Advertisement

Google Pay ಪಿ-ಟು-ಪಿ ಸೇವೆಗೆ ಶುಲ್ಕ! ಗೂಗಲ್‌ ಪೇ ಹೇಳಿದ್ದೇನು? ಯಾರಿಗೆ ಶುಲ್ಕ ಅನ್ವಯ?

04:57 PM Nov 25, 2020 | Karthik A |

ಮಣಿಪಾಲ: ಗೂಗಲ್‌ ಪೇ ಇನ್ನು ಮುಂದೆ ಉಚಿತವಲ್ಲ; ಶುಲ್ಕ ವಿಧಿಸಲಾಗುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಸಹಜವಾಗಿ ಬಹುತೇಕ ಬಳಕೆದಾರರನ್ನು ಚಿಂತೆಗೇಡು ಮಾಡಿದೆ. ನೋಟು‌ ಅಮಾನೀಕರಣಗೊಂಡು ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಉತ್ತೇಜನ ದೊರೆತ ಬಳಿಕ ಗೂಗಲ್‌ ಪೇ ಸೇರಿದಂತೆ ಯುಪಿಐ ವ್ಯವಸ್ಥೆ ಮೂಲಕ ಪಾವತಿ ಮಾಡುವವರ ಸಂಖ್ಯೆ ಹೆಚ್ಚಾಗಿತ್ತು. Google Pay ಗೆ ಶುಲ್ಕ ಪಾವತಿಸಿದರೆ ಮಾತ್ರ ಕಾರ್ಯನಿರ್ವಹಿಸಲಿದೆ ಎಂಬ ಸುದ್ದಿ ತಲ್ಲಣಗೊಳಿಸಿತ್ತು.

Advertisement

ಇದು ವಿಷಯ ಹೌದಾದರೂ, ಭಾರತಕ್ಕೆ ಅನ್ವಯವಾಗುವುದಿಲ್ಲ. ಇದು ಅಮೆರಿಕಕ್ಕೆ ಮಾತ್ರ ಅನ್ವಯಿಸಲಿದೆ ಎಂದು ಗೂಗಲ್‌ ಪೇ ಸ್ಪಷ್ಟಪಡಿಸಿದೆ. ಭಾರತದಲ್ಲಿ ಬಳಕೆದಾರರು ತನ್ನ ಪಾವತಿ ವೇದಿಕೆಯಲ್ಲಿ ಹಣ ವರ್ಗಾವಣೆಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಮತ್ತು ಅಮೆರಿಕದಲ್ಲಿ ಮಾತ್ರ ಬಳಕೆದಾರರಿಗೆ ಶುಲ್ಕ ವಿಧಿಸಲಾಗಿದೆ ಎಂದು ಗೂಗಲ್ ಬುಧವಾರ ಸ್ಪಷ್ಟಪಡಿಸಿದೆ.

ಮುಂದಿನ ವರ್ಷದಿಂದ ಅಮೆರಿಕದಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಮರುವಿನ್ಯಾಸಗೊಳಿಸಲಾದ ಗೂಗಲ್ ಪೇ ಅಪ್ಲಿಕೇಶನ್ ಅನ್ನು ಪ್ರಾರಂಭಿಸುವುದಾಗಿ ಕಳೆದ ವಾರ ಗೂಗಲ್ ಘೋಷಿಸಿತ್ತು. ಈ ಅಪ್ಲಿಕೇಶನ್‌ ಮೂಲಕ 2021ರಿಂದ ಶುಲ್ಕ ವಿಧಿಸುವ ಕಾರ್ಯಕ್ಕೆ ಮುಂದಾಗಿದೆ. ಗೂಗಲ್ ಪೇ ತನ್ನ ವೆಬ್ ಅಪ್ಲಿಕೇಶನ್‌ನಲ್ಲಿ ಪೀರ್-ಟು-ಪೀರ್ ಪಾವತಿ ಸೌಲಭ್ಯವನ್ನು ಜನವರಿಯಲ್ಲಿ ಹಿಂದೆಗೆದುಕೊಳ್ಳಲು ಸಿದ್ಧವಾಗಿದೆ. ಜತೆಗೆ ತ್ವರಿತ ಹಣ ವರ್ಗಾವಣೆಗೆ ಶುಲ್ಕವನ್ನು ವಿಧಿಸಲಿದೆ.

