ನವದೆಹಲಿ: ಕೇಂದ್ರದ ನ್ಯಾಯ ಮತ್ತು ಕಾನೂನು ಸಚಿವಾಲಯ ಚಲನಚಿತ್ರ ಪ್ರಮಾಣೀಕೃತ ಮೇಲ್ಮನವಿ ನ್ಯಾಯಾಧೀಕರಣ(ಎಫ್ ಸಿಎಟಿ)ವನ್ನು ರದ್ದುಗೊಳಿಸಿದ್ದು, ಈ ನಿರ್ಧಾರದ ಬಗ್ಗೆ ಚಲನಚಿತ್ರರಂಗದ ಹಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮ್ಯಾನೇಜರ್ ಕೂಡಿ ಹಾಕಿ ಕೆಲಸ ಮಾಡುವಂತೆ ಬೆದರಿಸಿದ್ದಾರೆ: ಉಡುಪಿಯ ಸಾರಿಗೆ ನೌಕರ ಕಣ್ಣೀರು
ಸಿನಿಮಾದ ಪ್ರಮಾಣಪತ್ರ ಕುರಿತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್ ಸಿ) ಆದೇಶವನ್ನು ಪ್ರಶ್ನಿಸಿ ಚಲನಚಿತ್ರ ಪ್ರಮಾಣೀಕೃತ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಮೇಲ್ಮನವಿ ಸಲ್ಲಿಸಬಹುದಾಗಿತ್ತು. ಆದರೆ ಕೂಡಲೇ ಜಾರಿಗೆ ಬರುವಂತೆ ಕಾನೂನು ಸಚಿವಾಲಯ ಸುಗ್ರೀವಾಜ್ಞೆ ಹೊರಡಿಸಿ ಎಫ್ ಸಿಎಟಿಯನ್ನು ರದ್ದುಗೊಳಿಸಿದೆ ಎಂದು ವರದಿ ತಿಳಿಸಿದೆ.
ಸಿಬಿಎಫ್ ಸಿಯಲ್ಲಿ ಪ್ರಮಾಣಪತ್ರ ನಿರಾಕರಿಸಲ್ಪಟ್ಟ ಸಂದರ್ಭದಲ್ಲಿ ನ್ಯಾಯಾಧೀಕರಣದಲ್ಲಿ ಈ ಬಗ್ಗೆ ಮರುಪರಿಶೀಲಿಸಲು ಮೇಲ್ಮನವಿ ಸಲ್ಲಿಸಲು ಅವಕಾಶ ಇತ್ತು. ಆದರೆ ಇನ್ಮುಂದೆ ಚಿತ್ರದ ನಿರ್ಮಾಪಕರು ಸಿಬಿಎಫ್ ಸಿ ನಿರ್ಧಾರದ ಬಗ್ಗೆ ಎಫ್ ಸಿಎಟಿ ಬದಲು ಹೈಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ.
1983ರಲ್ಲಿ ನವೆದೆಹಲಿಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿ 1952ರ ಸಿನಿಮಾಟೋಗ್ರಫಿ ಕಾಯ್ದೆಯ ಸೆಕ್ಷನ್ 5ರ ಅಡಿ ಎಫ್ ಸಿಎಟಿ ಸಂಸ್ಥೆ ಸ್ಥಾಪನೆಯಾಗಿತ್ತು. ಎಫ್ ಸಿಎಟಿಯಲ್ಲಿ ಅಧ್ಯಕ್ಷರು, ನಾಲ್ವರು ಸದಸ್ಯರು ಹಾಗೂ ಒಬ್ಬ ಕಾರ್ಯದರ್ಶಿಯನ್ನು ಒಳಗೊಂಡಿದೆ.
ಕೇಂದ್ರ ಸಚಿವಾಲಯದ ಈ ನಿರ್ಧಾರದ ಬಗ್ಗೆ ಬಾಲಿವುಡ್ ನ ಹನ್ಸಾಲ್ ಮೆಹ್ತಾ, ವಿಶಾಲ್ ಭಾರದ್ವಾಜ್, ಗುಣೀತ್ ಮೋಂಗಾ, ರಿಚಾ ಚಡ್ಡಾ ಸೇರಿದಂತೆ ಹಲವರು ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿ ತಿಳಿಸಿದೆ.