Advertisement

Father’s day 2024: ಜೂ.16: ಅಪ್ಪಂದಿರ ದಿನ-ಅಪ್ಪ ಅನ್ನುವ ಭರವಸೆಯ ಹೆಗಲು

12:44 PM Jun 15, 2024 | Team Udayavani |

ಪ್ರತೀ ಮನೆಗೆ ಅಮ್ಮ ಬೆಳಕು ನೀಡೋ ದೀಪವಾದ್ರೆ ಅಪ್ಪ ಅದರೊಳಗಿನ ಬೆಚ್ಚಗಿನ ಕಾವು. ಒಂದಿಷ್ಟು ಗದರುತನ, ಕೋಪ ಅಪ್ಪನೊಡನೆ ಕಾಣೋ ಸಂಚಾರಿ ಭಾವ, ಆದರೆ ಕೋಪದೊಳಗಿನ ಆಪ್ತತೆ ನಮ್ಮ ಒಳಿತಿಗಾಗಿಯೇ. ಅಮ್ಮ ಸೊಂಟದಲ್ಲಿ ಮಗುವನ್ನಿಟ್ಟುಕೊಂಡು ತಾನು ಕಾಣುವ ಸಂಪತ್ತನ್ನು ತೋರಿಸಿದರೆ, ಅಪ್ಪ ಹೆಗಲ ಮೇಲೆ ಹೊತ್ತು ತಾನು ಕಾಣದಿರುವ ಜಗತ್ತನ್ನೂ ತನ್ನ ಮಗುವಿಗಾಗಿ ತೆರೆದಿಡುತ್ತಾನೆ.

Advertisement

ತಾಯಿ ಮೊದಲ ಅಕ್ಷರ ಕಲಿಸುವ ಗುರುವಾದರೆ, ತಂದೆ ಜೀವನದ ಪಾಠ ಹೇಳುವ ಮುಖ್ಯೋಪಾಧ್ಯಾಯ. ಅಮ್ಮ ಕುಟುಂಬಕ್ಕಾಗಿ ದೇವರ ಬಳಿ ಮುಡುಪಿಟ್ಟರೆ, ಅಪ್ಪ ಬೇಕಿರುವುದನ್ನೆಲ್ಲ ತಂದುಕೊಡುವ ದೇವರಂತ ಸಂವಾಹಕ. ಪ್ರೀತಿ, ನಯ, ನಾಜೂಕು ಕಲಿಸುವುದು ಅಮ್ಮನ ಪಾಲಾದರೆ, ಶಿಸ್ತು, ಸ್ವಾಭಿಮಾನ, ಪರಿಶ್ರಮದ ಮಾರ್ಗದರ್ಶನ ಅಪ್ಪ. ಮನೆಯಲ್ಲಿ ಕೇವಲ ಮಕ್ಕಳಿಗಷ್ಟೇ ಅಲ್ಲ , ಅಮ್ಮನನ್ನೂ ಸೇರಿಸಿ ಎಲ್ಲರ ಬೇಕು-ಬೇಡಗಳನ್ನು ಪೂರೈಸುವ ಅಪ್ಪ, ಅಮ್ಮನ ಪ್ರೀತಿಯ ಮುಂದೆ ತುಸು ಹಿಂದೆಯೇ ಉಳಿದು ಬಿಡುತ್ತಾನೆ. ಮನೆಯ ಕಪಾಠಿನಲ್ಲಾಗಲೀ, ಮಕ್ಕಳ ಪ್ರೀತಿಯಲ್ಲಾಗಲೀ, ಅಮ್ಮನದೇ ಸಿಂಹಪಾಲು, ಅದರಲ್ಲಿಯೇ ತನ್ನ ನೆಮ್ಮದಿ, ಸಾರ್ಥಕತೆಯನ್ನು ಕಾಣುವ ಜೀವವೇ ಅಪ್ಪ.

