Advertisement

ಕೆರೆಯ ಕಡೆಗೆ ರಸ್ತೆ ಕುಸಿತದ ಭೀತಿ

11:13 PM Sep 29, 2019 | Sriram |

ಜಿಡೆಕಲ್ಲ: ಪುತ್ತೂರು ನಗರಸಭಾ ವ್ಯಾಪ್ತಿಯ ಜಿಡೆಕಲ್ಲು ಕಂಚಲಗುರಿ ರಸ್ತೆಯ ಪಕ್ಕದಲ್ಲಿಯೇ ಭಾರೀ ಗಾತ್ರದ ಕೆರೆಯೊಂದು ಅಪಾಯವನ್ನು ಆಹ್ವಾನಿಸುತ್ತಿದೆ.

Advertisement

ರಸ್ತೆಯ ಪಕ್ಕದಲ್ಲಿಯೇ ಇರುವ ಈ ಖಾಸಗಿ ಕೆರೆ ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಿದ್ದು, ರಸ್ತೆಯ ಅಡಿ ಭಾಗದ ತನಕ ಮಣ್ಣು ಕೊರೆದು ಹೋಗಿದೆ. ಇದರಿಂದ ರಸ್ತೆಯೂ ಕುಸಿಯುವ ಅಪಾಯ ಉಂಟಾಗಿದೆ.

ದಿನನಿತ್ಯ ನೂರಾರು ವಾಹನಗಳು ಓಡಾಡುವ ಬೆದ್ರಾಳದಿಂದ ಜಿಡೆಕಲ್ಲು ಸಂಪರ್ಕ ರಸ್ತೆಯಲ್ಲಿ ಕಂಚಲಗುರಿಯ ಈ ದೊಡ್ಡ ಕೆರೆಗೆ ಯಾವುದೇ ತಡೆಗೋಡೆಗಳಿಲ್ಲ. ಈ ಭಾಗದಲ್ಲಿ ರಸ್ತೆ ತಿರುವು ಹೊಂದಿರುವ ಕಾರಣ ಸ್ವಲ್ಪ ಅಜಾಗರೂಕತೆಯಾದರೂ ವಾಹನಗಳು ಕೆರೆಗೆ ಬೀಳುವ ಅಪಾಯವಿದೆ. ಕೆಲವು ದಿನಗಳ ಹಿಂದೆ ಕೌಡಿಚ್ಚಾರು ಮಡ್ಯಂಗಳದಲ್ಲಿ 4 ಮಂದಿಯನ್ನು ಬಲಿ ಪಡೆದ ಕೆರೆಯ ರೀತಿಯಲ್ಲಿಯೇ ಇದೆ. ಈ ಕೆರೆ ಇರುವ ರಸ್ತೆ ಪಕ್ಕ ಕಾಂಕ್ರೀಟ್‌ ತಡೆಗೋಡೆ ನಿರ್ಮಾಣ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕಂಚಲಗುರಿಯಲ್ಲಿರುವ ಕೆರೆಯ ಇನ್ನೊಂದು ಪಾರ್ಶ್ವದಲ್ಲಿ ಐದಾರು ಮನೆಗಳಿವೆ. ಈ ಮನೆಗಳಲ್ಲಿ ಪುಟ್ಟ ಮಕ್ಕಳೂ ಇದ್ದಾರೆ. ಈ ಕೆರೆಯನ್ನು ಮುಚ್ಚುವಂತೆ ಈ ಕುಟುಂಬಗಳ ಆಗ್ರಹವೂ ಇದೆ. ಕೆರೆಗೆ ಎರಡೂ ಭಾಗಗಳಿಂದ ತಡೆಗೋಡೆ ನಿರ್ಮಿಸಿದರೆ ಮಾತ್ರ ಅಪಾಯ ತಪ್ಪಿಸಬಹುದಾಗಿದೆ.

