ಆ ನಿರ್ದೇಶಕ ಒಂದು ಚಿತ್ರ ಶುರುಮಾಡಿದಾಗ, ಎಷ್ಟೋ ಜನ ಅದು ಶುರುವಾಗಲ್ಲ ಅಂದರಂತೆ. ಸಿನಿಮಾ ಮುಗಿಸಿದಾಗ, ಅದು ರಿಲೀಸ್ ಕೂಡ ಆಗಲ್ಲ ಅಂದರಂತೆ. ಆ ನಿರ್ದೇಶಕ ಟೈಮ್ ಸರಿಯಿಲ್ಲ ಅಂದುಕೊಂಡು ಸುಮ್ಮನಿದ್ದರಂತೆ. ಮೊದಲ ಸಲ ಪ್ರೀತಿಯಿಂದ ಮಾಡಿದ ಚಿತ್ರ ರಿಲೀಸ್ ಆಗಲೇ ಇಲ್ಲವಲ್ಲ ಅನ್ನೋ ಕೊರಗಿನಲ್ಲೇ ಇದ್ದಾಗ, “ಸರಿಯಾದ ನಿರ್ಮಾಪಕರು ಸಿಕ್ಕು ಪ್ರೋತ್ಸಾಹಿಸಿದರೆ ಕೇವಲ ನಾಲ್ಕು ತಿಂಗಳಲ್ಲೇ ಒಂದು ಚಿತ್ರ ಮಾಡಿ ತೋರಿಸ್ತೀನಿ’ ಅಂತ ಚಾಲೆಂಜ್ ಮಾಡಿದರಂತೆ. ಹಾಗೆ ಚಾಲೆಂಜ್ ಮಾಡಿದ್ದರಿಂದಲೇ ಅವರು ಕೇವಲ 3 ತಿಂಗಳು 17 ದಿನದಲ್ಲಿ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಈಗ ಬಿಡುಗಡೆಗೂ ರೆಡಿಯಾಗಿದ್ದಾರೆ. ಹಾಗೆ ಮಾಡಿದ ಚಿತ್ರ “ಅತೃಪ್ತ’. ಅಂಥದ್ದೊಂದು ಚಾಲೆಂಜ್ ಮಾಡಿ ತೋರಿಸಿದ ನಿರ್ದೇಶಕ ನಾಗೇಶ್ ಕ್ಯಾಲನೂರು.
“ಪ್ರೇಮಾಸುರ’ ಎಂಬ ಚಿತ್ರ ಮಾಡಿದ್ದರು ನಾಗೇಶ್. ಆದರೆ, ಅದು ರಿಲೀಸ್ ಆಗಲಿಲ್ಲ. ಅತೃಪ್ತ ಮನಸ್ಸಲ್ಲೇ ಇದ್ದ ನಾಗೇಶ್‌ಗೆ ಬೆನ್ನೆಲುಬಾಗಿ ನಿಂತಿದ್ದು ನಿರ್ಮಾಪಕ ರಘುನಾಥರಾವ್. ಅವರ ಪ್ರೋತ್ಸಾಹದಿಂದ ಈಗ “ಅತೃಪ್ತ’ ಚಿತ್ರ ಮಾಡಿ, ತೃಪ್ತರಾಗಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. “ಚಿತ್ರತಂಡದವರ ಸಹಕಾರದಿಂದ ಇಷ್ಟು ಬೇಗ ಚಿತ್ರ ಮಾಡಲು ಸಾಧ್ಯವಾಗಿದೆ. ಹೇಳಿದಂತೆ ನಾನು ನಾಲ್ಕು ತಿಂಗಳ ಒಳಗೆ ಚಿತ್ರ ಮಾಡಿ ಸೆನ್ಸಾರ್ ಪತ್ರ ಪಡೆದಿದ್ದೇನೆ.
