Advertisement

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

12:35 AM May 24, 2022 | Team Udayavani |

2021-22ನೇ ಹಣಕಾಸು ವರ್ಷದಲ್ಲಿ ಕರ್ನಾಟಕ ವಿದೇಶಿ ನೇರ ಬಂಡ  ವಾಳ ಆಕರ್ಷಿಸುವಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಈ ಸಾಲಿನಲ್ಲಿ ಭಾರತ ದಾಖಲೆ ಪ್ರಮಾಣದಲ್ಲಿ ಅಂದರೆ 6.48 ಲ.ಕೋ.ರೂ. ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಿದ್ದು ಈ ಪೈಕಿ 83.57 ಶತಕೋಟಿ ಡಾಲರ್‌ಗಳಷ್ಟು ನೇರ ಬಂಡವಾಳ ಕರ್ನಾಟಕಕ್ಕೆ ಹರಿದುಬಂದಿದೆ. ಅಂದರೆ ದೇಶ ಆಕರ್ಷಿಸಿದ ಒಟ್ಟಾರೆ ಎಫ್ಡಿಐ ಈಕ್ವಿಟಿ ಒಳಹರಿವಿನಲ್ಲಿ ಶೇ.53ರಷ್ಟು ಪಾಲು ಕರ್ನಾಟಕದ್ದಾಗಿದೆ ಎಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ. ಅಷ್ಟು ಮಾತ್ರವಲ್ಲದೆ ಪ್ರಸಕ್ತ ಹಣಕಾಸು ವರ್ಷದಲ್ಲೂ ಎಫ್ಡಿಐ ಆಕರ್ಷಣೆಯಲ್ಲಿ ರಾಜ್ಯ ತನ್ನ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಸಫ‌ಲವಾಗಿದೆ.

Advertisement

ಈ ಆಶಾದಾಯಕ ವರದಿಯ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ದಾವೋಸ್‌ಗೆ ತಲುಪಿದ್ದು ವಿವಿಧ ಕಂಪೆನಿಗಳ ಮುಖ್ಯಸ್ಥರು ಮತ್ತು ಉದ್ಯಮಿಗಳ ಜತೆ ಮಾತುಕತೆ ಪ್ರಕ್ರಿಯೆ ಆರಂಭಿಸಿದ್ದಾರೆ. ಮೊದಲ ದಿನದಂದೇ ವಿವಿಧ ಕಂಪೆನಿಗಳೊಂದಿಗೆ ಕೋಟ್ಯಂತರ ರೂ. ಮೌಲ್ಯದ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಲುಲು ಗ್ರೂಪ್‌ ಇಂಟರ್‌ನ್ಯಾಶನಲ್‌ ರಾಜ್ಯದಲ್ಲಿ 2 ಸಾವಿರ ಕೋ. ರೂ.ಗಳ ಹೂಡಿಕೆ ಮಾಡಲು ಸಮ್ಮತಿಸಿದ್ದು ಒಪ್ಪಂದಕ್ಕೆ ಅಂಕಿತ ಹಾಕಿದೆ. ಈ ಮಹತ್ತರ ಒಪ್ಪಂದದ ಫ‌ಲವಾಗಿ ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧೆಡೆ ಲುಲು ಗ್ರೂಪ್‌ ಶಾಪಿಂಗ್‌ ಮಾಲ್‌, ಹೈಪರ್‌ ಮಾರ್ಕೆಟ್‌ ಮತ್ತು ರಫ್ತು ಆಧರಿತ ಆಹಾರ ಮಳಿಗೆಗಳನ್ನು ತೆರೆಯಲಿದೆ. ಇದರಿಂದಾಗಿ ರಾಜ್ಯದಲ್ಲಿ 10,000ಕ್ಕೂ ಅಧಿಕ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

