Advertisement

ನುಚ್ಚು ನೂರಾದ ರೈತ ಕುಟುಂಬಗಳ ಬದುಕು

03:17 PM Aug 13, 2019 | Suhan S |

ತೀರ್ಥಹಳ್ಳಿ: ಮಳೆ ನಿಂತರೂ ಆ ಗ್ರಾಮದ ನೊಂದ ರೈತರ ನೋವಿನ ಹನಿ ಇನ್ನೂ ನಿಂತಿಲ್ಲ… ಆ ಊರಿನ ಚಿತ್ರಣ ನೋಡಿದರೆ ಎಂತವರ ಮನವೂ ಕಲಕುತ್ತದೆ. ಭಾರೀ ಮಳೆಗೆ ಭೂ ಕುಸಿತದಿಂದ ಉಂಟಾದ ಅನಾಹುತಕ್ಕೆ ಗದ್ದೆ-ತೋಟಗಳು ನುಚ್ಚುನೂರಾದ ಹೆಗಲತ್ತಿ ಗ್ರಾಮದ ರೈತರ ಪಾಡು ನಿಜಕ್ಕೂ ಪ್ರಕೃತಿಯ ಮುನಿಸು ಹೀಗೇಕೆ ಎಂಬ ಪ್ರಶ್ನೆ ಮೂಡುತ್ತದೆ.

Advertisement

ಮಂಡಗದ್ದೆ ಹೋಬಳಿಯಲ್ಲಿ ಬರುವ ಶಿಂಗನಬಿದರೆ ಗ್ರಾಪಂ ವ್ಯಾಪ್ತಿಯ ಹೆಗಲತ್ತಿ ಗ್ರಾಮ ಮಂಡಗದ್ದೆಯಿಂದ 15 ಕಿಮೀ ದೂರದಲ್ಲಿದೆ. ಬಡ ಕುಟುಂಬಗಳು ಹೊಂದಿರುವ ಅಲ್ಪಸ್ವಲ್ಪ ಕೃಷಿ ಜಮೀನು ಕೂಡ ಜವರಾಯನ ಅಟ್ಟಹಾಸಕ್ಕೆ ಸಿಲುಕಿದೆ.

25 ಬಡಕುಟುಂಬಗಳು ವಾಸಿಸುವ ಅಂದಾಜು 50 ಎಕರೆ ಪ್ರದೇಶದಲ್ಲಿನ ಅಡಕೆ ತೋಟ ಹಾಗೂ ಗದ್ದೆಗಳು ಭೂಕುಸಿತದ ಆರ್ಭಟಕ್ಕೆ ಸರ್ವನಾಶವಾಗಿದೆ. ಈ ಭಾಗದ ಬಡ ರೈತರು ಹಲವು ವರ್ಷಗಳಿಂದ ಬೆವರು ಸುರಿಸಿ ಕನಸು ಕಟ್ಟಿ ಬೆಳೆಸಿದ ಕೃಷಿ ಜಮೀನು ಏಕಾಏಕಿ ಮಳೆಯ ಆರ್ಭಟಕ್ಕೆ ಕೊಚ್ಚಿ ಹೋಗಿರುವುದು ಅಲ್ಲಿನ ರೈತರಿಗೆ ಜೀವಮಾನದಲ್ಲಿ ಮರೆಯಲಾಗದ ಘಟನೆಯಾಗಿದೆ.

ಹೆಗಲತ್ತಿ ಪ್ರದೇಶದ ಮಲೆಮಹಾದೇಶ್ವರ ಪಕ್ಕದ ಗುಡ್ಡ ಶನಿವಾರ ಮಧ್ಯರಾತ್ರಿ ಭೋರ್ಗರೆದು ಸುರಿದ ಮಳೆಗೆ ಭೂಕುಸಿತವುಂಟಾದಾಗ ಆ ರೈತ ಕುಟುಂಬದವರು ನಿದ್ದೆಯಲ್ಲಿದ್ದರು. ಆದರೆ ಮರುದಿನ ಆ ಕುಟುಂಬಗಳಿಗೆ ಈ ದೃಶ್ಯ ನೋಡಿ ಬರಸಿಡಿಲು ಬಡಿದಂತಾಗಿದೆ. ಕಳೆದ 2 ದಿನಗಳಿಂದ ಆ ಭಾಗಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಸಾಂತ್ವನ, ಭರವಸೆಗಳನ್ನು ನೀಡುತ್ತಿದ್ದರೂ ಕೊಚ್ಚಿ ಹೋದ ಕೃಷಿ ಜಮೀನು ಮತ್ತೆ ಬರುವುದಿಲ್ಲವೆಂಬ ಅಳಲನ್ನು ಜನರ ಮುಂದೆ ತೋಡಿಕೊಳ್ಳುತ್ತಿದ್ದಾರೆ.

ಸರ್ಕಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಅಲ್ಲಿಯ ಅನಾಹುತದ ಬಗ್ಗೆ ಆ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬಹುದು. ಆದರೆ ನಾಳಿನ ಬದುಕಿನ ಕನಸುಕಟ್ಟಿ ಬೆಳೆಸಿದ ಅಡಕೆ ತೋಟ ಹಾಗೂ ಗದ್ದೆಗಳು ಸರ್ವನಾಶವಾಗಿರುವುದು ಮತ್ತೆ ಸಿಗುವುದೇ ಎಂಬ ದುಖಃದ ಮಡುವಿನಲ್ಲಿ ಆ ರೈತ ಕುಟುಂಬಗಳು ಕಣ್ಣೀರಾಗಿದ್ದಾರೆ.

Advertisement

 

•ರಾಂಕೊ

Advertisement

Udayavani is now on Telegram. Click here to join our channel and stay updated with the latest news.

Next