ಕಾಸರಗೋಡು: ಸಾಮಾಜಿಕ ಸಾಂಸ್ಕೃತಿಕ ಸಂಘಟನೆಯಾದ ರಂಗಚಿನ್ನಾರಿ ಕಾಸರಗೋಡು ಇದರ 10 ನೇ ವರ್ಷದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಕರಂದಕ್ಕಾಡ್‌ನ ಪದ್ಮಗಿರಿ ಕಲಾಕುಟೀರದಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ ಚಲನಚಿತ್ರೋತ್ಸವ ಫೆ.25 ಮತ್ತು 26 ರಂದು ನಡೆಯಲಿದೆ.
ದ್ವೀಪ, ಗುಲಾಬಿ ಟಾಕೀಸ್ ಮತ್ತು ತಾಯಿ ಸಾಹೇಬ ಎಂಬೀ ಮೂರು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದೇ ಸಂದರ್ಭದಲ್ಲಿ ಪ್ರಶಸ್ತಿ ವಿಜೇತ ನಿರ್ದೇಶಕ ಸುಧೀಶ್ ಗೋಪಾಲಕೃಷ್ಣನ್, ರಂಗಕಲಾವಿದ, ಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ರಂಗಕಲಾವಿದ ಮತ್ತು ನಿರ್ದೇಶಕ ಜಗನ್ ಪವಾರ್ ಅವರನ್ನು ಸಮ್ಮಾನಿಸಿ ಗೌರವಿಸಲಾಗುವುದು.
ಚಿತ್ರೋತ್ಸವವನ್ನು ಗಿರೀಶ್ ಕಾಸರವಳ್ಳಿ ಅವರು ಉದ್ಘಾಟಿಸುವರು. ಸಿನಿಮಾ ಪ್ರೊಜೆಕ್ಟರ್‌ನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ಗೋಪಾಲಕೃಷ್ಣ ಪೈ ಉದ್ಘಾಟಿಸುವರು. ಕನ್ನಡ ಚಿತ್ರ ರಂಗ ನಡೆದು ಬಂದ ದಾರಿ ಬಗ್ಗೆ ಖ್ಯಾತ ಹಿರಿಯ ಸಿನೆ ಪತ್ರಕರ್ತ ಬಿ.ಎನ್.ಸುಬ್ರಹ್ಮಣ್ಯ ಮಾತನಾಡುವರು. ಪ್ರಶಸ್ತಿ ವಿಜೇತ ನಿರ್ದೇಶಕ ಎಂ.ಎ.ರೆಹಮಾನ್, ಕಾಸರಗೋಡು ಪ್ರಸ್ ಕ್ಲಬ್ ಅಧ್ಯಕ್ಷ ಸನ್ನಿ ಜೋಸೆಫ್, ಚಿತ್ರ ನಟ ಅನಿಲ್ ಕುಮಾರ್ ಮೊದಲಾದವರು ಶುಭಹಾರೈಸುವರು.
ಪೆ.25 ರಂದು ಮಧ್ಯಾಹ್ನ 2.30 ರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, 3 ರಿಂದ ದ್ವೀಪ ಚಿತ್ರ ಪ್ರದರ್ಶನ ನಡೆಯುವುದು. 5 ರಿಂದ ಸಂವಾದ ಇರುವುದು. ಫೆ.26 ರಂದು ಬೆಳಗ್ಗೆ 10 ಕ್ಕೆ ಗುಲಾಬಿ ಟಾಕೀಸ್, 12 ರಿಂದ ಸಂವಾದ, ಮಧ್ಯಾಹ್ನ 2 ರಿಂದ ತಾಯಿ ಸಾಹೇಬ ಚಿತ್ರ ಪ್ರದರ್ಶನಗೊಳ್ಳಲಿದೆ. ಸಂಜೆ 4 ರಿಂದ ಸಂವಾದ ನಡೆಯುವುದು. ಚಿತ್ರೋತ್ಸವದಲ್ಲಿ ಭಾಗವಹಿಸುವ ಆಸಕ್ತರು 9447323500 ನಂಬ್ರದಲ್ಲಿ ಸಂಪರ್ಕಿಸಬಹುದೆಂದು ರಂಗಚಿನ್ನಾರಿ ಸ್ಥಾಪಕ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಹೇಳಿದ್ದಾರೆ.