ಕಲಬುರಗಿ: ನಗರದಲ್ಲಿ ಸುಪ್ರಿಂಕೋರ್ಟ್ ನಿರ್ದೇಶನದಂತೆ ಮಾರ್ಚ್ 1ರಿಂದ ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಜಾರಿಗೊಳಿಸಲಾಗಿದೆ. ಇದರ ಬೆನ್ನಲ್ಲಿಯೇ ಕಳೆದ ಎರಡು ದಿನಗಳಿಂದ ಭಾರಿ ಪ್ರಮಾಣದಲ್ಲಿ ವಾಹನ ಸವಾರರಿಗೆ ದಂಡ ವಿಧಿಸುತ್ತಿರುವುದರಿಂದ ಅನಿವಾರ್ಯವಾಗಿ ಸವಾರರು ಹೆಲ್ಮೆಟ್ ಖರೀದಿಗೆ ಮುಗಿಬಿದ್ದಿದ್ದಾರೆ.
ರಸ್ತೆ ಬದಿಯಲ್ಲಿ ಹೆಲ್ಮೆಟ್ ಖರೀದಿಯೂ ಜೋರಾಗಿದೆ. ಹೆಲ್ಮೆಟ್ ಕಡ್ಡಾಯದ ಹಿನ್ನೆಲೆಯಲ್ಲಿ ಅಲ್ಲಲ್ಲಿ ರಸ್ತೆಗಳಲ್ಲಿ ಮಾರಾಟಗಾರರು ಪ್ರತ್ಯಕ್ಷವಾಗಿದ್ದಾರೆ. ಮೊದಲ ದಿ. ಮಾ.1ರಂದು ಭಾರಿ ಪ್ರಮಾಣದಲ್ಲಿ ಸಂಚಾರಿ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ. ಮಾ.2ರಂದು ದಂಡ ವಿಧಿಸುವ ಪ್ರಕ್ರಿಯೆಯಲ್ಲಿ ತುಸು ಹಿನ್ನಡೆ ಉಂಟಾಗಿದ್ದು, ಹಲವು ಸಂಘಟನೆಗಳು ಹೆಲ್ಮೆಟ್ ಕಡ್ಡಾಯ ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಆರಂಭದ ದಿನದಂದು ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಜಗತ್ ವೃತ್ತ, ಸೂಪರ್ ಮಾರ್ಕೆಟ್ ಚೌಕ್ ವೃತ್ತ ಮುಂತಾದೆಡೆ ನೂರಾರು ದ್ವಿಚಕ್ರವಾಹನಗಳನ್ನು ತಡೆದು, ಸವಾರರಿಗೆ ದಂಡ ವಿಧಿಸಿದ್ದರು. ಈ ಎಲ್ಲ ವೃತ್ತಗಳಲ್ಲಿ ಎರಡನೇ ದಿನದಂದು ದಂಡ ವಿಧಿಧಿಸುವ ಕ್ರಮಗಳು ಕಂಡು ಬರಲಿಲ್ಲ. ಬಹುತೇಕ ಶೇ. 70ರಷ್ಟು ಜನ ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಇಲ್ಲದೇ ಸವಾರಿ ಮಾಡಿದರು.
ಸಂಚಾರಿ ಠಾಣೆಯ ಪೊಲೀಸರು ಕಂಡು ಕಾಣದಂತೆ ಸುಮ್ಮನಿದ್ದರು. ಇದರಿಂದಾಗಿ ಹೆಲ್ಮೆಟ್ ಹಾಕಿಕೊಂಡು ಸವಾರಿ ಮಾಡುವವರೂ ಮತ್ತೆ ಸವಾರಿ ಮಾಡುವಾಗ ತಮ್ಮ ಹೆಲ್ಮೆಟ್ ಬಿಟ್ಟು ಸವಾರಿ ಮಾಡಿದ್ದೂ ಕಂಡುಬಂತು. ಆರಂಭದ ದಿನದಂದು ದಂಡ ಹಾಕಿಸಿಕೊಂಡ ಅಮಾಯಕರು ಮತ್ತೆ ದಂಡನೆಗೆ ಒಳಗಾಗದಿರಲು ಹೆಲ್ಮೆಟ್ ಖರೀದಿಯಲ್ಲಿ ತೊಡಗಿದ್ದರು.
ನಗರದ ಮುಖ್ಯ ರಸ್ತೆಗಳ ಬದಿಗಳಲ್ಲಿನ ಹೆಲ್ಮೆಟ್‌ಗಳನ್ನು ಖರೀದಿಸಲು ಸವಾರರು ಮುಂದಾದ ದೃಶ್ಯಗಳು ಕಂಡುಬಂದವು. ಈ ಎಲ್ಲದರ ಮಧ್ಯೆ, ಬೇಸಿಗೆಯ ಬಿಸಿಲಿನ ಆರಂಭವು ಆಗಿದ್ದು, 39 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪದಿಂದ ಸವಾರರು ಬಸವಳಿಯುತ್ತಿದ್ದಾರೆ. ಹೀಗಾಗಿ ಹೆಲ್ಮೆಟ್ ಕಡ್ಡಾಯಕ್ಕೆ ವಿನಾಯಿತಿ ನೀಡಬೇಕೆಂಬ ಒತ್ತಾಯಗಳು ಎಲ್ಲೆಡೆ ಕೇಳಿಬಂದಿದ್ದು, ಹೆಲ್ಮೆಟ್ ಕಡ್ಡಾಯದ ವಿರುದ್ಧ ಹೋರಾಟಗಳೂ ಆರಂಭಗೊಂಡಿವೆ.
ಇದರ ಮಧ್ಯೆ ಜಿಲ್ಲಾಡಳಿತ ಈ ಕ್ರಮವನ್ನು ಕೆಲವು ಸಂಘಟನೆಗಳ ಮುಖಂಡರು, ಇದೊಂದು ಸರಕಾರಕ್ಕೆ ಸುಂಕ ಸಂಗ್ರಹ ಮಾಡುವ ಕ್ರಮವಾಗಿದೆ. ಈ ಹಿಂದೆ ಎರಡು ಬಾರಿ ಇಂತಹ ಪ್ರಹಸನ ನಡೆಯಿತು. ಆಗಲೂ ಹೆಲ್ಮೆಟ್ ಖರೀದಿ ಜೋರಾಯಿತು. ಬಳಿಕ ಎಂದಿನಂತೆ ಬಿಸಿಲೂರಿನಲ್ಲಿ ಹೆಲ್ಮೆಟ್ ಇಲ್ಲದೆಯೇ ವಾಹನ ನಡೆಸುವ ಕ್ರಮ ಜಾರಿಯಲ್ಲಿತ್ತು. ಈಗ ಪುನಃ ಅಂತಹದೇ ಮತ್ತೂಂದು ಪ್ರಹಸನ ನಡೆಯಲಿದೆ. ಸರಕಾರಕ್ಕೆ ಸುಂಕ ಸಂಗ್ರಹಿಸುವ ಕ್ರಮ ನಡೆದಿದೆ ಎಂದು ಕಟುಕಿದ್ದಾರೆ.