ಪ್ರತೀ ವರ್ಷದ ಜೂನ್‌ ಮೂರನೇ ರವಿವಾರವನ್ನು “ಅಪ್ಪಂದಿರ ದಿನ’ ಎಂದು ಆಚರಿಸಲು ಮೀಸಲಿದೆ. ಆದರೆ ಕೇವಲ ಒಂದು ದಿನವಲ್ಲ ಮಗಳಿಗೆ ಪ್ರತೀ ದಿನವೂ, ಅನುಕ್ಷಣವೂ ಅಪ್ಪನ ದಿನವೇ. ಪ್ರತೀ ಹೆಣ್ಮಕ್ಕಳಿಗೆ ಅಪ್ಪನೇ ಮೊದಲ ಹೀರೋ. ತಂದೆಯ ನೆರಳಿನಲ್ಲಿ ಬೆಳೆದ ಪ್ರತೀ ಹೆಣ್ಣು ಬಯಸುವುದು ತನಗೆ ತನ್ನ ತಂದೆಯಂತಹ ಗಂಡು ಜೀವನದ ಸಂಗಾತಿಯಾಗಿ ಸಿಗಲಿ ಎಂದು. ತಾನು ಎಂತಹದ್ದೇ ಸಮಸ್ಯೆಗಳನ್ನು ಎದುರಿಸಿ ನಿಲ್ಲುತ್ತೇನೆ ಎಂಬ ಭರವಸೆಯ ಶಕ್ತಿ ಅಪ್ಪ. ಮಗಳಾಗಲಿ, ಮಗನಾಗಲಿ ಅಪ್ಪನ ಭರವಸೆಯ ಸ್ಪರ್ಶ, ಹೆಗಲು ತಾನು ಜೀವನದಲ್ಲಿ ಏನನ್ನಾದರೂ ಜಯಿಸುತ್ತೇನೆ ಎಂಬಂತಹ ಹುಮ್ಮಸ್ಸು, ಉತ್ಸಾಹವನ್ನು ಪುಟಿದೇಳಿಸುತ್ತದೆ. ಅಪ್ಪನೆಂಬ ಅಪ್ಪುಗೆ ಪ್ರತೀ ಮಗುವಿಗೂ ಶಕ್ತಿವರ್ಧಕ. ಮಕ್ಕಳ ಉತ್ತಮ, ಉನ್ನತ ಭವಿಷ್ಯಕ್ಕಾಗಿ ಶಿಕ್ಷೆ ಮತ್ತು ಶಿಕ್ಷಣ ನೀಡುವ ಪ್ರವರ್ತಕ ಅಪ್ಪ. ತಮ್ಮ ಆಸೆ, ನಿರೀಕ್ಷೆಗಳನ್ನು ತನ್ನ ಕುಟುಂಬದ ಒಳಿತಿನಲ್ಲೇ ಕಾಣುವ ಅಪ್ಪ , ತಮ್ಮ ಶ್ರಮ, ದಿನ ಅದಕ್ಕಾಗಿಯೇ ಮೀಸಲಿಡುತ್ತಾನೆ.

ನಿರೀಕ್ಷೆಗಳಿಲ್ಲದೆ ಪ್ರೀತಿ ಹಂಚುವ ತಾಯಿ-ತಂದೆಯ ಬಗೆಗೆ ಸಾಲುಗಳಲ್ಲಿ ಅಡಕ ಮಾಡಲು ಪದಗಳು ಸಾಲುವುದಿಲ್ಲ. ಅಮ್ಮನ ಪ್ರೀತಿ ಭೂಮಿಯಂತದ್ದು ಅದರ ಮಡಿಲೊಳಗೆ ಹುದುಗಬಹುದು. ಒಂದಿಷ್ಟು ಅಳತೆಗೂ ಆಗಬಹುದೇನೋ! ಅಪ್ಪನ ಪ್ರೀತಿ ಅಳತೆಗೆ ಸಿಗದ ಆಕಾಶ.