ಇದೊಂದು ಅತೃಪ್ತ ಆತ್ಮದ ಕಥೆ. ಒಂದು ಜೋಡಿ ಹನಿಮೂನ್‌ಗೆ ಹೋದಾಗ ನಡೆಯೋ ಘಟನೆಗಳಿಲ್ಲಿ ಹೈಲೈಟ್. ಹಾರರ್ ಅಂಶಗಳು ಹೆಚ್ಚಿವೆ. ಚಿತ್ರಕ್ಕೆ ಮುಖ್ಯವಾಗಿ ಕ್ಯಾಮೆರಾ, ಸಂಗೀತ ಪಾತ್ರ ನಿರ್ವಹಿಸಿವೆ. ರೊಮ್ಯಾನ್ಸ್ ಇರುವುದರಿಂದ ಚಿತ್ರಕ್ಕೆ ಸೆನ್ಸಾರ್ ಮಂಡಳಿ “ಎ’ ಪ್ರಮಾಣ ಪತ್ರ ನೀಡಿದೆ’ ಅಂದರು ನಾಗೇಶ್.
ನಿರ್ಮಾಪಕ ರಘನಾಥ ರಾವ್ ಅವರಿಗೆ ಇದು ಮೊದಲ ಚಿತ್ರವಂತೆ. “ಚಿತ್ರ ಶುರು ಮಾಡಿದಾಗ ಹಣದ ಸಮಸ್ಯೆ ಇತ್ತು. ಆದರೆ, ಒಳ್ಳೇ ಕಥೆ, ಟೀಮ್ ಸಿಕ್ಕಿದ್ದರಿಂದ ಎಲ್ಲವೂ ಚನ್ನಾಗಿ ನಡೆಯಿತು. ನಿರ್ದೇಶಕರು ರಾತ್ರಿ-ಹಗಲು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಚಿತ್ರ ಮಾಡುವಾಸೆ ಇದೆ’ ಅಂದರು ನಿರ್ಮಾಪಕರು. ನಾಯಕ ಅರ್ಜುನ್ ಯೋಗಿ ಅವರಿಗೆ ಇದು ಎರಡನೇ ಚಿತ್ರ. “ಏನೆಂದು ಹೆಸರಿಡಲಿ’ ಬಳಿಕ ಹಲವು ಕಥೆ ಕೇಳಿ, ಇದನ್ನು ಒಪ್ಪಿದರಂತೆ. ಕಥೆ ಕೇಳಿದಾಗ, ಮಿಸ್ ಮಾಡಬಾರದು ಅಂತ ಕೆಲಸ ಮಾಡಿದ್ದಾರೆ. ಇಲ್ಲಿ ಎಲ್ಲರಿಗೂ ಒಂಥರಾ ಅತೃಪ್ತ ಮನಸ್ಸು. ಯಾಕೆಂದರೆ, ಎಲ್ಲರಿಗೂ ಒಂದು ಗೆಲುವು ಬೇಕು. ಬಹುಶಃ ಈಗ ಚಿತ್ರದ ಔಟ್‌ಪುಟ್ ನೋಡಿದರೆ, ಎಲ್ಲರಿಗೂ ತೃಪ್ತಿ ಎನಿಸಿದೆ. ಗೆಲುವು ಸಿಕ್ಕರೆ ಮತ್ತಷ್ಟು ತೃಪ್ತಿ ಆಗುತ್ತೆ’ ಅಂದರು ಅರ್ಜುನ್. ನಾಯಕಿ ಶ್ರುತಿರಾಜ್‌ಗೆ ಕಥೆ, ಪಾತ್ರ ಕೇಳಿದಾಗ ಆ ಪಾತ್ರ ಮಾಡೋಕೆ ಸಾಧ್ಯನಾ ಎಂಬ ಪ್ರಶ್ನೆ ಎದುರಾಯಿತಂತೆ. ಆದರೂ, ಅವರು ಚಾಲೆಂಜ್‌ನಿಂದ ಪಾತ್ರ ಮಾಡಿದ್ದಾರೆ. ಅಂದು ಸಂಕಲನಕಾರ ಶಿವಪ್ರಸಾದ್, ಡಿಐ ತಂತ್ರಜ್ಞ ಕಣ್ಣನ್, ಕ್ಯಾಮೆರಾಮ್ಯಾನ್ ರವಿಕಿಶೋರ್, ನವೀನ್ “ಅತೃಪ್ತ’ ಕುರಿತು ಮಾತಾಡಿದರು.