Advertisement

ಸಾಧಕ ವಿದ್ಯಾರ್ಥಿನಿಗೆ ಸನ್ಮಾನ

04:53 PM May 11, 2018 | Team Udayavani |

ಸವಣೂರು: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 99.36 ಅಂಕ ಪಡೆದು ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪಟ್ಟಣದ ಎಸ್‌ಎಫ್‌ಎಸ್‌ ಶಾಲೆಯ ವಿದ್ಯಾರ್ಥಿನಿ ಸುಮಾ ರಾಶಿನಕರ ಜಿಲ್ಲೆಯ ಗೌರವವನ್ನು ಹೆಚ್ಚಿಸಿದ್ದಾಳೆ. ಇದು ಎಲ್ಲರಿಗೂ ಹೆಮ್ಮೆಯ ವಿಷಯ ಹಾಗೂ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಎ.ಎಂ. ವಡಗೇರಿ ಹೇಳಿದರು.

Advertisement

ಪಟ್ಟಣದ ಹಾವಣಗಿ ಪ್ಲಾಟ್‌ನಲ್ಲಿರುವ ವಿದ್ಯಾರ್ಥಿನಿ ಸುಮಾ ರಾಶಿನಕರ ನಿವಾಸದಲ್ಲಿ ಗುರುವಾರ ವಿದ್ಯಾರ್ಥಿನಿಗೆ ಸನ್ಮಾನಿಸಿ, ಶುಭಕೋರಿ ಮಾತನಾಡಿದರು. ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಹೆಚ್ಚು ಅಂಕಗಳಿಸಿ ತೇರ್ಗಡೆಯಾಗುವ ಮಕ್ಕಳನ್ನು ಸನ್ಮಾನಿಸುವ ಮೂಲಕ ಮುಂದಿನ ಮಕ್ಕಳಲ್ಲಿ ಪ್ರೋತ್ಸಾಹ ತುಂಬುವ ಉದ್ದೇಶದಿಂದ ಜಿಲ್ಲಾಡಳಿತದ ಆದೇಶದಂತೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಮಕ್ಕಳ ಮನೆ ಮನೆಗೆ ಹೋಗಿ ಸನ್ಮಾನ ಮಾಡುತ್ತಿರುವುದಾಗಿ ಹೇಳಿದರು. ಸುಮಾ ರಾಶಿನಕರ ವಿದ್ಯಾರ್ಥಿನಿಯಂತಹ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಮಕ್ಕಳಿಂದ ತಾಲೂಕು ಹಾಗೂ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಎದುರಿಸುವ ಮಕ್ಕಳಿಗೆ ಅವರ ಮಾರ್ಗದರ್ಶನ, ಶೈಕ್ಷಣಿಕ ಅನುಭವ ಹಾಗೂ ಪಟ್ಟ ಪರಿಶ್ರಮದ ಕುರಿತು ತಿಳಿಸಿಕೊಡಲು ವೇದಿಕೆ ನಿರ್ಮಿಸುವ ಮೂಲಕ ಪ್ರೇರೇಪಣಾ ಕಾರ್ಯಾಗಾರಗಳನ್ನು ಏರ್ಪಡಿಸುವ ಚಿಂತನೆಯನ್ನು ವ್ಯಕ್ತಪಡಿಸಿದರು.