ನಾ ಕಂಡಂತೆ ದಶಕಗಳ ಹಿಂದಿನ ಅಪ್ಪಂದಿರ ಕಠಿನತೆ ಇಂದಿನ ಅಪ್ಪಂದಿರಲ್ಲಿ ಇಲ್ಲ . ನಮಗೆ ಅಪ್ಪನಲ್ಲಿ ಏನನ್ನಾದರೂ ಕೇಳಬೇಕೆಂದರೆ ಅಮ್ಮ ಮಾಧ್ಯಮವಾಗಿರುತ್ತಿದ್ದರು. ಪಕ್ಕದ ಮನೆಯ ಮಕ್ಕಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಮಾತನಾಡಿಸುವ ಅಪ್ಪ ನಮಗೆ ಕಣ್ಣಲ್ಲೇ ಏನನ್ನು ಮಾಡಬೇಕು, ಮಾಡಬಾರದೆಂಬ ಸೂಚನೆ ನೀಡುತ್ತಿದ್ದರು. ಅಪ್ಪನ ಪ್ರೀತಿ ಮೌನದಲ್ಲೇ, ಗದರಲು ಮಾತ್ರ ಮಾತು. ಅಪ್ಪ ಆಫೀಸಿನಿಂದ ಬರುವವರೆಗೂ ನಾವು ಪಂಜರದಿಂದ ಹೊರಬಿಟ್ಟ ಹಕ್ಕಿಗಳು, ಅವರು ಬರುವ ಹೊತ್ತಿಗೆ ಗೂಡು ಸೇರುವ ಮರಿಗಳಂತೆ ಮನೆ ಸೇರುತ್ತಿದ್ದೆವು. ಅದೆಂತಹ ಶಿಸ್ತು, ಕಠಿನತೆಯಿದ್ದರೂ, ಅಪ್ಪ ಸಹಜವಾಗಿ ಬರುವ ಸಮಯಕ್ಕೆ ಮನೆಗೆ ಬರದಿದ್ದರೆ ಒಳಗೊಳಗೆ ಚಡಪಡಿಕೆ. ಅವರು ಮನೆಯಲ್ಲಿದ್ದರೆ ಒಂದು ಭದ್ರತೆಯ ಧೈರ್ಯ, ಅಂತಹದೊಂದು ಸಮಾಧಾನ ಅವರ ಹಾಜರಿಗೆ.

Advertisement

ಪ್ರತೀ ಮಗುವಿನ ಅಪ್ಪನೇ ನಾಯಕ, ಶಕ್ತಿ, ಆಧಾರ ಸ್ತಂಭ, ಆಸರೆ, ಪ್ರೀತಿ, ಪ್ರಪಂಚ. ಎಲ್ಲ ಕಷ್ಟಗಳಿಗೆ ಮುಂಬರುವ ರಕ್ಷಿಸುವ ಗುರಾಣಿ. ಅವರ ಪರಿಶ್ರಮಕ್ಕೆ ನಿಷ್ಕಲ್ಮಶ ಪ್ರೀತಿಗೆ, ಮಕ್ಕಳು ಮಾಡುವ ಸಾಧನೆಯೇ ಕೊಡುಗೆ. ಉತ್ತಮ ಮಾರ್ಗದಲ್ಲಿ ಚಲಿಸಿ, ಜೀವನದ ಪಥದಲ್ಲಿ ಉನ್ನತಿಯನ್ನು ಪಡೆದರೆ ಅವರಿಗೆ ಅದಕ್ಕಿಂತ ಕೊಡುಗೆ ಮತ್ತೂಂದಿರದು. ನಮಗೆಲ್ಲ ಜೀವಕೊಟ್ಟ ತಾಯಿಗೆ, ಜೀವನ ಕೊಟ್ಟ ಮಾತೃ ಹೃದಯದ ತಂದೆಯರಿಗೆಲ್ಲ ಒಂದು ಸಲಾಂ.

*ಶೋಭಾ ಚೌಹಾಣ್‌, ಫ್ರಾಂಕ್‌ಫ‌ರ್ಟ್‌

Advertisement

Udayavani is now on Telegram. Click here to join our channel and stay updated with the latest news.

Next