Advertisement

ಚೀನಕ್ಕೆ ಗಿಲ್ಗಿಟ್‌- ಬಾಲ್ಟಿಸ್ಥಾನ ಅಡವು: ಆರ್ಥಿಕ ದುಃಸ್ಥಿತಿ ನಿವಾರಿಸಲು ಪಾಕ್‌ ದುಸ್ಸಾಹಸ

12:30 AM Jun 24, 2022 | Team Udayavani |

ಇಸ್ಲಾಮಾಬಾದ್‌: ಆರ್ಥಿಕ ದುಃಸ್ಥಿತಿ ಮತ್ತು ಸಾಲದಿಂದ ಪಾರಾಗಲು ಭಾರತದ ಅವಿಭಾಜ್ಯ ಅಂಗವಾಗಿರುವ ಗಿಲ್ಗಿಟ್‌- ಬಾಲ್ಟಿಸ್ಥಾನ (ಜಿಬಿ)ವನ್ನು ಚೀನಕ್ಕೆ “ಭೋಗ್ಯ’ದ ರೂಪದಲ್ಲಿ ನೀಡಲು ಪಾಕಿಸ್ಥಾನ ಮುಂದಾಗಿದೆ ಎಂದು ಖಚಿತ ಮೂಲಗಳು ಹೇಳಿವೆ.

Advertisement

ಪಾಕ್‌ ಆಕ್ರಮಿತ ಕಾಶ್ಮೀರದ ಅತೀ ದೊಡ್ಡ ಭಾಗವಾಗಿ ಗಿಲ್ಗಿಟ್‌-ಬಾಲ್ಟಿಸ್ಥಾನ ಪ್ರಾಂತಗಳಿದ್ದು, ಅಲ್ಲಿ ತನ್ನದೇ ಸ್ಥಳೀಯ ಸರಕಾರವನ್ನು ಪಾಕಿಸ್ಥಾನ ನಡೆಸುತ್ತಿದೆ. ಈ ಪ್ರಾಂತವು ಪರಭಾರೆಯಾದರೆ ಆ ಭಾಗದಲ್ಲಿ ಸಾಮಾಜಿಕ- ಆರ್ಥಿಕ ತಲ್ಲಣ ಉಂಟಾಗಲಿದೆ. ಅದು

ನೇರವಾಗಿ ಭಾರತದ ಮೇಲೂ ಪ್ರತಿಕೂಲ ಪರಿಣಾಮ ಬೀರುವುದು ಖಚಿತ. ತನ್ನ ಸಾಲದ ಹೊರೆ ಕಡಿಮೆ ಮಾಡಿ ಕೊಳ್ಳಲು ಪಾಕ್‌ ಇಂಥ ನಿರ್ಧಾರಕ್ಕೆ ಬಂದಿರಬಹುದು ಎಂದು ಕಾರಕೋರಂ ರಾಷ್ಟ್ರೀಯ ಚಳವಳಿ ಎಂಬ ಸಂಸ್ಥೆಯ ಅಧ್ಯಕ್ಷ ಮುಮ್ತಾಜ್‌ ನಗ್ರಿ ಹೇಳಿದ್ದಾರೆ.

ಇದರಿಂದ ಈ ಭಾಗ ಮುಂದಿನ ದಿನಗಳಲ್ಲಿ “ಯುದ್ಧ ಭೂಮಿ’ಯಾಗಬಹುದು ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಚೀನಕ್ಕೇನು ಲಾಭ? :

