Advertisement

Fathers day 2024: ಅಪ್ಪ ಯಾಕೋ ಹಿಂದೆ ಉಳಿದುಬಿಟ್ಟ !

01:19 PM Jun 15, 2024 | Team Udayavani |

ಈ ವರ್ಷದ “ಅಪ್ಪಂದಿರ ದಿನ’ ಜೂನ್‌ ತಿಂಗಳ ಹದಿನಾರರಂದು. ಅಪ್ಪಂದಿರ ದಿನವು ದಿನಾಂಕದಲ್ಲಿ ಬದಲಾದರೂ ದಿನದ ವಿಷಯದಲ್ಲಿ ಜೂನ್‌ ತಿಂಗಳ ಮೂರನೆಯ ರವಿವಾರದಂದೇ ಬರುತ್ತದೆ ಎಂಬ ಮಾತು ಹೌದು ಮತ್ತು ಅಲ್ಲ. ಈಗ “ಹೌದು ಮತ್ತು ಅಲ್ಲ’ ವಿಷಯ ಏಕೆ? ಬಹುಶ: ಗಮನಿಸಿರುತ್ತೀರಾ, ಇದನ್ನು “ಅಪ್ಪಂದಿರ ದಿನ’ ಎನ್ನಲಾಗಿದೆ ಆದರೆ “ವಿಶ್ವ ಅಪ್ಪಂದಿರ ದಿನ’ ಎಂದು ಹೇಳಲಾಗಿಲ್ಲ.

Advertisement

“ಹೌದು ಮತ್ತು ಅಲ್ಲ’ ಎಂಬುದರ ಮೂಲ ಇದೇ. ಜಗತ್ತಿನಾದ್ಯಂತ ಇರುವ ದೇಶಗಳೆಲ್ಲೆಡೆ ಒಂದೇ ದಿನ “ಅಪ್ಪಂದಿರ ದಿನ’ ಎಂದು ಆಚರಿಸಿದ್ದರೆ ಅದು “ವಿಶ್ವ’ ಆಚರಣೆ ಆಗಿರುತ್ತಿತ್ತು. “ಅಪ್ಪಂದಿರ ದಿನ’ ಎಂಬುದನ್ನು ವಿಶ್ವಾದ್ಯಂತ ವರ್ಷವಿಡೀ ಆಚರಿಸುತ್ತಾರೆ. ವರ್ಷದ ಮೊದಲ ಅಪ್ಪಂದಿರ ದಿನವು ಮಾರ್ಚ್‌ ಹದಿನೆಂಟು ಮೊಂಗೋಲಿಯದಲ್ಲಿ. ಹಾಗೆಯೇ ಸಾಗಿ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್‌ 26 ರಂದು ಬಲ್ಗೇರಿಯಾ ದೇಶದಲ್ಲಿ. ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಕೆಲವೆಡೆ ಧರ್ಮಾಚರಣೆಯ ಅಪ್ಪಂದಿರ ದಿನವನ್ನೂ ಆಚರಿಸುತ್ತಾರೆ. ಹೆಚ್ಚಿನ ವೇಳೆಯಲ್ಲಿ ವಿಶ್ವಾದ್ಯಂತ ಅಮ್ಮಂದಿರ ದಿನದ ಆಚರಣೆಯು ಮಾರ್ಚ್‌ ಮತ್ತು ಮೇ ತಿಂಗಳಲ್ಲಿ ನಡೆದರೆ, ಅಪ್ಪ ಮಾತ್ರ ವರ್ಷವಿಡೀ ಚದುರಿಬಿಟ್ಟ.

ತೆಲುಗು ಕವಿಯೋರ್ವ ಬರೆದಿದ್ದ ಹಲವು ಸಾಲುಗಳನ್ನು ರವಿ ಶ್ರೀವತ್ಸ ಅವರು ಚೊಕ್ಕವಾಗಿ ಕನ್ನಡಕ್ಕೆ ಅನುವಾದಿಸಿ ಎಲ್ಲೆಡೆ ಹಂಚಿಕೊಂಡಿದ್ದರು. ಬಹಳ ಸುಂದರ ಅನುವಾದವಾಗಿತ್ತು ಮತ್ತು ಕೊನೆಯಲ್ಲಿ ಅವರೇ ಗದ್ಗದಿತರಾಗಿದ್ದೂ ಉಂಟು. ಹಲವಾರು ವೀಕ್ಷಕರ ಕಣ್ಣಲ್ಲೂ ಕಣ್ಣೀರು ಹರಿಯಿತು ಎಂದು ಕೇಳಿದ್ದೆ. ಪ್ರತೀ ವಿಷಯವನ್ನೂ ಅರಹುವಾಗ ಕೊನೆಯಲ್ಲಿ ಹೇಳುತ್ತಿದ್ದುದು “ಅಪ್ಪ ಯಾಕೋ ಹಿಂದುಳಿದುಬಿಟ್ಟ’. ಕೊನೆಯಲ್ಲಿ ಒಂದು ವಿಷಯ ಹೇಳುವಾಗಲೇ ಅವರ ಗಂಟಲು ಕಟ್ಟಿದ್ದು, “ಸಾಯುವ ಹಂತದಲ್ಲಿ ಮಾತ್ರ ಅಪ್ಪ ಮುಂದೆ ಸಾಗಿ, ಅಮ್ಮ ಹಿಂದೆ ಉಳಿಯುತ್ತಾಳೆ’ ಅಂತ. ಇದನ್ನು ನಾವು ಕೊಂಚ ಭಿನ್ನವಾಗಿ ನೋಡುವ, ಹೀಗೇಕೆ ಎಂದು!

