂಖ್ಯೆ ಹೆಚ್ಚಿಸಲು ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಕೊಡವ ಸಮಾಜವು, ಹೆಚ್ಚು ಮಕ್ಕಳನ್ನು ಹೆರುವ ಪೋಷಕರಿಗೆ 25,000 ರೂ.ನಿಂದ 1 ಲಕ್ಷ ರೂ.ವರೆಗೂ ಬಹುಮಾನ ನೀಡುವುದಾಗಿ ಘೋಷಿಸಿತ್ತು. ಮೂರ್ನಾಲ್ಕು ಮಕ್ಕಳನ್ನು ಹೊಂದಿರುವ ಕುಟುಂಬಗಳನ್ನು ಗುರುತಿಸಿ ಸಮ್ಮಾನ ಕೂಡ ಮಾಡಿದೆ. ದಕ್ಷಿಣ ಭಾರತೀಯರ ಸಂಖ್ಯೆ ಹೆಚ್ಚಳಕ್ಕೆ ನಾಯಕರ ಆಗ್ರಹ
ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಜನನ ದರ ಕಡಿಮೆ ಇದ್ದು, ವಯಸ್ಸಾದವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ, ದಕ್ಷಿಣ ಭಾರತದ ರಾಜ್ಯಗಳ ಜನಸಂಖ್ಯೆ ಹೆಚ್ಚಾಗ ಬೇಕು. ಹೆಚ್ಚು ಮಕ್ಕಳನ್ನು ಹೊಂದುವ ಕುಟುಂಬಗಳಿಗೆ ಪ್ರೋತ್ಸಾಹಧನ ಸೇರಿದಂತೆ ಶಾಸನಾತ್ಮಕ ಬೆಂಬಲ ನೀಡಬೇಕು ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಹೇಳಿದ್ದರು. ಇದಕ್ಕೆ ತ.ನಾಡು ಸಿಎಂ ಎಂ.ಕೆ.ಸ್ಟಾಲಿನ್ ಕೂಡ ದನಿಗೂಡಿಸಿದ್ದರು. – ಮಲ್ಲಿಕಾರ್ಜುನ ತಿಪ್ಪಾರ