ಮುಂದಿನ ವರ್ಷ ಜನವರಿಯಿಂದ ವೆಬ್ ಅಪ್ಲಿಕೇಶನ್ ಸೈಟ್ ಮೂಲಕ ಸೇವೆ ದೊರೆಯುವುದಿಲ್ಲ ಎಂದು ಬಳಕೆದಾರರಿಗೆ ತಿಳಿಸಿದೆ. 2021ರ ಆರಂಭದಿಂದ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು pay.google.com ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಹೊಸ Google Pay ಅಪ್ಲಿಕೇಶನ್ ಅನ್ನು ಬಳಸಬೇಕಾಗುತ್ತದೆ ಎಂದು ಗೂಗಲ್ ಪೇ ಸೂಚನೆ ನೀಡಿದೆ.

ಅಮೆರಿಕದಲ್ಲಿ ತ್ವರಿತ ಹಣ ವರ್ಗಾವಣೆಯ ಮೇಲೂ ಗೂಗಲ್ ಶುಲ್ಕ ವಿಧಿಸಲಿದೆ. ಈ ತನಕ ಉಚಿತವಾಗಿ ಬೇರೆಯವರಿಗೆ ಹಣ ಕಳುಹಿಸಬಹುದಾಗಿತ್ತು. ಗೂಗಲ್ ಕಳೆದ ವಾರ ಗೂಗಲ್ ಪೇ ಅಪ್ಲಿಕೇಶನ್‌ನಲ್ಲಿ (ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ) ಪ್ರಮುಖ ಮರುವಿನ್ಯಾಸಗೊಳಿಸಲಾದ ಆವೃತ್ತಿಯನ್ನುಪರಿಚಯಿಸಿತು. ಹೊಸ ಅಪ್ಲಿಕೇಶನ್ ವಹಿವಾಟುಗಳನ್ನು ನಿಭಾಯಿಸುವುದಲ್ಲದೆ, ದೈನಂದಿನ ಖರ್ಚಿನ ಬಗ್ಗೆ ನಿಗಾ ಇಡಲು ಅನುಮತಿಸುತ್ತದೆ. ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್ ಜತೆಗೆ ಮೆಸೇಜಿಂಗ್ ಸಾಧನವಾಗಿಯೂ ಕಾರ್ಯನಿರ್ವಹಿಸುತ್ತದೆ.

Advertisement

ಈ ಶುಲ್ಕಗಳು ಯುಎಸ್‌ಗೆ ಮಾತ್ರ ಸೀಮಿತವಾಗಿದ್ದು, ಭಾರತೀಯರು ಚಿಂತಿಸಬೇಕಾದ ಅಗತ್ಯ ಇಲ್ಲ. ಗೂಗಲ್ ಪೇ ಭಾರತದಲ್ಲಿ 67 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಗೂಗಲ್ ಪೇ ಫಾರ್ ಬಿಸಿನೆಸ್ ಜೂನ್ 2020 ರಲ್ಲಿ 3 ಮಿಲಿಯನ್ ವ್ಯಾಪಾರಿಗಳನ್ನುಸಂಪಾದಿಸಿದೆ. ಭಾರತದಲ್ಲಿ ಪೇಟಿಎಂ, ವಾಲ್ಮಾರ್ಟ್ ಒಡೆತನದ ಫೋನ್‌ಪೇ ಮತ್ತು ಅಮೆಜಾನ್ ಪೇ ಅನಂತಹ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next