ವೇದ ಸುಳ್ಳಾದರೂ ಗಾದೆ ಸುಳ್ಳಾಗದು; ಮಾತಿಗೆ ಮೊದಲು ಗಾದೆ, ಊಟಕ್ಕೆ ಮೊದಲು ಉಪ್ಪಿನಕಾಯಿ; ಗಾದೆಯ ನುಡಿ ಚಂದ ಸಾಧುವಿನ ನಡೆ ಚಂದ- ತರತರದಲ್ಲಿ ಹೊಗಳಲ್ಪಡುತ್ತಿರುವ ಗಾದೆಯು ಬದುಕು ಹೆತ್ತು ಕಂಡಕಂಡ ವರ ಕೊಂಡಾಟಕೆ ಕೊಟ್ಟಿರುವ ಕೈಗೂಸು, ಪೂರ್ವಿಕರು ಉರ್ವಿಯಲ್ಲಿ ತಲೆಯಲ್ಲಿ ಹೊತ್ತು ತಲೆತಲಾಂತರದಿಂದ ಪೀಳಿಗೆಯಿಂದ ಪೀಳಿಗೆಗೆ ರವಾನಿಸಿದ ಅನುಭವಗಳ ಗಂಟು. “ಆಡು ಮುಟ್ಟದ ಸೊಪ್ಪಿಲ್ಲ’. ಗಾದೆಗಳ ಬ್ರಹ್ಮಗಂಟನ್ನು ಬಿಚ್ಚುವವರಿಗೆ ಜೀವನದ ವಿಶ್ವರೂಪದ ದರ್ಶನವಾಗುತ್ತಲೆ ಹೋಗುತ್ತದೆ. ಮಣ್ಣು ಕಣ್ತೆರೆದು ಕಂಡ ಅನುಭವಗಳ ದೃಷ್ಟಿಯಿಂದಲೇ ಸೃಷ್ಟಿಯಾಗಿರುವುದರಿಂದ ಬೇರೆಬೇರೆ ಕಲಾತ್ಮಕ ಮಗ್ಗುಲುಗಳಿಂದ ಸೆರೆಹಿಡಿದಾಗ ಒಂದೇ ಶಿಲ್ಪವು ಹೊಮ್ಮಿಸುವ ಬಗೆಬಗೆಯ ಚೆಲುವಿನಂತೆ ಒಂದೇ ಗಾದೆಗೆ ನಾನಾ ಭಾವಾರ್ಥಗಳು, ಕಿರಿದರಲ್ಲಿ ಹಿರಿಯಾರ್ಥದ ವಾಚ್ಯದಲ್ಲಿ ಸೂಚ್ಯಾರ್ಥದ ಬೆಳಕು. ಈ ಬೆಳಕನ್ನು ಹೀರಿಯೇ ಮಣ್ಣಜೀವನದ ಕಥಾಬೀಜವು ಮೊಳಕೆಯೊಡೆಯುತ್ತದೆ. ನಮ್ಮ ಜನಪದರು ವರ್ತಮಾನದಲ್ಲಿ ಕುಂಬಳಕಾಯಿ ಬುರುಡೆಯೊಳಗೆ ನಾಳೆಗಾಗಿ ಶೇಖರಿಸಿಡುತ್ತಿದ್ದ ಭವಿಷ್ಯದ ಬೀಜಗಳಂತೆ ಬದುಕಿನ ಅನುಭವಬಿತ್ತುಗಳಾದ ಈ ಗಾದೆಗಳು ಕಾಲಕಾಲವೂ ಬಿತ್ತನೆಯ ಮೂಲಕ ಪುನರ್ಜಿàವ ಪಡೆಯುತ್ತ, ಜನಾಂಗ ನಶಿಸಿದರೂ ನಿರಂತರ ಹರಿಯುತ್ತಲೇ ಇರುವ ಸಂಸ್ಕೃತಿಯ ಜೀವನದಿಯಲ್ಲಿ ಜೀವನದ ಕಥಾಬೀಜ ಹೊತ್ತು ಹರಿಯುವ ಚಲನಶೀಲ ಜೀವಸತ್ಯಗಳಾಗಿ, ಜೀವಸತ್ವಗಳಾಗಿ ನಿತ್ಯ ಬದುಕಿನೊಳಗೆ ಉಸಿರಂತೆ ಬೆರೆತು ಮತ್ತೆಮತ್ತೆ ಪ್ರಸ್ತುತವಾಗುತ್ತಲೇ ಇವೆ.
