Advertisement

ಶುಲ್ಕಕಡಿತ: 23ರಂದು ಪ್ರತಿಭಟನೆ

11:25 AM Feb 20, 2021 | Team Udayavani |

ಆನೇಕಲ್‌: ಶಾಲಾ ಶುಲ್ಕವನ್ನು ಶೇ.30ರಷ್ಟು ಕಡಿತಗೊಳಿಸುವುದು ಅವೈಜ್ಞಾನಿಕ. ಸರ್ಕಾರದ ತೀರ್ಮಾನಗಳಿಂದ ಖಾಸಗಿ ಶಾಲೆಗಳನ್ನು ನಡೆಸುವುದೇ ಕಷ್ಟಕರ. ಹಾಗಾಗಿ ಸರ್ಕಾರ ತೀರ್ಮಾನ ಹಿಂಪಡೆಯಬೇಕೆಂದು ಒತ್ತಾಯಿಸಿ, ಫೆ. 23ರಂದು ಕ್ಯಾಮ್ಸ್‌ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿ ‌ದೆ ಎಂದು ಕ್ಯಾಮ್ಸ್‌ನ ಆನೇಕಲ್‌ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಶೇಖರ್‌ ತಿಳಿಸಿದರು.

Advertisement

ತಾಲೂಕಿನ ಹೀಲಲಿಗೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆ, ಈ ವರ್ಷ ಖಾಸಗಿ ಶಾಲೆಗಳ ದಾಖಲಾತಿಗಳಾಗಿಲ್ಲ. ಸರ್ಕಾರ ಘೋಷಿಸುವ ಮುನ್ನವೇ ಶೇ.20ರಷ್ಟು ಶುಲ್ಕ ರಿಯಾಯಿತಿಯನ್ನು ಶಾಲೆಗಳು ಘೋಷಣೆ ಮಾಡಿದ್ದವು. ಶೇ.50ರಷ್ಟು ಸಹ ಶುಲ್ಕಗಳು ವಸೂಲಿಯಾಗಿಲ್ಲ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವೇತನ ನೀಡಬೇಕಾಗಿದೆ. ಶುಲ್ಕ ವಸೂಲಾತಿ ಇಲ್ಲದೇ ಸಂಸ್ಥೆಗಳನ್ನು ನಡೆಸುವುದು ಕಷ್ಟವಾಗಿದೆ ಎಂದರು.

ಶಾಲೆಗಳು ಮುಚ್ಚುವ ಪರಿಸ್ಥಿತಿ: ಕ್ಯಾಮ್ಸ್‌ ನಿರ್ದೇಶಕ ಎನ್‌.ಸುರೇಶ್‌ ಮಾತನಾಡಿ, ಸರ್ಕಾರ ಖಾಸಗಿ ಶಾಲೆಗಳ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಇದರಿಂದ ಖಾಸಗಿ ಶಾಲೆ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸಕ್ತ ಸಾಲಿನ ಆರ್‌ಟಿಇ ಹಣ ಇದುವರೆಗೆ ನೀಡಿಲ್ಲ. ಖಾಸಗಿ ಶಾಲೆಗಳ ಶಿಕ್ಷಕರಿಗೆ ಪ್ಯಾಕೇಜ್‌ ನೀಡುವಂತೆ ಹಲವು ಬಾರಿ ಶಿಕ್ಷಣ ‌ ಸಚಿವರಲ್ಲಿ ಮನವಿ ಸಲ್ಲಿಸಿದರೂ ಪ್ಯಾಕೇಜ್‌ ನೀಡಿಲ್ಲ. ಶಿಕ್ಷಣ ವ್ಯವಸ್ಥೆಯ ಭಾಗವಾಗಿರುವ ಖಾಸಗಿ ಶಾಲಾ ಶಿಕ್ಷಕರ ಬಗ್ಗೆ ಸರ್ಕಾರ ಅಸಡ್ಡೆ ತೋರುತ್ತಿದೆ.ಬೇಡಿಕೆಗಳ ಬಗ್ಗೆ ಜಾಣಕುರುಡು ಪ್ರದರ್ಶಿಸುತ್ತಿದೆ. ಫೆ.23ರಂದು ಬೃಹತ್‌ ಪ್ರತಿಭಟನೆ ನಡೆಸುವ ಮೂಲಕ ಖಾಸಗಿ ಶಾಲೆಗಳ ಬೇಡಿಕೆಗಳಿಗೆ ಹಕ್ಕೋತ್ತಾಯ ಮಾಡಲಾಗುವುದು ಎಂದರು.

ತಾರತಮ್ಯ: ಕ್ಯಾಮ್ಸ್‌ನ ಉಪಾಧ್ಯಕ್ಷ ಅಜ್ಜಪ್ಪ ಮಾತನಾಡಿ, ಖಾಸಗಿ ಶಾಲೆಗಳು ಮತ್ತು ಸರ್ಕಾರಿ ಶಾಲೆಗಳ ನಡುವೆ ತಾರತಮ್ಯ ಮಾಡುತ್ತಿದೆ. ಮಾನ್ಯತೆ ನವೀಕರಣ ಮಾಡುವ ಸಂದರ್ಭದಲ್ಲಿ ಕಟ್ಟಡ ಸುರಕ್ಷತೆ, ಸ್ವಚ್ಛತೆ  , ಅಗ್ನಿಸುರಕ್ಷತಾ ಪ್ರಮಾಣ ಪತ್ರಗಳಿಗೆ ಒತ್ತಾಯ ಮಾಡುತ್ತಿದೆ. ಸರ್ಕಾರಿ ಶಾಲೆಗಳಿಗೆ ವಿನಾಯಿತಿ ನೀಡಿ ಖಾಸಗಿ ಶಾಲೆಗಳ ಮೇಲೆ ಒತ್ತಡ ಹೇರುವ ಮೂಲಕ ಖಾಸಗಿ ಶಾಲೆಗಳನ್ನು ಸಂಪೂರ್ಣ ಮುಚ್ಚಲು ಹುನ್ನಾರ ನಡೆಸಿದೆ ಎಂದರು.

ಕ್ಯಾಮ್ಸ್‌ನ ಪದಾಧಿಕಾರಿ ರವಿಕುಮಾರ್‌, ಜ್ಯೋತಿಗೌಡ, ವಿನಯ್‌, ಅಶ್ವತ್ಥ್, ರಾಜೇಶ್‌ ನಾಯ್ಕ, ಆನಂದ್‌ ಸಿಂಗ್‌, ಲಕ್ಷ್ಮಣ್‌, ಶ್ರೀರಾಮ್‌, ಮುನಿರಾಜು, ಕೃಷ್ಣಪ್ಪ, ಸುರೇಶ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next