Advertisement

ಬೆಂಗಳೂರು, ಮಡಿಕೇರಿ, ಕೇರಳಕ್ಕೆ  ಸಂಪರ್ಕ ಕಡಿತ ಭೀತಿ

09:59 AM Oct 08, 2018 | Team Udayavani |

ಸುಬ್ರಹ್ಮಣ್ಯ : ಜಾಲ್ಸೂರು- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಮಧ್ಯೆ ಕಲ್ಲಾಜೆ ಬಳಿ ಈ ಹಿಂದೆ ಭೂಕುಸಿತ ನಡೆದ ಸ್ಥಳದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ತಡೆಗೋಡೆ ಮತ್ತೆ ಕುಸಿಯುವ ಸ್ಥಿತಿಯಲ್ಲಿದೆ. ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

Advertisement

ಆಗಸ್ಟ್‌ನಲ್ಲಿ ಕುಸಿತ, ತಾತ್ಕಾಲಿಕ ತಡೆಗೋಡೆ ಆಗಸ್ಟ್‌ನಲ್ಲಿ ಭಾರೀ ಮಳೆಯಿಂದ ಈ ಮುಖ್ಯ ರಸ್ತೆಯ ಕಲ್ಲಾಜೆ ಬಳಿ ರಸ್ತೆ ಬದಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಆಗಿ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಅತಿವೃಷ್ಟಿಯಿಂದ ಹಾನಿ ಉಂಟಾದ ಸ್ಥಳ ಹಾಗೂ ಸಂತ್ರಸ್ತರ ಸಂದರ್ಶನಕ್ಕೆ ಆಗಮಿಸಿದ್ದ ಸಚಿವ ಯು.ಟಿ. ಖಾದರ್‌ ಕಲ್ಲಾಜೆ ಭೂಕುಸಿತ ಸ್ಥಳವನ್ನೂ ವೀಕ್ಷಿಸಿ ತತ್‌ಕ್ಷಣ ತಳಭಾಗದಿಂದಲೇ ತಾತ್ಕಾಲಿಕ ತಡೆಗೋಡೆ ನಿರ್ಮಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿ, ಎಂಜಿನಿಯರುಗಳಿಗೆ ಸೂಚಿಸಿದ್ದರು. ಅದರಂತೆ ಇಲಾಖೆ ಕಡೆಯಿಂದ ಮರಳು ತುಂಬಿದ ಗೋಣಿಚೀಲ ಜೋಡಿಸಿಟ್ಟು ಕುಸಿತ ತಡೆಯಲಾಗಿತ್ತು.

ಈ ರಸ್ತೆಯ ಇನ್ನೊಂದು ಬದಿ ಅರಣ್ಯ ಇಲಾಖೆಗೆ ಸೇರಿದ್ದು, ರಸ್ತೆ ವಿಸ್ತರಣೆಗೆ ಅಡ್ಡಿಯಾಗಿತ್ತು. ಹೀಗಾಗಿ ಆಗ ಈ ಮಾರ್ಗದಲ್ಲಿ ಸಂಚಾರ 15ಕ್ಕೂ ಹೆಚ್ಚು ದಿನ ಸ್ಥಗಿತಗೊಂಡಿತ್ತು. ಸುಬ್ರಹ್ಮಣ್ಯ ಭಾಗದಿಂದ ಸುಳ್ಯದ ಕಡೆ ತೆರಳುವ ವಾಹನಗಳು ಮಲೆಯಾಳದಲ್ಲಿ ಕವಲೊಡೆದು ಹರಿಹರ ಮಾರ್ಗವಾಗಿ ಸಂಚರಿಸುತ್ತಿದ್ದವು. ಅರಣ್ಯ ಇಲಾಖೆಯ ಸಹಕಾರದಿಂದ ಕಲ್ಲಾಜೆಯಲ್ಲಿ ರಸ್ತೆ ವಿಸ್ತರಣೆ ನಡೆಸಿದ ಬಳಿಕ ವಾಹನಗಳು ಅಡೆತಡೆಯಿಲ್ಲದೆ ಸಂಚಾರ ನಡೆಸುತ್ತಿದ್ದವು.