ಗೇಣಿ ಕೊಟ್ಟು ಗೋಣಿ ಕೊಡವಿದ; ಗಿಳಿ ಸಾಕುವವನಿಗೆ ಕನಸಲ್ಲೂ ಬೆಕ್ಕೇ; ಸೆಟ್ಟಿ ಸಿಂಗಾರವಾದಾಗ ಪಟ್ಣ ಸೂರೆಯಾಯ್ತು; ಹೂವೆಂದು ಮುಡಿಯುವ ಹಾಗೂ ಇಲ್ಲ, ಚೀಯೆಂದು ಬಿಸಾಡುವಂತೆಯೂ ಇಲ್ಲ; ಮುಂದೆ ಹಹØ, ಹಿಂದೆ ಹಿಹಿØ; ಕೊಳೆತುಹೋದ ಕುಂಬಳಕ್ಕೆ ಕೆಟ್ಟುಹೋದ ತೆಂಗಿನಕಾಯಿ; ಆಟದಲ್ಲಿ ಕರ್ಣ, ಚೌಕಿಯಲ್ಲಿ ಬೀಡಿ ಬೇಡಿದ; ಗಂಡ ಪಟ್ಟೆಸೀರೆ ತರುತ್ತಾನೆಂದು ಉಟ್ಟಸೀರೆಯನ್ನೇ ಸುಟ್ಟುಬಿಟ್ಟಳು; ಮಕ್ಕಳಿದ್ದಲ್ಲಿ ಹೂಳಬೇಡ; ಕೆಂಡಕ್ಕೆ ಇರುವೆ ಮುತ್ತುವುದೇ?; ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆಹೂವು… ಹೀಗೆ ಅಂಕುಡೊಂಕು, ಕೊಂಕುಕೊಕ್ಕೆ, ಚುಚ್ಚುಬಿಚ್ಚು, ವ್ಯಂಗ್ಯವಿಡಂಬನೆಯ ದಿಟ್ಟಿಬೀರುತ್ತ, ಚಿಳ್ಳೆಗೂಸಿಂದ ಮಳ್ಳುಮುಪ್ಪಿನವರೆಗೂ ಗುಣಸ್ವಭಾವ ವೈರುಧ್ಯಗಳನ್ನೆಲ್ಲ ಸೆರೆಹಿಡಿಯುವ ಕೆಮರಾಕಂಗಳು ಗಾದೆಗಳು. ಬಣ್ಣಬಣ್ಣದ ಶೀಷೆಗಳಲ್ಲಿ ತುಂಬಿದಾಗ ಬಣ್ಣಪಡೆವ ನೀರಿನಂತೆ ಒಂದೊಂದು ಗಾದೆಗೆ ಸಂದರ್ಭಕ್ಕನುಗುಣವಾಗಿ ಹಲವು ಅರ್ಥಗಳ ಹೊಳಪು.
ಎಷ್ಟೋ ಬಾರಿ ಹೆಣ್ಣುಮಕ್ಕಳು ಗಾದೆಯ ನಿಲುವುಗನ್ನಡಿಯ ಮುಂದೆ ನಿಂತರೆ ಅದರೊಳಗೆ ಕಾಣಿಸುವ ಬಿಂಬ ತಮ್ಮದೆಂದು ಅವರಿಗೆ ಅನಿಸುವುದೇ ಇಲ್ಲ. ಏಕೆಂದರೆ ಅವು ಪುರುಷಕೇಂದ್ರಿತ ಕುಟುಂಬವ್ಯವಸ್ಥೆಯಲ್ಲಿ ಪುರುಷನೇ ರಚಿಸಿ ಕೀಕೊಟ್ಟ ನಿರ್ಜಿàವಗೊಂಬೆಯಂತೆ ಅದರೊಳಗಿಂದ ಹಾದು ಹೊರಬಂದು ಸ್ತ್ರೀಯನ್ನು ಹೊಕ್ಕು ತಲ್ಲಣಗೊಳಿಸುವ ಆಂತರಿಕಬಿಂಬಗಳು ಅನಿಸುತ್ತವೆ. ಇವುಗಳಲ್ಲೆಲ್ಲ ಸ್ತ್ರೀಯು ಸ್ವತಂತ್ರವ್ಯಕ್ತಿಯಾಗಿ ಕಾಣಿಸುವುದೇ ಇಲ್ಲ. ಅವಳೊಂದು ಸ್ವತ್ತಿನಂತೆ, ಆಸ್ತಿಯಭಾಗದಂತೆ, ಕುಟುಂಬದ ಮಾನಮರ್ಯಾದೆ ಉಳಿಸಲೇಬೇಕಾದ ಸ್ವಂತ ಅಸ್ತಿತ್ವವೇ ಇಲ್ಲದ, ಅವ ಕುಣಿಸಿದಂತೆ ಕುಣಿಯುವ ಪುರುಷಾವಲಂಬಿ ಸೌಂದರ್ಯಗೊಂಬೆಯಂತೆ ಕಾಣಿಸುತ್ತಾಳೆ.
