Advertisement

ಸಾಲ ಮನ್ನಾ ನಿರೀಕ್ಷೆಯಲ್ಲಿ ಸ್ತ್ರೀ ಸಂಘಗಳು

06:00 AM May 23, 2018 | Team Udayavani |

ಕೋಲಾರ: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ಅಧಿಕಾರ ಚುಕ್ಕಾಣಿ ಹಿಡಿಯಲು ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಸಾಲ ಮನ್ನಾ ಕುರಿತು ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಅದರಲ್ಲೂ, ಕೋಲಾರದ ಮಹಿಳಾ ಸ್ವ-ಸಹಾಯ ಸಂಘಗಳು ಕುಮಾರಸ್ವಾಮಿಯವರು ಸಾಲಮನ್ನಾ ಮಾಡಿಯೇ ತೀರುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ.

Advertisement

ಸಿದ್ದರಾಮಯ್ಯ ನೇತೃತ್ವದ ಸರಕಾರ ಮಹಿಳೆಯರ ಸ್ವಾವಲಂಬನೆಗಾಗಿ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಲು ಮುಂದಾಗಿತ್ತು. ಅದರಂತೆ ರಾಜ್ಯದಲ್ಲಿನ ಸಹಕಾರ ಬ್ಯಾಂಕ್‌ಗಳ ಮೂಲಕ 5 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಶೂನ್ಯ ಬಡ್ಡಿಯಲ್ಲಿ ವಿವಿಧ ಗೃಹೋಪಯೋಗಿ ಉದ್ದಿಮೆಗಳ ಆರ್ಥಿಕ ಚಟುವಟಿಕೆಗಳಿಗಾಗಿ 1,116 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಈ ಪೈಕಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿಯೇ ಡಿಸಿಸಿ ಬ್ಯಾಂಕ್‌ ಮೂಲಕ ಸುಮಾರು 2.5 ಲಕ್ಷ ಮಹಿಳೆಯರಿಗೆ ಸುಮಾರು 583.45 ಕೋಟಿ ರೂ. ಶೂನ್ಯ ಬಡ್ಡಿಯಲ್ಲಿ ಸಾಲ ವಿತರಿಸಲಾಗಿದೆ.
ಸಾಲ ಮನ್ನಾ ವಾಗ್ಧಾನ: ಈ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿಯವರು ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ಸಾಲಮನ್ನಾ ವಿಚಾರ ಪ್ರಸ್ತಾಪವಾಗಿತ್ತು. ಅದರಲ್ಲೂ ಕುಮಾರಸ್ವಾಮಿಯವರು ಚುನಾವಣಾ ಪ್ರಚಾರ ಮಾಡಿದ ಎಲ್ಲಾ ಕಡೆ ತಾವು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ  ರೈತರ ಬೆಳೆ ಸಾಲ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ನೀಡಿರುವ ಸಾಲವನ್ನು ಮನ್ನಾ ಮಾಡುವುದಾಗಿ 
ಪ್ರಕಟಿಸಿದ್ದರು. ಮೂರೇ ದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಒಂದು ಲಕ್ಷ ರೂ. ವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ವಾಗ್ಧಾನ ಮಾಡಿ, ರಾಜ್ಯದ ಜನತೆಯನ್ನು ಆಕರ್ಷಿಸುವ ಕೆಲಸ ಮಾಡಿದ್ದರು. 

ಈ ಮಧ್ಯೆ, ಕುಮಾರಸ್ವಾಮಿಯವರು ಮಂಗಳವಾರ ಶೃಂಗೇರಿಯಲ್ಲಿ ಮಾತನಾಡಿ, ತಮಗೆ ಪೂರ್ಣ ಬಹುಮತ ಬಾರದ ಕಾರಣ ಸಾಲ ಮನ್ನಾ ಯೋಜನೆಯನ್ನು ಸಂಪೂರ್ಣವಾಗಿ ಜಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿರು ವುದು ಸಾಲ ಪಡೆದವರಲ್ಲಿ ಹಾಗೂ ಸಾಲ ಮನ್ನಾ
ನಿರೀಕ್ಷೆಯಲ್ಲಿರುವವರಿಗೆ ಕೊಂಚ ನಿರಾಸೆ ಮೂಡಿಸಿದೆ. ಆದರೂ, ಎಚ್ಡಿಕೆ ಸಿಎಂ ಆದ ಮೇಲೆ ರೈತರಿಗೆ, ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಿರುವ ಸಾಲವನ್ನು ಮನ್ನಾ ಮಾಡಿಯೇ ಮಾಡುತ್ತಾರೆ ಎಂಬ ವಿಶ್ವಾಸವನ್ನು ಜಿಲ್ಲೆಯ ಮಹಿಳಾ ಸಂಘಗಳ ಪ್ರತಿನಿಧಿಗಳು ವ್ಯಕ್ತಪಡಿಸುತ್ತಿದ್ದಾರೆ.

ಹೊಸ ಸರಕಾರ ಸಾಲಮನ್ನಾ ವಿಚಾರದಲ್ಲಿ ತನ್ನ ನಿಲುವನ್ನು ಸ್ಪಷ್ಟ ಪಡಿಸಿದರೆ ಸಹಕಾರ ಬ್ಯಾಂಕುಗಳ ಆರ್ಥಿಕ ಚಟುವಟಿಕೆಗಳನ್ನು ಬೇಗ ಸ್ಥಿರಪಡಿಸಲು ಸಾಧ್ಯವಾಗುತ್ತದೆ.
● ಬ್ಯಾಲಹಳ್ಳಿ ಗೋವಿಂದಗೌಡ ಅಧ್ಯಕ್ಷರು, ಡಿಸಿಸಿ ಬ್ಯಾಂಕ್‌

ನೂತನ ಸರಕಾರ ಮಹಿಳಾ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡಿದರೆ ಲಕ್ಷಾಂತರ ಮಹಿಳೆಯರು ಸಾಲದ ಸುಳಿಯಿಂದ ಹೊರಗೆ ಬಂದು ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ.
● ಅರುಣ ಕುಮಾರಿ, ಶ್ರೀ ಲಕ್ಷ್ಮೀ ಸ್ವಸಹಾಯ ಮಹಿಳಾ ಸಂಘ, ಕೋಲಾರ.

Advertisement

ಕುಮಾರಣ್ಣನವರು ಸಿಎಂ ಆಗುತ್ತಿರುವುದರಿಂದ ಮಹಿಳೆಯರ ಸಾಲ ಮನ್ನಾ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕಾಗಿ ಕಾತುರದಿಂದ ಕಾಯುತ್ತಿದ್ದೇವೆ.
● ಅಕ್ಕುಲಮ್ಮ, ಮಹೇಶ್ವರಿ ಸ್ವಸಹಾಯ ಮಹಿಳಾ ಸಂಘ, ಚೋಳಘಟ್ಟ

● ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next