Advertisement

ಕೆರೆ ಒಡ್ಡು ಒಡೆಯುವ ಭೀತಿ-6 ವರ್ಷವಾದ್ರೂ ದುರಸ್ತಿಯಿಲ್ಲ

04:57 PM Aug 10, 2022 | Team Udayavani |

ಅಫಜಲಪುರ: ನೂರಾರು ಎಕರೆ ಜಮೀನುಗಳಿಗೆ ನೀರೊದಗಿಸುವ, ಜಲಮೂಲಗಳಿಗೆ ಅಂತರ್ಜಲ ಮಟ್ಟ ಹೆಚ್ಚಿಸುವ ಪಟ್ಟಣದ ಕೆರೆ ಒಡ್ಡಿಗೆ ಬಿರುಕು ಬಿಟ್ಟು ಆರು ವರ್ಷ ಗತಿಸಿದರೂ ಇನ್ನೂ ದುರಸ್ತಿ ಭಾಗ್ಯ ಕಂಡಿಲ್ಲ. ಕಳೆದ ಆರು ವರ್ಷಗಳ ಹಿಂದೆ ಕೆರೆ ಒಡ್ಡಿಗೆ ಬಿರುಕು ಬಿಟ್ಟು, ನೆಲ ಕುಸಿದು ಆತಂಕ ಹೆಚ್ಚಿಸಿತ್ತು. ಆಗಿನಿಂದ ಈಗಿನವರೆಗೆ ಬಿರುಕು ಬಿಟ್ಟಾಗಲೊಮ್ಮೆ ಮುರುಮ್‌ ಹಾಕಲಾಗುತ್ತಿದೆಯೇ ವಿನಃ ಶಾಶ್ವತ ದುರಸ್ತಿ ಕಾರ್ಯ ನಡೆಯುತ್ತಿಲ್ಲ.

Advertisement

ಲಕ್ಷಾಂತರ ರೂ. ಖರ್ಚು: ಕೆರೆ ಒಡ್ಡಿಗೆ ಬಿರುಕು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ದುರಸ್ತಿ ಹೆಸರಿನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದೆಯಾದರೂ ಶಾಶ್ವತ ಪರಿಹಾರ ಮಾತ್ರ ದೊರಕುತ್ತಿಲ್ಲ.

ಒಡ್ಡು ಒಡೆಯುವ ಭೀತಿ: ಕಳೆದ ಆರು ವರ್ಷದ ಹಿಂದೆ ಕೆರೆ ಒಡ್ಡಿಗೆ ಬಿರುಕು ಬಿಟ್ಟು ಆತಂಕ ಹೆಚ್ಚಿಸಿತ್ತು. ಸಣ್ಣ ನೀರಾವರಿ ಇಲಾಖೆಯವರು ಆಗಿನಿಂದ ಇಲ್ಲಿಯವರೆಗೆ ಜವಾಬ್ದಾರಿಯಿಂದ ಕೆಲಸ ಮಾಡಿದ್ದರೆ ಇಷ್ಟೊತ್ತಿಗೆ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಯ ಒಡ್ಡು ಒಡೆಯುವ ಹಂತಕ್ಕೆ ಬಂದಿದೆ.

