ನವದೆಹಲಿ: ಈರುಳ್ಳಿ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಬಿಹಾರ ರಾಜ್ಯ ಸಹಕಾರಿ ಮಾರುಕಟ್ಟೆ ಕೇಂದ್ರ(ಬಿಎಸ್ ಸಿಎಂಯುಎಲ್) ಒಂದು ಕಿಲೋ ಈರುಳ್ಳಿಗೆ 35ರೂಪಾಯಿಯಂತೆ ಮಾರಾಟ ಮಾಡುತ್ತಿದ್ದು, ಇದನ್ನು ಕೊಳ್ಳಲು ಜನರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ. ಆದರೆ ಯಾವುದೇ ರಕ್ಷಣೆ ಕೊಡಲು ಸಾಧ್ಯವಿಲ್ಲ ಎಂದು ಇಲಾಖೆ ಸೂಚನೆ ನೀಡಿದ್ದರಿಂದ ಅಧಿಕಾರಿಗಳು ತಲೆಗೆ ಹೆಲ್ಮೆಟ್ ಧರಿಸಿ ಈರುಳ್ಳಿ ವಿತರಿಸುತ್ತಿದ್ದಾರೆ!
ಬಿಹಾರದ ಜನತೆಗೆ ಬಹುದೊಡ್ಡ ನಿರಾಳತೆ ಎಂಬಂತೆ, ಸಹಕಾರಿ ಮಾರುಕಟ್ಟೆ ಕೌಂಟರ್ ನಲ್ಲಿ ಕಳೆದ ವಾರದಿಂದ ಕಡಿಮೆ ದರಕ್ಕೆ ಈರುಳ್ಳಿಯನ್ನು ಮಾರಾಟ ಮಾಡುತ್ತಿದೆ. ಒಬ್ಬ ವ್ಯಕ್ತಿ ಎರಡು ಕೆ.ಜಿ. ಈರುಳ್ಳಿ ಖರೀದಿಸಬಹುದಾಗಿದೆ. ಆದರೆ ವಿವಾಹ ಕಾರ್ಯಕ್ರಮ ಇದ್ದಲ್ಲಿ, ಆಮಂತ್ರಣ ಪತ್ರಿಕೆ ತೋರಿಸಿದರೆ ಅಂತಹ ವ್ಯಕ್ತಿ 25 ಕೆಜಿ ಈರುಳ್ಳಿ ಖರೀದಿಸಬಹುದಾಗಿದೆ ಎಂದು ವರದಿ ತಿಳಿಸಿದೆ.
ಈರುಳ್ಳಿ ಕೊಳ್ಳಲು ಜನರು ಮುಗಿಬಿದ್ದಿದ್ದರಿಂದ ಕಾಲ್ತುಳಿತ ಅಥವಾ ಕಲ್ಲು ತೂರಾಟ ನಡೆಯಬಹುದು ಎಂಬ ಭಯದ ಹಿನ್ನೆಲೆಯಲ್ಲಿ ಮಾರಾಟಗಾರರು ಹೆಲ್ಮೆಟ್ ಧರಿಸಿ ಈರುಳ್ಳಿ ವಿತರಿಸುತ್ತಿದ್ದಾರೆ ಎಂದು ಶನಿವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಎನ್ ಐ ಸುದ್ದಿ ಸಂಸ್ಥೆ ಜತೆ ಮಾತನಾಡಿರುವ ಅಧಿಕಾರಿ ರೋಹಿತ್ ಕುಮಾರ್, ಈರುಳ್ಳಿ ಖರೀದಿ ವೇಳೆ ಕಲ್ಲು ತೂರಾಟ, ಕಾಲ್ತುಳಿತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ನಮ್ಮ ಮುಂದೆ ಬೇರೆ ಯಾವುದೇ ಆಯ್ಕೆಗಳಿಲ್ಲ. ಹೀಗಾಗಿ ಯಾವುದೇ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿರುವುದಾಗಿ ವಿವರಿಸಿದ್ದಾರೆ.
ಪಶ್ಚಿಮಬಂಗಾಳದಲ್ಲಿ ಈರುಳ್ಳಿ ಕೆಜಿಗೆ 100ರೂಪಾಯಿಗೆ ಏರಿತ್ತು. ಉಳಿದ ರಾಜ್ಯಗಳಲ್ಲಿ 70-80 ರೂಪಾಯಿಗೆ ಏರಿದ್ದು, ಇದರಿಂದಾಗಿ ಈರುಳ್ಳಿ ಖರೀದಿ ಜನರಿಗೆ ದುಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ದರ ನಿಯಂತ್ರಣ ಹಾಗೂ ದೇಶೀಯ ಮಾರಾಟ ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 1.2 ಲಕ್ಷ ಟನ್ ಗಳಷ್ಟು ಈರುಳ್ಳಿ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.