Advertisement

ಫೆ. 10 - 11ರಂದು ಉಳ್ಳಾಲದಲ್ಲಿ ಬೀಚ್‌ ಉತ್ಸವ

02:05 PM Feb 09, 2018 | Team Udayavani |

ಉಳ್ಳಾಲ: ಇಲ್ಲಿ ಫೆ. 10. 11ರಂದು ಎರಡು ದಿನಗಳ ಕಾಲ ನಡೆಯಲಿರುವ ಬೀಚ್‌ ಉತ್ಸವಕ್ಕೆ ಸಿದ್ಧತೆ ಭರದಿಂದ ನಡೆಯುತ್ತಿದೆ.

Advertisement

ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘ, ಬ್ರದರ್ಸ್‌ ಸ್ಪೋರ್ಟ್ಸ್ ಕ್ಲಬ್‌ ಮತ್ತು ಬ್ರದರ್ಸ್‌ ಯುವಕ ಮಂಡಲದ ವಜ್ರ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮದ ಒಂದು ಅಂಗವಾಗಿ ಬೀಚ್‌ ಉತ್ಸವ ನಡೆಯುತ್ತಿದ್ದು, ಅಮ್ಯೂಸ್‌ ಮೆಂಟ್‌ ಪಾರ್ಕ್‌, ಆಹಾರೋತ್ಸವ, ಬೋಟಿಂಗ್‌ ಸಹಿತ ಮನೋರಂಜನ ಕಾರ್ಯಕ್ರಮಗಳು ಎರಡು ದಿನಗಳ ಕಾಲ ಪ್ರವಾಸಿಗರನ್ನು ಆಕರ್ಷಿಸಲಿದೆ.

2ನೇ ಬಾರಿಗೆ ಬೀಚ್‌ ಉತ್ಸವ
ಉಳ್ಳಾಲದಲ್ಲಿ ಈ ಹಿಂದೆ 2012ರಲ್ಲಿ ಮಾರುತಿ ಯುವಕ ಮಂಡಲ ಮತ್ತು ಮಾರುತಿ ಸ್ಪೋರ್ಟ್ಸ್ ಕ್ಲಬ್‌ನ ರಜತ ಮಹೋತ್ಸವದ ಅಂಗವಾಗಿ ಉಳ್ಳಾಲದಲ್ಲಿ ಪ್ರಥಮ ಬಾರಿಗೆ ಬೀಚ್‌ ಉತ್ಸವ ಯಶಸ್ವಿಯಾಗಿ ನಡೆದಿತ್ತು. ಈಗ ಐದು ವರ್ಷಗಳ ಬಳಿಕ ಉಳ್ಳಾಲ ಮೊಗವೀರಪಟ್ಣದಲ್ಲಿ ಬೀಚ್‌ ಉತ್ಸವ ನಡೆಯಲಿದ್ದು, ಸಮುದ್ರ ತಟದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. 

ವಿವಿಧ ಸ್ಪರ್ಧೆ
ಸಾಹಸ ಪ್ರಿಯರಿಗೆ ಸಮುದ್ರದಲ್ಲಿ ಸ್ಪೀಡ್‌ ಬೋಟ್‌, ಸಾಮಾನ್ಯ ದೋಣಿಗಳಲ್ಲಿ ಸಂಚರಿಸುವ ಅವಕಾಶವಿದ್ದು, ಸಂದರ್ಭ ಈಜು, ದೋಣಿ, ಬಲೆ ಬೀಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ರವಿವಾರ ಬೆಳಗ್ಗಿನಿಂದ ಸಂಜೆಯವರೆಗೆ ಪ್ರವಾಸಿಗರಿಗೆ ಅವಕಾಶವಿದೆ. ಉಳಿದಂತೆ ಮಹಿಳೆಯರಿಗೆ ತ್ರೋಬಾಲ್‌ ಸ್ಪರ್ಧೆ, ಗಾಳಿಪಟ ಉತ್ಸವ, ಶನಿವಾರ ಮಡಕೆ ಒಡೆಯುವ ಸ್ಪರ್ಧೆ ನಡೆಯಲಿದೆ. 

ಅಮ್ಯೂಸ್‌ಮೆಂಟ್‌ ಪಾರ್ಕ್‌
ಉಳ್ಳಾಲ ಸಮುದ್ರ ತೀರದ ಮೈದಾನದಲ್ಲಿ ಬೀಚ್‌ ಉತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಅಮ್ಯೂಸ್‌ಮೆಂಟ್‌ ಪಾರ್ಕ್‌ ವ್ಯವಸ್ಥೆ ಮಾಡಲಾಗಿದೆ.