“ಹತ್ತಿರದಿಂದ ಹಸು ತಾ, ದೂರದಿಂದ ಹೆಣ್ಣು ತಾ’. ವರ್ಷಕ್ಕೊಂದೆರಡು ತಿಂಗಳು ಆಗಲೋ ಈಗಲೋ ಮಳೆಹನಿ ಉದುರುವ ಬಯಲುಸೀಮೆಯಿಂದ ಮಳೆಗಾಲವಿಡೀ ಬಿಡದೆ ಜಡಿಮಳೆ ಸುರಿಯುವ ಮಲೆನಾಡ ಸೀಮೆಗೆ ಹಸುವನ್ನು ತಂದರೆ ಹೊಂದಿಕೊಳ್ಳುವುದು ಕಷ್ಟ. ಹುಟ್ಟಿ ಬೆಳೆದ ಪರಿಸರಕೇ ಅವುಗಳ ಬದುಕು ಒಗ್ಗಿಹೋಗಿರುತ್ತದೆ. ಪರದೇಸಿ ವ್ಯಾಪಾರಿಗಳಿಂದ ಟೋಪಿ ಹಾಕಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚು. ಹತ್ತಿರದ ರಕ್ತಸಂಬಂಧದಲ್ಲಿ, ಒಂದೇ ರಕ್ತದ ವಂಶವಾಹಿನಿಯಲ್ಲಿ ಮದುವೆಯಾದರೆ ಹುಟ್ಟುವ ಸಂತಾನ ಆರೋಗ್ಯವಾಗಿರುವುದಿಲ್ಲ. ಹತ್ತಿರದಲ್ಲೆ ತವರಬಳಗವಿದ್ದರೆ ಹೆಣ್ಣು ಅನ್ಯಾಯ ಪ್ರತಿಭಟಿಸಲು ಶಕ್ತಳಾಗುವುದರಿಂದ ಗಂಡನಕೈಯಲ್ಲಿ ಲಗಾಮಿರಲ್ಲ. ದೂರದಿಂದ ತಂದರೆ ವರದಕ್ಷಿಣೆ ಕಾಟ, ಹೆಣ್ಣುಭ್ರೂಣಹತ್ಯೆ, ಲಿಂಗತಾರತಮ್ಯ, ಬಾಲ್ಯವಿವಾಹ, ಅಪ್ರಾಪ್ತ ತಾಯ್ತನ, ಕೌಟುಂಬಿಕ ಹಿಂಸೆಗಳನ್ನೆಲ್ಲ ಸಹಿಸಿಕೊಂಡು ಎಲ್ಲದಕ್ಕೂ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆಯೆಂಬ ದುರಾಲೋಚನೆ, ದೂರಾಲೋಚನೆಯಲ್ಲೇ ದೂರದಿಂದ ಹಸುವಂತೆ ಕತ್ತಿಗೆ ತಾಳಿಕಟ್ಟಿ ತರುವ ಹೆಣ್ಣಿನ ಸ್ಥಿತಿಗತಿಯ ಪ್ರಾಣಿಬಿಂಬವಿದೆ. ಗಂಡ ಕಳ್ಳನಾಗಲಿ, ಕುಡುಕನಾಗಲಿ, ಕೊಲೆಗಡುಕನಾಗಲಿ ಕೊನೆಯತನಕ ಅವನೊಡನೆ ತಾಳ್ಮೆತಾಳಿ ಬಾಳಲೇಬೇಕು, ಬ್ರಹ್ಮಗಂಟು! “ಗಂಡ ಹೊಡೆದರೆ ಮನೆಬಿಟ್ಟು ಹೋಗಬೇಡ, ಚಂದಕೆ ಬಳೆತೊಟ್ಟು ಕೊಡವಿದರೆ ಹೋದೀತೇ?’ ಬಳೆ ತೊಡುವುದೂ ಕಳಚುವುದೂ ಕಷ್ಟವೇ. ಆದರೂ ಈಗ ಶಿಕ್ಷಣವು ಎಷ್ಟೋ ಹೆಣ್ಣುಮಕ್ಕಳ ಕಣ್ತೆರೆಸಿದೆ. ಮನದ ಕಣ್ಣಿಗೆ ಕಟ್ಟಿದ ಪಟ್ಟಿಯನ್ನು ಬಿಡಿಸಿ ಬಿಸುಟು ಶೋಷಣೆಯ ವರ್ತುಲದಿಂದ ಹೊರಬಂದಿದ್ದಾರೆ ಎಂಬುವುದು ಸಂತಸದ ಸಂಗತಿ.
