Advertisement

ಪಟ್ಟು ಬಿಡದ ಬಿಸಿಯೂಟ ಕಾರ್ಯಕರ್ತೆಯರು

11:28 AM Feb 09, 2018 | Team Udayavani |

ಬೆಂಗಳೂರು: ಸುಪ್ರೀಂ ಕೋರ್ಟ್‌ ಆದೇಶದಂತೆ ಕನಿಷ್ಠ ವೇತನ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟದ ಕಾರ್ಯಕರ್ತೆಯರು ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಮುಂದುವರಿದಿದೆ.

Advertisement

ಸರ್ಕಾರದಿಂದ ಲಿಖತ ಆದೇಶ ಅಥವಾ ಮುಖ್ಯಮಂತ್ರಿಗಳು ಸೂಕ್ತ ಭರವಸೆ ನೀಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಕಾರ್ಯಕರ್ತೆಯರು ಹಠಕ್ಕೆ ಬಿದ್ದಿದ್ದಾರೆ. ಇದರಿಂದಾಗಿ ಶಾಲೆಗಳಲ್ಲಿ ಬಿಸಿಯೂಟ ಸಿದ್ಧಪಡಿಸುವ ಕಾರ್ಯಕರ್ತೆಯರೇ ಇಲ್ಲದಾಗಿದೆ. ಮಕ್ಕಳ ಬಿಸಿಯೂಟ ತಯಾರಿಕೆ ಮತ್ತು ವಿತರಣೆಗಾಗಿ ಶಾಲಾ ಶಿಕ್ಷಕರು ತಾತ್ಕಾಲಿಕ ವ್ಯವಸ್ಥೆಗೆ ಪರದಾಡಬೇಕಾಯಿತು.

ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ 1.18 ಲಕ್ಷ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಗೌರವ ಸಂಭಾವನೆ ಹೆಸರಿನಲ್ಲಿ ಸರ್ಕಾರ ಅಲ್ಪಮೊತ್ತ ನೀಡುತ್ತಿದೆ. ಈಗ ನೀಡುತ್ತಿರುವ 2 ಸಾವಿರ ರೂ.ಗಳಿಗೆ ಇನ್ನೂ 3 ಸಾವಿರ ಸೇರಿಸಿ ಐದು ಸಾವಿರ ರೂ. ನೀಡಬೇಕು. ಈ ಸಂಬಂಧ ಸರ್ಕಾರದಿಂದ ಲಿಖೀತ ಆದೇಶ ಬರಬೇಕು ಅಥವಾ ಮುಖ್ಯಮಂತ್ರಿ ಸಭೆ ಕರೆದು ಭರವಸೆ ನೀಡಬೇಕು.

ಇಲ್ಲದಿದ್ದರೆ ಪ್ರತಿಭಟನೆ ಹೀಗೆ ಮುಂದುವರಿಯಲಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತ ತಿಳಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು, ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಹಾಗೂ ಪ್ರೌಢಶಿಕ್ಷಣ ಪರೀಕ್ಷಾ  ಮಂಡಳಿಯ ನಿರ್ದೇಶಕರು ಗುರುವಾರ ಸಂಜೆ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಚರ್ಚೆ ನಡೆಸಿದ್ದಾರೆ.

ವೇತನ ಹೆಚ್ಚಿಸುವ ಸಂಬಂಧದ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಆದರೆ, ಯಾವುದೇ ಭರವಸೆಯನ್ನು ಲಿಖೀತ ರೂಪದಲ್ಲಿ ನೀಡಿಲ್ಲ. ಹೀಗಾಗಿ ಪ್ರತಿಭಟನೆ ಹಿಂಪಡೆಯಲು ಸಾಧ್ಯವಿಲ್ಲ ಎಂದು ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದೇವೆ ಎಂದರು.

Advertisement

ವಿಧಾನಸೌಧ ಮುತ್ತಿಗೆಗೆ ಯತ್ನ: ಅಕ್ಷರ ದಾಸೋಹ ಬಿಸಿಯೂಟ ತಯಾರಕ ಕಾರ್ಯಕರ್ತೆಯರು ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮೆಜೆಸ್ಟಿಕ್‌ನಿಂದ ಫ್ರೀಡಂ ಪಾರ್ಕ್‌ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ವಿಧಾನಸೌಧ ಮುತ್ತಿಗೆಗೆ ಮುಂದಾದಾಗ ಕಾರ್ಯಕರ್ತೆಯರನ್ನು ಮಹಾರಾಣಿ ಕಾಲೇಜು ಮುಂಭಾಗವೇ ತಡೆದ ಪೊಲೀಸರು ಪುನಃ ಫ್ರೀಡಂ ಪಾರ್ಕ್‌ಗೆ ಕಳುಹಿಸಿದರು.

ವಿವಿಧ ಸಂಘಟನೆಗಳ ಪ್ರತಿಭಟನೆ: ರಾಜ್ಯ ಸರ್ಕಾರಿ ಕಂದಾಯ ಇಲಾಖೆ ಗ್ರಾಮ ಸಹಾಯಕರು ತಮ್ಮನ್ನು ಡಿ ದರ್ಜೆ ನೌಕರರೆಂದು ಪರಿಗಣಿಸಿ ವೇತನ ಪರಿಷ್ಕರಣೆ ಮಾಡಬೇಕೆಂದು ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ರಾಜ್ಯ ಮೂಗ ಮತ್ತು ಕಿವುಡ ಕ್ಷೇಮಾಭಿವೃದ್ಧಿ ಸಂಘದವರು ತಮಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಹಾಗೂ ಸ್ವಯಂ ಉದ್ಯೋಗ ಮಾಡಲು ಸಾಲ ಸೌಲಭ್ಯ ಒದಗಿಸಬೇಕು ಎಂದು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದರ ಜತೆಗೆ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಕೆಲವು ಸಂಘಟನೆಗಳು ಪ್ರತಿಭಟನೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next