ನವದೆಹಲಿ:ಬಾಹ್ಯಾಕಾಶ ನೌಕೆಗಳನ್ನು ಯಶಸ್ವಿಯಾಗಿ ಉಡಾಯಿಸಿ ಖ್ಯಾತಿ ಪಡೆದ ಇಸ್ರೋ ದೇಶದಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಸಿದ್ಧತೆ ನಡೆಸಿದೆ. ಅದಕ್ಕೆ ಪೂರಕವಾಗಿ ಕಾರ್ಯಸಾಧ್ಯ ಅಧ್ಯಯನವನ್ನೂ ನಡೆಸಿದೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ತಿಳಿಸಿದೆ.
ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಸಹಾಯಕ ಸಚಿವರಾಗಿರುವ ಡಾ.ಜಿತೇಂದ್ರ ಸಿಂಗ್ ಅವರು ಈ ಬಗ್ಗೆ ಲಿಖಿತ ಉತ್ತರ ನೀಡಿದ್ದು “ಉದ್ದೇಶಿತ ಗಗನಯಾನ ಯಶಸ್ವಿಯಾದ ಬಳಿಕ ಬಾಹ್ಯಾಕಾಶ ಪ್ರವಾಸೋದ್ಯಮವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಸಬ್-ಆರ್ಬಿಟಲ್ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ನಡೆಸಲು ಇಸ್ರೋ ಕಾರ್ಯಸಾಧ್ಯ ಅಧ್ಯಯನ ನಡೆಸಿದೆ.
ಆ ನಿಟ್ಟಿನಲ್ಲಿ ಹಲವು ತಂತ್ರಜ್ಞಾನಗಳನ್ನು ಬಳಕೆ ಮಾಡುವುದರ ಬಗ್ಗೆ ಅಧ್ಯಯನ ನಡೆಸುತ್ತಿದೆ. ಗಗನಯಾನವನ್ನು ಕೈಗೆತ್ತಿಕೊಂಡಿರುವುದು ಕೂಡ ಸಬ್-ಆರ್ಬಿಟಲ್ ವ್ಯಾಪ್ತಿಯಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮ ನಡೆಸಲು ಸಾಧ್ಯವಿದೆಯೇ ಎಂಬ ಅಂಶವನ್ನು ಅಧ್ಯಯನ ನಡೆಸಲು ಕೂಡ ಆಗಿದೆ’ ಎಂದು ಅವರು ಹೇಳಿದ್ದಾರೆ.