Advertisement

ಶುಲ್ಕ ಸಮರ: ಸರಕಾರಕ್ಕೆ ಸವಾಲು; ಸರಕಾರಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸಡ್ಡು

11:47 PM Nov 25, 2020 | mahesh |

ಬೆಂಗಳೂರು: ಆನ್‌ಲೈನ್‌ ತರಗತಿಯ ಶುಲ್ಕದ ವಿಚಾರದಲ್ಲಿ ಸರಕಾರ – ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ “ಸಮರ’ ಆರಂಭವಾಗಿದೆ. ಆನ್‌ಲೈನ್‌ ತರಗತಿಗೆ ಶುಲ್ಕ ಪಡೆಯುವಂತಿಲ್ಲ ಎಂದು ಸರಕಾರ ನಿರ್ದೇಶಿಸಿದ ಬೆನ್ನಲ್ಲೇ ಶುಲ್ಕ ಪಾವತಿಸದಿದ್ದರೆ ತರಗತಿಗಳನ್ನೇ ಸ್ಥಗಿತಗೊಳಿಸುವುದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸವಾಲು ಎಸೆದಿವೆ. ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ನ. 30ರಿಂದಲೇ ರಾಜ್ಯಾದ್ಯಂತ ತರಗತಿಗಳನ್ನು ಸ್ಥಗಿತಗೊಳಿಸುವುದಾಗಿಯೂ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ (ಕ್ಯಾಮ್ಸ್‌) ಘೋಷಿಸಿದೆ.

Advertisement

ಆತಂಕದಲ್ಲಿ ಪಾಲಕರು
ನ. 30ರಿಂದ ಆನ್‌ಲೈನ್‌ ತರಗತಿ ಕಡಿತ ಆಗಲಿದೆ ಎಂಬ ವಿಷಯ ಹೊರಬೀಳುತ್ತಿದ್ದಂತೆ ಮಕ್ಕಳ ಪಾಲಕ-ಪೋಷಕರು ಆತಂಕಕ್ಕೀಡಾಗಿದ್ದಾರೆ. ಯಾವ ತರಗತಿಯೂ ಇಲ್ಲದಿದ್ದರೆ ಮಕ್ಕಳ ಭವಿಷ್ಯ ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಆನ್‌ಲೈನ್‌ ತರಗತಿಗೆ ಶುಲ್ಕ ನೀಡುವಂತಿಲ್ಲ ಎಂದು ಸರಕಾರವೇ ತಿಳಿಸಿದ್ದರೂ ಖಾಸಗಿ ಶಾಲೆಗಳು ಸರಕಾರದ ಆದೇಶವನ್ನು ಧಿಕ್ಕರಿಸಿ ಆನ್‌ಲೈನ್‌ ತರಗತಿಗೆ ಶುಲ್ಕ ಪಡೆಯುತ್ತಿವೆ. ಸರಕಾರದ ಆದೇಶದ ಪ್ರತಿಯನ್ನು ಶಾಲಾಡಳಿತ ಮಂಡಳಿಗಳಿಗೆ ತೋರಿಸಿದರೂ ನಮಗೆ ಇನ್ನೂ ಅಧಿಕೃತವಾಗಿ ಬಂದಿಲ್ಲ ಎಂಬ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.

ಖಾಸಗಿಯವರ ವಾದವೇನು?
1- ಬೋಧನೆ ಜತೆಗೆ ವೀಡಿಯೋ ಎಡಿಟಿಂಗ್‌ ಸೇರಿದಂತೆ ಶಿಕ್ಷಕರಿಗೆ ಹಲವು ಕೆಲಸಗಳಿವೆ.
2- ಶಾಲಾ ಬೋಧಕ- ಬೋಧಕೇತರ ಸಿಬಂದಿಗೆ ಆಡಳಿತ ಮಂಡಳಿಗಳು ವೇತನ ನೀಡಬೇಕಾಗಿದೆ.
3- ಶಾಲಾ ಕಟ್ಟಡಗಳ ಬಾಡಿಗೆ, ವಿದ್ಯುತ್‌ ಬಿಲ್‌ ಸೇರಿದಂತೆ ಶಾಲಾ ನಿರ್ವಹಣೆ ಖರ್ಚು-ವೆಚ್ಚ ಪಾವತಿಸಬೇಕಿದೆ.
4- ಪೋಷಕರು ಶುಲ್ಕ ಪಾವತಿಸದಿದ್ದರೆ ಆನ್‌ಲೈನ್‌ ತರಗತಿ ನಡೆಸಲು ಕಷ್ಟವಾಗುವುದರಿಂದ, ತರಗತಿ ಸ್ಥಗಿತಗೊಳಿಸದೇ ಬೇರೆ ದಾರಿ ಇಲ್ಲ.
5- ನಮ್ಮ ಪರಿಸ್ಥಿತಿಯನ್ನೂ ಪಾಲಕ- ಪೋಷಕರು ಅರ್ಥಮಾಡಿ ಕೊಂಡು ಶುಲ್ಕ ಪಾವತಿಸಬೇಕು.