ಒಂದು ವೇಳೆ ಕೆರೆ ಒಡೆದರೆ ಇಡೀ ಪಟ್ಟಣವೇ ಜಲಾವೃತವಾಗುವುದು ನಿಶ್ಚಿತ. ಕೆರೆ ಒಡ್ಡಿಗೆ ಬಿರುಕು ಬಿಟ್ಟಾಗಲೊಮ್ಮೆ ಮುರುಮ್‌ ಹಾಕಿಸಿ ಕೈ ತೊಳೆದುಕೊಳ್ಳುತ್ತಿರುವ ಬದಲು ತಜ್ಞರನ್ನು ಕರೆಸಿ, ಸ್ಥಳ ಪರಿಶೀಲನೆ ನಡೆಸಬೇಕು. ಕೆರೆಯಿಂದ ಯಾವುದೇ ಅಪಾಯವಾಗದಂತೆ ಕ್ರಮ ಕೈಗೊಳ್ಳಬೇಕು. ಈ ಬಾರಿ ಮಳೆಯಿಂದಾದ ಹೊಡೆತ ತಡೆದುಕೊಳ್ಳಲು ಪ್ಲಾಸ್ಟಿಕ್‌ ಮುಚ್ಚಲಾಗಿದೆ. ಇದು ಎಷ್ಟು ದಿನ ಮಳೆಯ ರಭಸ ತಡೆದುಕೊಳ್ಳುತ್ತದೆ ಎಂಬುದು ತಿಳಿಯುತ್ತಿಲ್ಲ.

ಕೆರೆಯ ಒಡ್ಡು (ಏರಿಯು) ಬಿರುಕು ಬಿಟ್ಟ ಸ್ಥಳದಲ್ಲಿ ಮಳೆಯ ನೀರು ಹೋಗಬಾರದೆಂದು ಪ್ಲಾಸ್ಟಿಕ್‌ ಹೊದಿಕೆ ಹಾಕಲಾಗಿದೆ. ರವಿವಾರದಂದು ಮುಖ್ಯ ಎಂಜಿನಿಯರ್‌ ಅವರಿಗೆ ಭೇಟಿಯಾಗಿ ಕೆರೆಯ ಬಿರುಕು ಬಿಟ್ಟ ಸ್ಥಳದಲ್ಲಿ ಮುರುಮ್‌ ಹಾಕಿದ ಸ್ಥಳದಲ್ಲಿ ಮತ್ತೆ ಬಿರುಕು ಬಿಡುತ್ತಿರುವುದು ಕಂಡುಬರುತ್ತಿದೆ ಎಂದು ತಿಳಿಸಿದ್ದೇನೆ. ಆದರೆ ಮುಖ್ಯ ಎಂಜಿನಿಯರ್‌ ಹೇಳಿದ ಹಾಗೆ ಮುರುಮ್‌ ಎಷ್ಟು ಇಳಿಯುತ್ತೆ ಇಳಿಯಲು ಬಿಡಿ. ಆದರೆ ಕೆರೆಗೆ ಹೆಚ್ಚುವರಿ ಬರುವ ಹೆಚ್ಚುವರಿ ನೀರು ಹೊರಗೆ ಹರಿದು ಬಿಡಲು ಹೇಳಿದ್ದಾರೆ. ಅವರು ಹೇಳಿದ ಹಾಗೆ ಹೆಚ್ಚುವರಿ ನೀರನ್ನು ಹೊರಗೆ ಹರಿದು ಬಿಡಲಾಗುತ್ತಿದೆ. -ಶಾಂತಪ್ಪ ಜಾಧವ, ಎಇಇ, ಸಣ್ಣ ನೀರಾವರಿ ಇಲಾಖೆ, ಅಫಜಲಪುರ

Advertisement

ಕೆರೆ ಒಡ್ಡು ದುರಸ್ತಿ ಕಾರ್ಯವನ್ನು ಸಣ್ಣ ನೀರಾವರಿ ಇಲಾಖೆಯವರು ಮಾಡಬೇಕು. ಪುರಸಭೆ ವತಿಯಿಂದ ಈ ಕುರಿತು ಸಣ್ಣ ನೀರಾವರಿ ಇಲಾಖೆ ಗಮನಕ್ಕೆ ತರಲಾಗಿದೆ. -ಸುರೇಶ ಬಬಲಾದ, ಮುಖ್ಯಾಧಿಕಾರಿ, ಪುರಸಭೆ

-ಮಲ್ಲಿಕಾರ್ಜುನ ಹಿರೇಮಠ 

Advertisement

Udayavani is now on Telegram. Click here to join our channel and stay updated with the latest news.

Next