Advertisement

ಕಳೆದೆರಡು ದಿನಗಳಿಂದ ಅಮ್ಯೂಸ್‌ ಮೆಂಟ್‌ ಜೋಡಣೆ ಕಾರ್ಯ ನಡೆಯುತ್ತಿದ್ದು, ಶನಿವಾರ ಪ್ರವಾಸಿಗರಿಗೆ ಮುಕ್ತವಾಗಲಿದೆ. ಇದರೊಂದಿಗೆ ಆಹಾರೋತ್ಸವಕ್ಕೆ ಸ್ಟಾಲ್‌ಗ‌ಳು ಸಿದ್ಧಗೊಳಿಸಿದ್ದು, ವಿವಿಧ ಖಾದ್ಯಗಳು,
ತಿಂಡಿ-ತಿನಸುಗಳು ಈ ಸ್ಟಾಲ್‌ಗ‌ಳಲ್ಲಿ ಲಭ್ಯವಾಗಲಿವೆ. ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು
ರಂಜಿಸಲಿದೆ.

ಉಳ್ಳಾಲ ನಗರಸಭೆ ಸ್ಥಳೀಯವಾಗಿ ಸ್ವಚ್ಛತೆ ಸಹಿತ ಅಭಿವೃದ್ಧಿ ಕಾರ್ಯವನ್ನು ಪೂರ್ಣಗೊಳಿಸಿದೆ. ಬೀಚ್‌ ಉತ್ಸವ ಸಂದರ್ಭ ಸಮುದ್ರ ತಟದಲ್ಲಿ ಸುಮಾರು 150ಕ್ಕೂ ಹೆಚ್ಚು ಸ್ವಯಂ ಸೇವಕರು, ಸ್ಥಳೀಯ ನುರಿತ ಈಜುಗಾರರ ತಂಡ
ಕಾರ್ಯ ನಿರ್ವಹಿಸಲಿದ್ದು, ಉತ್ಸವವನ್ನು ಸುಗಮವಾಗಿ ನಡೆಸಲು ಪೊಲೀಸ್‌ ಇಲಾಖೆಯೂ ಸಿದ್ಧತೆ ನಡೆಸಿದೆ.

ಪಾರ್ಕಿಂಗ್‌ ವ್ಯವಸ್ಥೆ
ಅಬ್ಬಕ್ಕ ಸರ್ಕಲ್‌ವರೆಗೆ ವಾಹನ ಸಂಚಾರ ಅವಕಾಶವಿದ್ದು, ಘನ ವಾಹನಗಳಿಗೆ ಭಾರತ್‌ ಶಾಲಾ ಮೈದಾನ ಮತ್ತು ಹಜ್ರತ್‌ ಶಾಲಾ ಬಳಿಯ ಮೈದಾನದಲ್ಲಿ, ದ್ವಿಚಕ್ರ ವಾಹನಗಳನ್ನು ನಗರಸಭಾ ಮೈದಾನದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.

ಸಂಚಾರ ವ್ಯವಸ್ಥೆಗೆ ಆದ್ಯತೆ
ಬೀಚ್‌ ಉತ್ಸವಕ್ಕೆ ಸಂಬಂಧಿಸಿದಂತೆ ಸಂಚಾರಿ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಅಬ್ಬಕ್ಕ ಸರ್ಕಲ್‌ ಬಳಿ, ಬೀಚ್‌ ಬಳಿ ಪೊಲೀಸ್‌ ಔಟ್‌ಪೋಸ್ಟ್‌ ನಿರ್ಮಿಸಲಾಗಿದೆ. ಸ್ಥಳೀಯ ಪೊಲೀಸರೊಂದಿಗೆ ಕೆಎಸ್‌ಆರ್‌ಪಿ ಪೊಲೀಸರನ್ನು ನಿಯೋಜಿಸಲಾಗಿದೆ.
– ಕೆ. ರಾಮರಾವ್‌
ಸಹಾಯಕ ಪೊಲೀಸ್‌ ಆಯುಕ್ತರು 

ಸರ್ವಧರ್ಮ ಸಹಕಾರ ಅಗತ್ಯ
ಬೀಚ್‌ ಉತ್ಸವಕ್ಕೆ ಶನಿವಾರ ಸುಮಾರು 10 ಸಾವಿರಕ್ಕೂ ಅಧಿಕ ಪ್ರವಾಸಿಗರು ಮತ್ತು ರವಿವಾರ 50 ಸಾವಿರ
ಪ್ರವಾಸಿಗರ ನಿರೀಕ್ಷೆಯಿದೆ. ಉತ್ಸವಕ್ಕೆ ಸಂಬಂಧಿಸಿದಂತೆ ಸರ್ವ ಸಿದ್ಧತೆಗಳನ್ನು ಮಾಡಿದ್ದು, ಈ ಕಾರ್ಯಕ್ರಮಕ್ಕೆ
ಸರ್ವಧರ್ಮದವರ ಸಹಕಾರ ಅಗತ್ಯ.
 -ಮನೋಜ್‌ ಸಾಲ್ಯಾನ್‌,
 ವಜ್ರಮಹೋತ್ಸವ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next