ಮತ್ತೆ ಭೂಕುಸಿತ
ಈಗ ತಾತ್ಕಾಲಿಕ ತಡೆಗೋಡೆ ಹಾಗೂ ಅಕ್ಕಪಕ್ಕದ ಸ್ಥಳ ಕೂಡ ಕುಸಿಯಲಾರಂಭಿಸಿದ್ದು, ವಾಹನ ಸಂಚಾರ ಮತ್ತೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಕಲ್ಲಾಜೆಯಿಂದ ಮುಂದಕ್ಕೆ ಕೇದಿಗೆಬನ ಎಂಬಲ್ಲಿಯ ಸೇತುವೆ ಕೂಡ ಶಿಥಿಲಾವಸ್ಥೆ ತಲುಪಿದೆ. ಇನ್ನೂ ಹಲವು ಕಡೆ ಭೂಕುಸಿತದ ಭೀತಿ ಇದೆ. ಮುಂದಿನ ಮಳೆಗಾಲದಲ್ಲಂತೂ ಕೈ ಕೊಡುವ ಎಲ್ಲ ಸಾಧ್ಯತೆಗಳಿವೆ.

ಕಡಮಕಲ್ಲು ರಸ್ತೆ ಅಭಿವೃದ್ಧಿ ಅನಿವಾರ್ಯ
ಪರ್ಯಾಯ ರಸ್ತೆಯಾಗಿ ಗಾಳಿಬೀಡು- ಕಡಮಕಲ್ಲು- ಸುಬ್ರಹ್ಮಣ್ಯ ಕಚ್ಚಾ ರಸ್ತೆ ಅಭಿವೃದ್ಧಿ ಆದಲ್ಲಿ ಜಾಲ್ಸೂರು-ಸುಬ್ರಹ್ಮಣ್ಯ ಮಾರ್ಗದ ಒತ್ತಡ ಕಡಿಮೆಗೊಳಿಸಬಹುದು. ದೂರವೂ ಕಡಿಮೆಯಾಗುತ್ತದೆ. ಆದರೆ ಕಾನೂನು ತೊಡಕುಗಳನ್ನು ನಿವಾರಿಸಿ ಈ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಜನಪ್ರತಿನಿಧಿಗಳು ಹೆಚ್ಚು ಇಚ್ಛಾಶಕ್ತಿ ವ್ಯಕ್ತಪಡಿಸಬೇಕಿದೆ.

Advertisement

ಸುಬ್ರಹ್ಮಣ್ಯಕ್ಕೆ ಮುಖ್ಯ ಸಂಪರ್ಕ
ಜಾಲ್ಸೂರು-ಸುಬ್ರಹ್ಮಣ್ಯ ಮಾರ್ಗವು ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ, ತಾಲೂಕು ಕೇಂದ್ರ ಸುಳ್ಯಕ್ಕೆ ಈ ಭಾಗದಿಂದ ಪ್ರಮುಖ ಕೊಂಡಿ. ಇದು ಕಡಿತಗೊಂಡಲ್ಲಿ ಈ ಭಾಗದಿಂದ ಸುಳ್ಯಕ್ಕೆ ಸಂಪರ್ಕ ಕಡಿತಗೊಳ್ಳುವುದಲ್ಲದೆ ಮೂಲ ಸೌಕರ್ಯ ಈಡೇರಿಕೆಗೂ ತೊಂದರೆಯಾಗಲಿದೆ. ಸುಬ್ರಹ್ಮಣ್ಯ ಭಾಗದ ಜನತೆಗೆ ಕೃಷಿ ಉತ್ಪನ್ನ ಮಾರಾಟ ಮತ್ತು ಖರೀದಿ, ದೈನಿಕ ವ್ಯವಹಾರಗಳಲ್ಲಿ ಮತ್ತು ವಿದ್ಯಾರ್ಥಿಗಳಿಗೂ ಸಮಸ್ಯೆಯಾಗುತ್ತದೆ.

ಶಾಶ್ವತ ಪರಿಹಾರ ದೊರಕಲಿದೆ
ಭೂಕುಸಿತ ನಡೆದ ಸ್ಥಳದಲ್ಲಿ ಶಾಶ್ವತ ತಡೆಗೋಡೆಗೆ ಅಂದಾಜು ಪಟ್ಟಿ ಸಿದ್ಧಪಡಿಸಿ ಅನುಮೋದನೆಗೆ ಕಳುಹಿಸಿದ್ದೇವೆ. ಬಳಿಕ ತಡೆಗೋಡೆ ನಿರ್ಮಾಣವಾಗಿ ಶಾಶ್ವತ ಪರಿಹಾರ ದೊರಕಲಿದೆ.
– ಸಣ್ಣೇಗೌಡ ಸ.ಕಾ. ಎಂಜಿನಿಯರ್ 

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next