ಬಳಕೆಯ ಹಿನ್ನೆಲೆ
ವಿಶಾಲವಾಗಿರುವ ಈ ಕೆರೆಯಲ್ಲಿ ಹಿಂದೆ ಈ ಭಾಗದ ಜನರು ಬಟ್ಟೆಗಳನ್ನು ಒಗೆಯುತ್ತಿದ್ದರು. ಪುರಸಭೆ ಇದ್ದ ಅವಧಿಯಲ್ಲಿ ಸಾರ್ವಜನಿಕರಿಗೆ ನೀರಿನ ಕೊರತೆ ಉಂಟಾದಾಗ ಇದೇ ಕೆರೆಯಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಇದೀಗ ಖಾಸಗಿ ಕೆರೆಯಾಗಿದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೆರೆಗೆ ತಡೆಗೋಡೆ ನಿರ್ಮಿಸಿ ಎಂದು ನಗರಸಭಾ ಸದಸ್ಯರಲ್ಲಿ ಹಲವು ಬಾರಿ ಸ್ಥಳೀಯರು ಮನವಿ ಮಾಡಿದ್ದಾರೆ. ಆದರೆ ಪೂರಕ ಸ್ಪಂದನೆ ವ್ಯಕ್ತವಾಗಿಲ್ಲ.

Advertisement

ಹಾಲಿ ಯಾರ ಉಪಯೋಗಕ್ಕೂ ಇಲ್ಲದ ಕೆರೆಯನ್ನು ಶಾಶ್ವತವಾಗಿ ಮುಚ್ಚುವ ಅಥವಾ ಕೆರೆಗೆ ಕಾಂಕ್ರೀಟ್‌ ತಡೆಗೋಡೆ ನಿರ್ಮಿಸಿ ಕೆರೆ ಯನ್ನು ಉಳಿಸಿಕೊಳ್ಳುವ ಅವಕಾಶಗಳಿವೆ. ಸರಿಪಡಿಸದಿದ್ದರೆ ಮಳೆಗಾಲದಲ್ಲಿ ಬೆದ್ರಾಳ ಜಿಡೆಕಲ್ಲು ಸಂಪರ್ಕ ರಸ್ತೆ ಕುಸಿದು ಕೆರೆಗೆ ಆಹುತಿ ಯಾಗುವುದರಲ್ಲಿ ಸಂದೇಹ ಇಲ್ಲ, ಜತೆಗೆ ವಾಹನ ಸವಾರರಿಗೂ ಅಪಾಯ ತಪ್ಪಿದ್ದಲ್ಲ.

ಸೂಚನ ಫಲಕ ಅಗತ್ಯ
ಹಲವು ವರ್ಷಗಳಿಂದ ಕಂಚಲಗುರಿ ಭಾಗದಲ್ಲಿ ಅಪಾಯದ ಸ್ಥಿತಿ ಇದೆ. ರಸ್ತೆಯ ಭಾಗದ ವರೆಗೂ ಕೆರೆ ಅಗಲವನ್ನು ವಿಸ್ತರಿಸುತ್ತಾ ಬಂದಿದೆ. ತಡೆಗೋಡೆ ನಿರ್ಮಾಣಕ್ಕೂ ಮೊದಲು ನಗರಸಭೆಯಿಂದ ಇಲ್ಲೊಂದು ಅಪಾಯದ ಸೂಚನ ಫಲಕ ಅಗತ್ಯವಾಗಿ ಅಳವಡಿಸಬೇಕು. ಅನಂತರ ರಸ್ತೆ ಬದಿಯಿಂದ ಕಾಂಕ್ರೀಟ್‌ ತಡೆಗೋಡೆ ನಿರ್ಮಿಸಬೇಕು.
– ಲೋಕೇಶ್‌ ಗೌಡ ಅಲುಂಬುಡ,
ಸಾಮಾಜಿಕ ಕಾರ್ಯಕರ್ತರು

Advertisement

Udayavani is now on Telegram. Click here to join our channel and stay updated with the latest news.

Next