Advertisement

ದಕ್ಷಿಣ ಏಷ್ಯಾದಲ್ಲಿ ಕಬಂಧ ಬಾಹುಗಳನ್ನು ವಿಸ್ತರಿಸಲು ಚೀನ ತುದಿಗಾಲಲ್ಲಿ ನಿಂತಿದೆ. ಗಿಲ್ಗಿಟ್‌- ಬಾಲ್ಟಿಸ್ಥಾನ ಪ್ರಾಂತ ಹಸ್ತಾಂತರವಾದರೆ ಚೀನದ ಸಾಮ್ರಾಜ್ಯಶಾಹಿ ಧೋರಣೆಗೆ ಇಂಬು ಕೊಟ್ಟಂತೆ ಆಗುತ್ತದೆ. 1963ರಲ್ಲಿ ಗಿಲ್ಗಿಟ್‌- ಬಾಲ್ಟಿಸ್ಥಾನ ಪ್ರಾಂತಕ್ಕೆ ಸೇರಿದ ಕಾರಕೋರಂ ಪ್ರಾಂತವನ್ನು ಪಾಕಿಸ್ಥಾನ ಸರಕಾರ ಚೀನಕ್ಕೆ ಬಿಟ್ಟುಕೊಟ್ಟಿತ್ತು. ಅಲ್ಲಿಂದಲೇ ಈಗ ಚೀನದ ಮಹತ್ವಾಕಾಂಕ್ಷೆಯ ಸಿಲ್ಕ್ ರೂಟ್‌ ಹೆದ್ದಾರಿ ಹಾದುಹೋಗುತ್ತಿದೆ. ಇನ್ನು ತನ್ನ ಹೆದ್ದಾರಿ ಸಾಗುವ ಜಾಗದಲ್ಲಿ ತನ್ನದೇ ಪುಟ್ಟ ಸಾಮ್ರಾಜ್ಯವನ್ನು ಅಥವಾ ಸೇನಾ ವಲಯವನ್ನು ಚೀನ ನಿರ್ಮಿಸುವ ಸಾಧ್ಯತೆಗಳಿವೆ.

ಭಾರತಕ್ಕೆ ಹೊಸ ಆತಂಕ :

ದಶಕಗಳ ಹಿಂದೆ ಉತ್ತರ ಕಾಶ್ಮೀರದ ಪೂರ್ವ ಭಾಗವಾದ ಅಕ್ಸಾಯ್‌ ಚಿನ್‌ ವಶಪಡಿಸಿಕೊಂಡಿದ್ದ ಚೀನಕ್ಕೆ ಈಗ ಕಾಶ್ಮೀರದ ಪಶ್ಚಿಮ ಭಾಗವೂ ಸಿಗುವ ಅಪಾಯವಿದೆ. ಅದರ ಜತೆಗೆ ಪೂರ್ವ ಲಡಾಖ್‌ನಲ್ಲಿ ಮಾತ್ರ ಭಾರತವನ್ನು ಕಾಡು ತ್ತಿದ್ದ ಚೀನ ಇನ್ನು ಮುಂದೆ ಗಿಲ್ಗಿಟ್‌- ಬಾಲ್ಟಿಸ್ಥಾನ ಕಡೆಯಿಂದಲೂ ಕಾಡುವ ಭೀತಿ ಎದುರಾಗಲಿದೆ. ಅಷ್ಟೇ ಅಲ್ಲದೆ ಆ ಪ್ರಾಂತದಲ್ಲಿ ಪಾಕಿಸ್ಥಾನ ಸಾಕಿ ಸಲಹಿರುವ ಉಗ್ರರಿಗೆ ಚೀನದಿಂದ ರಕ್ಷಣೆಯೂ ಸಿಗಲಿದ್ದು, ಅಲ್ಲಿ ಚೀನವು ಪಾಕ್‌ನ “ಬಿ ಟೀಂ’ ಆಗಿ ಕೆಲಸ ಮಾಡುವ ಅಪಾಯವಿದೆ.

ಮತ್ತೆ 17 ಸಾವಿರಕೋ.ರೂ. ಸಾಲ :

ತನ್ನ ಪರಮ ಮಿತ್ರ ಚೀನದಿಂದ ಪಾಕಿಸ್ಥಾನ ಮತ್ತೆ 17 ಸಾವಿರ ಕೋ.ರೂ. ಸಾಲ ಪಡೆಯಲು ಮುಂದಾಗಿದೆ. ಬುಧ ವಾರ ಈ ಬಗ್ಗೆ ಎರಡು ದೇಶಗಳ ನಡುವೆ ಒಪ್ಪಂದ ಏರ್ಪಟ್ಟಿದ್ದು, ಚೀನದ ಬ್ಯಾಂಕ್‌ಗಳ ಒಕ್ಕೂಟದಿಂದ ಪಾಕ್‌ಗೆ ಸಾಲ ನೀಡಲು ನಿರ್ಧರಿಸಲಾಗಿದೆ. ಈ ಸಂಬಂಧ ಚೀನಕ್ಕೆ ಪಾಕಿಸ್ಥಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾ ಯಿಲ್‌ ಧನ್ಯವಾದ ಅರ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next