ಹಿಟಾಚಿ ಎನರ್ಜಿ 200 ಕೋ. ರೂ. ವೆಚ್ಚದಲ್ಲಿ ರಾಜ್ಯದ ಹಲವೆಡೆ ಇವಿ ಚಾರ್ಜಿಂಗ್‌ ಮೂಲ ಸೌಕರ್ಯಗಳನ್ನು ಸ್ಥಾಪಿಸಲು ಆಸಕ್ತಿ ತೋರಿದೆ. ಇನ್ನು ಆಹಾರ ಸಂಸ್ಕರಣ ವಲಯದಲ್ಲಿ ಜ್ಯೂಬಿಲಿಯಂಟ್‌ ಗ್ರೂಪ್‌ 700 ಕೋ. ರೂ. ಹೂಡಿಕೆ ಮಾಡಲಿದೆ. ಹೀರೋ ಮೋಟೋಕಾರ್ಪ್‌, ಸೀಮನ್ಸ್‌ ಸಂಸ್ಥೆಯ ಮುಖ್ಯಸ್ಥರೊಂದಿಗೂ ಮುಖ್ಯಮಂತ್ರಿಯವರು ಸಮಾಲೋಚನೆ ನಡೆಸಿದ್ದು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳು ಮತ್ತು ಸಾಧ್ಯತೆಗಳ ಕುರಿತಂತೆ ವಿವರಿಸಿದ್ದಾರೆ. ಈ ಕಂಪೆನಿಗಳೂ ಕೂಡ ರಾಜ್ಯದಲ್ಲಿ ಹೂಡಿಕೆ ಮಾಡಲು ಒಲವು ವ್ಯಕ್ತಪಡಿಸಿವೆ.

ರಾಜ್ಯಕ್ಕೆ ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಲು ರಾಜ್ಯ ಸರಕಾರ ನಡೆಸುತ್ತಿರುವ ಪ್ರಯತ್ನ ಮತ್ತು ಅದರ ಫ‌ಲಶ್ರುತಿ ರಾಜ್ಯದ ಪ್ರಗತಿಯ ದೃಷ್ಟಿಯಿಂದ ಧನಾತ್ಮಕ ಬೆಳವಣಿಗೆಯೇ. ಈಗ ಮಾಡಿಕೊಂಡಿರುವ ಒಪ್ಪಂದದ ಅನುಷ್ಠಾನಕ್ಕೂ ಸರಕಾರ ಅಷ್ಟೇ ಆಸಕ್ತಿ ತೋರಬೇಕು. ಒಪ್ಪಂದ ಕೇವಲ ಕಡತಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳುವಂತಾಗಲು ಈ ಕಂಪೆನಿಗಳಿಗೆ ರಾಜ್ಯದಲ್ಲಿ ಅಗತ್ಯ ಜಮೀನು, ನೀರು, ರಸ್ತೆ ಮತ್ತಿತರ ಮೂಲ ಸೌಕ ರ್ಯಗಳನ್ನು ಒದಗಿಸುವ ಹೊಣೆಗಾರಿಕೆ ರಾಜ್ಯ ಸರಕಾರದ್ದಾಗಿದೆ. ಬಂಡವಾಳ ಹೂಡಿಕೆಯಿಂದ ಆರ್ಥಿಕ ಪ್ರಗತಿಯ ಜತೆಜತೆಯಲ್ಲಿ ವಿದ್ಯಾವಂತ ಯುವಜನತೆಗೆ ಉದ್ಯೋಗಾವಕಾಶವೂ ಸೃಷ್ಟಿಯಾಗುವುದರಿಂದ ಇತ್ತ ಸರಕಾರ ಗಂಭೀರ ಲಕ್ಷ್ಯ ಹರಿಸಬೇಕು. ಇದೇ ವೇಳೆ ವಿದೇಶಿ ಕಂಪೆನಿಗಳು ಮತ್ತು ಉದ್ಯಮಿಗಳಿಗೆ ಮಣೆ ಹಾಕುವ ಭರದಲ್ಲಿ ದೇಶೀಯ ಮತ್ತು ಸ್ಥಳೀಯ ಕಂಪೆನಿಗಳು ಮತ್ತು ಉದ್ಯಮಿಗಳ ಬೆಳವಣಿಗೆಗೆ ಅಡ್ಡಿಯಾಗ ದಂತೆ ಎಚ್ಚರವಹಿಸಬೇಕು. ಹಾಗಾದಾಗ ಮಾತ್ರ ರಾಜ್ಯ ಸರಕಾರದ ಈ ಎಲ್ಲ ಪ್ರಯತ್ನಗಳು ನಿರೀಕ್ಷಿತ ಫ‌ಲಿತಾಂಶವನ್ನು ನೀಡಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next