ಬಂಜೆಯ ಬಾಳು ಎಂಜಲೆಲೆಗೆ ಸಮಾನ. ಊಟ ಮಾಡಿದ ತಟ್ಟೆಯನ್ನು ನಾಳೆಗಾಗಿ ಮುಂದಿನ ಪೀಳಿಗೆಗಾಗಿ ತೊಳೆದು ಕಾದಿಟ್ಟುಕೊಳ್ಳುತ್ತಾರೆ. ಆದರೆ ಸಮಾರಂಭದ ಬಾಳೆಯೆಲೆ ಹಾಗಲ್ಲ, ಉಂಡು ಬಿಸಾಡಲೇಬೇಕು. ಹಸಿಹಸಿರು ರೂಪುರೇಖೆಯಿರುವ ಬಾಳೆಯೆಲೆಯಂತೆ, ಬಾಲೆಗೆ ಎಷ್ಟೇ ರೂಪು ಯವ್ವನ ಲಾಲಿತ್ಯ ಕಲಾತ್ಮಕತೆಯಿದ್ದರೂ ವಂಶಬೆಳೆಸಲಿಲ್ಲವೆಂದರೆ ಅವಳು ಹೆಣ್ಣೇ ಅಲ್ಲವೆಂದು ಬಳಸಿ ಎಸೆವ ಕ್ರೂರವಾದ ಪುರುಷದೃಷ್ಟಿಕೋನ. ಇಲ್ಲಿ ತಾಯ್ತನವೊಂದೇ ಹೆಣ್ತನದ ಅಸ್ತಿತ್ವವನ್ನಳೆಯುವ ಮಾಪನ. “ಬಂಜೆಯ ಮನೆಯಲ್ಲಿ ತೊಟ್ಟಿಲಿಲ್ಲ, ಬಂಜೆ ಹೋದಲ್ಲಿ ಸಂಜೆ, ಬಂಜೆ ಭೂಮಿಯನುತ್ತು ಫಲವೇನು? ಹಡೆದಾಕೆಗೆ ಪಟ್ಟೆಸೀರೆ ಹಡೆಯದಾಕೆಗೆ ಅಡಿಕೆಹಾಳೆ’ ಮಕ್ಕಳಿಲ್ಲದ ಹಸಿಗಾಯಕ್ಕೆ ಉಪ್ಪು$ಸುರಿವ ಕುಹಕಗಾದೆಗಳು. ಮಕ್ಕಳಿಲ್ಲದವಳ ಮುಂದೆ ಬೇಕುಬೇಕೆಂದೇ ತನ್ನ ಮಕ್ಕಳನ್ನು ಮುದ್ದಿಸುತ್ತ ಸೊಕ್ಕಿನುಡಿಯುವ ಉಕ್ಕುಹೃದಯದವರು ಈ ಕುರಿತು ಮಾನವೀಯತೆಯಿಂದ ಯೋಚಿಸಲೇಬೇಕಿದೆ. ತಾಯ್ತನವಷ್ಟೇ ಬದುಕಿನ ಸಾರ್ಥಕತೆಯೇ? ಮಕ್ಕಳಿಲ್ಲದವಳಿಗೆ ಅಕ್ಕರೆಯ ಬಾಳನ್ನು ಬಾಳುವ ಹಕ್ಕಿಲ್ಲವೇ? ಗಂಡೂ ಬಂಜೆಯಾಗಿರಬಹುದಲ್ಲ? ಹೆಣ್ಣುಮಗು ಹುಟ್ಟಿದರಂತೂ ಹೆಣ್ಣಿನ ಮೇಲೆಯೇ ಕುಟುಂಬದ ಸವಾರಿ. ಕಸದ ತೊಟ್ಟಿಯಲ್ಲಿ ಪ್ರತಿದಿನ ಅಳುತ್ತಿರುವ ಹೆಣ್ಣುಕೂಸುಗಳು, ಮಗುಸಾಗಣಿಕೆ, ಅಪಹರಣ, ಅತ್ಯಾಚಾರ. ಇದಕೆ ಮದ್ದೆಂದು? “ಬಿಕ್ಕಿ ಅತ್ತರೆಬೀಸುಗಲ್ಲು ತಿರುಗೀತೇ?, ಮದುವೆಹೆಜ್ಜೆಯನಿಡಲು ಪಯಣ ಸಾಗುವುದೇ?’ ಅವಳ ತಲೆಯಮೇಲೆ ಅವಳದೇ ಕೈ. ಬೀಸುಗಲ್ಲು ಎಂಬ ಕಾಲಚಕ್ರ ತಿರುಗಬೇಕಾ ಬದುಕಿನಯಾನ ಮುನ್ನಡೆಯಬೇಕಾ, ಅತ್ತು ಪ್ರಯೋಜನವಿಲ್ಲ, ನೋವು-ನಲಿವನ್ನು ಬೀಸುಗಲ್ಲಿಗೇ ಬಿಟ್ಟು ಅವಳೇ ತಿರುಗಿಸಬೇಕು, ದುಡಿಮೆಯಲ್ಲಿ ಮೈಮರೆಯಬೇಕು.
“ಬೋಳಿಗೇತಕೆ ಜಾಜಿಮಲ್ಲಿಗೆ ದಂಡೆ?; ಅಂಡೆಯ ಬಾಯಿಯನ್ನಾದರೂ ಕಟ್ಟಬಹುದು ಮುಂಡೆಯ ಬಾಯನ್ನಲ್ಲ; ತಾಯಿ ಹೋದ ಮೇಲೆ ಬಾಯಿ ಹೋಯ್ತು’ ಇಷ್ಟವಿಲ್ಲದಿದ್ದರೂ ಮಂಡೆಬೋಳಿಸಿಕೊಂಡು ವಿರೂಪಗೊಳ್ಳುವ ಹೆಣ್ಣುಜೀವವು “ಬಾಯಿಯಿದ್ದವಳು ಬದುಕಿಯಾಳು’ ಎಂದುಕೊಂಡು ಕಾಮುಕರ ಕಣ್ಣಿಂದ, ಶೋಷಣೆಯಿಂದ ರಕ್ಷಿಸಿಕೊಳ್ಳಲು ನಾಲಗೆ ಹರಿತಮಾಡಿ ಕೊಂಡರೆ ಗಯ್ನಾಳಿಯೆಂಬ ಪಟ್ಟ . ಇನ್ನು “ಸಾವಿರ ಜುಟ್ಟುಗಳು ಒಟ್ಟಿಗಿರ ಬಹುದು, ಎರಡು ತುರುಬುಗಳಲ್ಲ’ ಎನ್ನುತ್ತ “ಆರು ಕೊಟ್ರೆ ಅತ್ತೆ ಕಡೆ, ಮೂರು ಕೊಟ್ರೆ ಸೊಸೆ ಕಡೆ’ ಎಂದು ನಿಮಿಷಕ್ಕೊಮ್ಮೆ ಪಕ್ಷಾಂತರ ಮಾಡುತ್ತ ಅಂಕದ ಕೋಳಿಗಳ ಕಾಲಿಗೆ ಅಂಕೆಯಿಲ್ಲದೆ ಮಸೆದುಬಾಳು ಕಟ್ಟುವ ನೆರೆಕರೆಯ ಕರಕರೆ.
ಸಂಪಿಗೆ ಸಾವಿರಾರು ವರ್ಷಗಳಿಂದ ಬೀರುತ್ತಿರುವ ಕಂಪು ಸಂಪಿಗೆಯದ್ದೇ. ಅದು ಗುಲಾಬಿಯದ್ದಾಯಿತೆಂದರೆ ಏನೋ ಮನುಷ್ಯನ ಲಾಭಿಗೊಳಗಾಗಿದೆ ಎಂದರ್ಥವಲ್ಲವೇ?
ಕಾತ್ಯಾಯಿನಿ ಕುಂಜಿಬೆಟ್ಟು