Advertisement
ಗಜೇಂದ್ರಗಡ ಪೊಲೀಸ್ ಠಾಣೆಗೆ ಸ್ವಂತ ಕಟ್ಟಡವಿದ್ದರೂ ಯಾವಾಗ ಬೀಳುತ್ತದೆಯೋ ಎಂಬ ಭಯ ಒಡಮೂಡಿದೆ. ಮಳೆ ಬಂದ ಸಂದರ್ಭದಲ್ಲಿ ಎಲ್ಲ ಕೊಠಡಿಗಳು ಸೋರುತ್ತದೆ. ಕಡತಗಳು, ಗಣಕಯಂತ್ರಗಳನ್ನು ಮಳೆಯಿಂದ ಉಳಿಸಿಕೊಳ್ಳಲು ಸಿಬ್ಬಂದಿ ಹೆಣಗಾಡಬೇಕಾದ ಪರಿಸ್ಥಿತಿ ಉದ್ಭವಿಸಿದೆ.
Related Articles
Advertisement
ದುರ್ಗಮ ಹಾದಿ: ಶಿಥಿಲಾವಸ್ಥೆಯಲ್ಲಿರುವ ಪೊಲೀಸ್ ಠಾಣೆಗೆ ತೆರಳುವ ಮಾರ್ಗ ಮಣ್ಣಿನಿಂದ ಕೂಡಿದೆ. ಪೊಲೀಸರಿಗೆ ಪರೇಡ್ ಮೈದಾನವಿಲ್ಲ. ವಾಹನ ನಿಲುಗಡೆಗೆ ಸೂಕ್ತ ಜಾಗೆಯಿಲ್ಲದ ಪರಿಣಾಮ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗಿದೆ. ಕಿಟಕಿಗಳ ಗಾಜು ಸಂಪೂರ್ಣ ಪುಡಿಪುಡಿಯಾಗಿವೆ. ಜೋರಾಗಿ ಗಾಳಿ ಬೀಸಿದರೆ ವಿದ್ಯುತ್ ಸಂಪರ್ಕವೂ ಕಿತ್ತು ಹೋಗುವಂತಿದೆ. ಇತಿಹಾಸದ ಮೆಲುಕಾಗಿರುವ ಗಜೇಂದ್ರಗಡ ಪೊಲೀಸ್ ಠಾಣೆ ವಾಸಿಸಲು ಯೋಗ್ಯವಿಲ್ಲ ಎಂದು 2016ರಲ್ಲಿಯೇ ಲೋಕೋಪಯೋಗಿ ಇಲಾಖೆ ಪೊಲೀಸ್ ಇಲಾಖೆಗೆ ತಿಳಿಸಿದೆ, ಆದರೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿ ಪೊಲೀಸ್ ಠಾಣೆಗೆ ಹೊಸ ಕಟ್ಟಡ ನಿರ್ಮಾಣದ ಗೋಜಿಗೆ ಹೋಗದಿರುವುದು ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿ: ಗಜೇಂದ್ರಗಡ ಪೊಲೀಸ್ ಠಾಣೆಯತ್ತ ಗಮನಹರಿಸಿ ಪೊಲೀಸ್ ಠಾಣೆಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿಕೊಡಬೇಕಾದ ಅಗತ್ಯವಿದೆ. ಸಾರ್ವಜನಿಕರ ರಕ್ಷಣೆಗಾಗಿ ಹಗಲು ರಾತ್ರಿ ಎನ್ನದೆ ಕಾರ್ಯ ನಿರ್ವಹಿಸುವ ಪೊಲೀಸರು ನೆಮ್ಮದಿಯಾಗಿ ಕೆಲಸ ಮಾಡಲು ಸುಸಜ್ಜಿತ ಕಟ್ಟಡದಲ್ಲಿ ಠಾಣೆ ನಿರ್ಮಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಪೊಲೀಸ್ ಠಾಣೆಯೇ ಸುಸಜ್ಜಿತ ಕಟ್ಟಡವಿಲ್ಲದೆ ನಡೆಯುತ್ತಿರುವುದನ್ನು ಗಮನಿಸಿದರೆ ಬೇರೆ ಎಲ್ಲದಕ್ಕೂ ಲಕ್ಷಾಂತರ ರೂ. ಖರ್ಚು ಮಾಡುವ ಸರ್ಕಾರ ಪೊಲೀಸ್ ಇಲಾಖೆ ಠಾಣೆಗೆ ಒಂದು ಸುಸಜ್ಜಿತ ಕಟ್ಟಡ ನಿರ್ಮಿಸದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಕೂಡಲೇ ಗೃಹ ಇಲಾಖೆ ಗಜೇಂದ್ರಗಡ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಕ್ರಮ ಜರುಗಿಸಬೇಕಿದೆ.–ಅಜೀತ ಬಾಗಮಾರ, ಬಾಗಮಾರ ಸೇವಾ ಸಮಿತಿ ಕಾರ್ಯದರ್ಶಿ
-ಡಿ.ಜಿ. ಮೋಮಿನ್