ಪ್ರಸಕ್ತ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾಲೂಕಿನಾದ್ಯಂತ 1745 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 1426 ತೇರ್ಗಡೆ ಹೊಂದಿದ್ದಾರೆ. ತಾಲೂಕಿನಲ್ಲಿ ಮಾಧ್ಯಮವಾರು ಫಲಿತಾಂಶವನ್ನು ನೋಡಿದಾಗ 625 ಅಂಕಗಳಿಗೆ ಕನ್ನಡ ಮಾಧ್ಯಮದಲ್ಲಿ ತಾಲೂಕಿನ ಚಿಲ್ಲೂರು ಬಡ್ನಿ ಗ್ರಾಮದ ಆರ್‌. ಎಂ.ಎಸ್‌.ಎ ಶಾಲೆಯ ವಿದ್ಯಾರ್ಥಿ ಫೀರಸಾಬ ಹುಸೇನಸಾಬ ನದಾಫ್‌ 591 (ಪ್ರಥಮ), ಪಟ್ಟಣದ ವಿದ್ಯಾಭಾರತಿ ಪ್ರೌಡ ಶಾಲೆ ವಿದ್ಯಾರ್ಥಿಗಳಾದ ವಿಜಯಲಕ್ಷ್ಮೀ ನೀಲಪ್ಪ ಚಬ್ಬಿ 590 (ದ್ವಿತೀಯ) ಹಾಗೂ ಮಲ್ಲಿಕಜಾನ ನನ್ನಸಾಬ್‌ ಕಿಲ್ಲೇದಾರ 582 (ತೃತೀಯ) ಸ್ಥಾನ ಪಡೆದಿದ್ದಾರೆ. ಉರ್ದು ಮಾಧ್ಯಮದಲ್ಲಿ ಕಾರಡಗಿ ಗ್ರಾಮದ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಸಫೋರಾಬಾನು ಸಿ ನಮಾಜ (569), ಸಮರೀನಬಾನು ಜೆ ಅತ್ತಿಗೇರಿ (563)
ಕ್ರಮವಾಗಿ (ಪ್ರಥಮ ಹಾಗೂ ದ್ವಿತೀಯ) ಸ್ಥಾನ ಪಡೆದರೆ, ಸವಣೂರು ಮಜೀದ ಪ್ರೌಢಶಾಲೆ ವಿದ್ಯಾರ್ಥಿನಿ ಬೀಬಿಸೊಗರಾ ಶಬ್ಬೀರಹ್ಮದ ಶಿರ್ಸಿ 551 ಅಂಕಗಳಿಸಿ (ತೃತೀಯ) ಸ್ಥಾನ ಪಡೆದಿದ್ದಾಳೆ. ಇಂಗ್ಲೀಷ್‌ ಮಾಧ್ಯಮದಲ್ಲಿ ಸುಮಾ ಕಿಶೋರಕುಮಾರ ರಾಶಿನಕರ (621 ಅಂಕ) ಜಿಲ್ಲೆಗೆ ಪ್ರಥಮ ಪಡೆದಿದ್ದಾಳೆ. ಶ್ರಾವಣಿ ಪ್ರಸನ್ನ ರಾಯಚೂರ (619) ದ್ವಿತೀಯ ಹಾಗೂ ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿಧ್ಯಾರ್ಥಿ ಮಾಲತೇಶ ನಾಗಪ್ಪ ಕರಿಯಣ್ಣವರ (600) ತೃತೀಯ ಸ್ಥಾನದಲ್ಲಿದ್ದಾನೆ ಎಂದು ವಿವರ ನೀಡಿದರು.

ಈ ಮೂರು ಮಾಧ್ಯಮಗಳ ಪೈಕಿ ತಾಲೂಕಿಗೆ ಇಂಗ್ಲಿಷ್‌ ಮಾಧ್ಯಮದ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂರು ವಿದ್ಯಾರ್ಥಿಗಳು ಪಟ್ಟಣದ ಎಸ್‌ಎಫ್‌ಎಸ್‌ ಶಾಲೆ ವಿದ್ಯಾರ್ಥಿನಿಯರಾಗಿದ್ದಾರೆ. ಈ ವಿದ್ಯಾರ್ಥಿಗಳು ತಮ್ಮ ಸಾಧನೆಯಿಂದ ತಾಲೂಕಿನ ಹಾಗೂ ಜಿಲ್ಲೆಯ ಗೌರವವನ್ನು ಹೆಚ್ಚಿಸಿದ್ದಾರೆಂದು ಅಭಿನಂದನೆ ಸಲ್ಲಿಸಿದರು.

ಶಿಕ್ಷಣಾಧಿಕಾರಿ ಎಸ್‌.ಎನ್‌. ಹುಗ್ಗಿ, ವಿಷಯ ಪರೀಕ್ಷಕ ಎಸ್‌.ಜಿ. ಕೋಟಿ, ಶಿಕ್ಷಣ ಸಂಯೋಜಕಿ ರೂಪಾ ಸಜ್ಜನ, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಂ.ಬಿ. ಶಾಂತಗೇರಿ, ತಾಲೂಕು ಘಟಕದ ಅಧ್ಯಕ್ಷ ಎನ್‌.ಕೆ. ಪಾಟೀಲ, ಶಿರಬಡಗಿ ಜಿಎಚ್‌ಎಸ್‌ ಶಾಲೆಯ ಮುಖ್ಯೋಪಾಧ್ಯಾಯ ಪಿ.ವಿ. ಗುತ್ತಲ, ತಾಲೂಕು ಶಿಕ್ಷಣ ಸಂಯೋಜಕ ಎಸ್‌.ಡಿ. ತಿರಕಪ್ಪನವರ, ಎಸ್‌ಎಫ್‌ಎಸ್‌ ಶಾಲೆ ಶಿಕ್ಷಕ ಸಲೀಂ
ಡಂಬಳ, ವಿದ್ಯಾರ್ಥಿನಿಯ ಪಾಲಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next