ಪಾಲಕರ ವಾದವೇನು?
1- ಕಷ್ಟ ಕಾಲದಲ್ಲೂ ಶುಲ್ಕ ಕಟ್ಟಿ ಎನ್ನುವುದು ಎಷ್ಟು ಸರಿ?
2- ಶಿಕ್ಷಕರ ಬಗ್ಗೆ ನಮಗೂ ಅನುಕಂಪವಿದ್ದು, ಅವರ ನೆರವಿಗೆ ಸರಕಾರ ಬರಲಿ. ಪೋಷಕರ ಮೇಲೆ ಹೊರೆ ಹಾಕಬೇಡಿ.
3- ನಾವು ಕೊಡುವ ಶುಲ್ಕದ ಮೌಲ್ಯಕ್ಕೆ ತಕ್ಕುದಾದ ಪಾಠ ಬೇಕು. ಆನ್‌ಲೈನ್‌ನಲ್ಲಿ ಅದು ಸಿಗುತ್ತಿಲ್ಲ
4- ಆನ್‌ಲೈನ್‌ -ಆಫ್ಲೈನ್‌ ತರಗತಿಗೆ ವ್ಯತ್ಯಾಸ ವಿಲ್ಲವೇ? ಆಫ್ಲೈನ್‌ನಷ್ಟೇ ಶುಲ್ಕ ಕೇಳುವುದು ಎಷ್ಟು ಸರಿ?
5- ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರಕಾರವೇ ಕೂಡಲೇ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು

ಸರಕಾರದ ವಾದವೇನು?
1ಅನುಕೂಲಸ್ಥ ಪೋಷಕರು ಶುಲ್ಕ ಪಾವತಿಸಲಿ. ಆಗ ಶಿಕ್ಷಕರಿಗೆ ವೇತನ ನೀಡಲು ಸಾಧ್ಯವಾಗುತ್ತದೆ.
2ಖಾಸಗಿ ಶಾಲೆಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡಿಸುವ ಬಗ್ಗೆ ಆರ್ಥಿಕ ಇಲಾಖೆ ಜತೆ ಚರ್ಚಿಸುತ್ತೇವೆ.
3ಶಾಲೆಗಳ ಗೇಟ್‌ ಹೊರಗೆ ನಿಂತು ಪ್ರತಿಭಟನೆ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ.
4ಶುಕ್ರವಾರ ಖಾಸಗಿ ಶಾಲೆಗಳ ಸಂಘಟನೆಗಳ ಪ್ರತಿನಿಧಿಗಳ ಜತೆ ಆಯುಕ್ತರು ಸಭೆ ನಡೆಸಲಿದ್ದಾರೆ.
5ಆಯುಕ್ತರ ವರದಿ ಪರಿಶೀಲಿಸಿ, ಎಲ್ಲರ ಹಿತ ಕಾಯುವ ನಿರ್ಧಾರ ಕೈಗೊಳ್ಳುತ್ತೇವೆ.

Advertisement

ಓಲೈಕೆಗಾಗಿ ನಿಗಮ ಮಂಡಳಿಗಳನ್ನು ಸ್ಥಾಪಿಸಿ 500 ಕೋಟಿ ರೂ. ಮೀಸಲಿಡುವ ಬದಲು ಖಾಸಗಿ ಶಾಲೆಗಳಿಗೆ ಸರಕಾರವೇ ಶುಲ್ಕ ಪಾವತಿಸಲಿ. ಇಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿ ಮುಖ್ಯವಾಗಬೇಕು.
– ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಶುಲ್ಕ ಕಟ್ಟದಿದ್ದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ತರಗತಿ ರದ್ದುಪಡಿಸುವ ವಿಚಾರ ಮೂರ್ಖತನದ್ದು, ಸರಕಾರ ಇವರ ಜತೆ ಶಾಮೀಲಾಗಿದೆ. ಈ ಸರಕಾರ ಏನು ಮಾಡುತ್ತಿಲ್ಲ. ಬರೀ ಲೂಟಿ ಮಾಡುತ್ತಿದೆ.
– ಸಿದ್ದರಾಮಯ್ಯ, ವಿಪಕ್ಷ ನಾಯಕ

ಪೋಷಕರ ಹೊರೆ ತಪ್ಪಿಸಲು ಸರಕಾರ ಈ ಸಂದರ್ಭದಲ್ಲಿ ಸಂಬಳ ಇಲ್ಲದೆ ಕೆಲಸ ಮಾಡುತ್ತಿರುವ ಶಾಲೆಯ ಶಿಕ್ಷಕರಿಗೆ ಕನಿಷ್ಠ ಅರ್ಧದಷ್ಟು ಸಂಬಳವನ್ನಾದರೂ ನೀಡಬೇಕು.
– ಬಸವರಾಜ್‌ ಹೊರಟ್ಟಿ, ಮಾಜಿ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next