ಮೊದಲಿಗೆ, ಒಬ್ಬ ವ್ಯಕ್ತಿ ಎಂದು ನೋಡುವಾಗ ಅಪ್ಪ, ಅಮ್ಮ, ಮಗ, ಮಗಳು ಹೀಗೆ ಯಾರೇ ಆಗಲಿ ಎಲ್ಲರಿಗೂ ಅವರವರದ್ದೇ ಆದ ವ್ಯಕ್ತಿತ್ವ. ವ್ಯಕ್ತಿ ಎಂದರೆ ವ್ಯಕ್ತಿತ್ವ, ಅದರಂತೆಯೇ ವ್ಯಕ್ತಿತ್ವ ಎಂದರೆ ವ್ಯಕ್ತಿ. ಹೀಗಾಗಿ ಎಲ್ಲೆಡೆ ಒಳಿತು ಕೆಡುಕುಗಳು ಇದ್ದೇ ಇರುತ್ತದೆ. ಕೆಡುಕುಗಳನ್ನು ದೂರವಿರಿಸಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಗೌರವಿಸುವುದೇ ಅಮ್ಮನ ದಿನ, ಅಪ್ಪನ ದಿನ ಎಂಬುದರ ಹಿನ್ನೆಲೆ.

Advertisement

ಅಪ್ಪಂದಿರ ದಿನ ಎಂಬುದು ಮಕ್ಕಳ ತಂದೆ ಎಂಬ ವ್ಯಕ್ತಿಯ ಬಗ್ಗೆ ಮಾತ್ರವಲ್ಲ ಬದಲಿಗೆ ಅಂಥಾ ತಂದೆಯ, ತಂದೆಯ ಸ್ಥಾನದ, ತಂದೆಯ ಕರ್ತವ್ಯವನ್ನು ಹೊರುವ ಯಾವುದೇ ವ್ಯಕ್ತಿಗೂ ಈ ದಿನ ಸಲ್ಲುತ್ತದೆ. ನಾವೆಲ್ಲರೂ ಕಂಡಿರುವ Single Momಗಳು ವಿಭಿನ್ನ ಪರಿಸ್ಥಿತಿಗಳನ್ನು ಎದುರಿಸಿ ತಾನೇ ತಾಯಿ, ತಾನೇ ತಂದೆಯಾಗಿಯೂ ನಿಂತು ಸಂಸಾರ ತೂಗಿಸುತ್ತಾಳೆ. ಇಂಥಾ ಜವಾಬ್ದಾರಿಯುತ ಹೆಣ್ಣೂ “ಅಪ್ಪಂದಿರ ದಿನ’ದ ಆಚರಣೆಗೆ ಅರ್ಹಳು. ಮನೆಯ ಹಿರಿಯಣ್ಣನೂ ತಂದೆಯ ಸ್ಥಾನದವನು ಎನ್ನುತ್ತಾರೆ ಹಿರಿಯರು. ಹಿಂದಿನ ದಿನಗಳಲ್ಲಿ, ಹತ್ತಾರು ಮಕ್ಕಳು ಇರುವ ಸನ್ನಿವೇಶಗಳಲ್ಲಿ, ತಂದೆಯಾದವನು ಹರಿಪಾದ ಸೇರಿದರು ಎಂದಾಗ ಚಿಕ್ಕ ಮಕ್ಕಳು ಹಿರಿಯ ಅಣ್ಣಂದಿರ ಆಶ್ರಯದಲ್ಲೇ ಬೆಳೆಯುತ್ತಿದ್ದರು. ನಮ್ಮ ಮನೆಗಳಲ್ಲೇ ನೋಡಿದ್ದೇನೆ, ಕೆಲವೊಮ್ಮೆ ಅಣ್ಣಂದಿರು ಮದುವೆಯನ್ನೂ ಮಾಡಿಕೊಳ್ಳದೇ ತಂದೆಯ ಸ್ಥಾನದಲ್ಲಿ ನಿಂತು ಆ ಚಿಕ್ಕವಯಸ್ಸಿನ ತಮ್ಮ-ತಂಗಿಯರನ್ನು ತಮ್ಮ ಮಕ್ಕಳಂತೆಯೇ ಸಾಕಿದ್ದೂ ಉಂಟು. ಇಂಥಾ ಅಣ್ಣಂದಿರೂ “ಅಪ್ಪಂದಿರ ದಿನ’ಕ್ಕೆ ಅರ್ಹರು. ಕೊನೆಯದಾಗಿ, ತನ್ನದೇ ಕೂಸಿನ ಅಪ್ಪನಾದವ “ಅಪ್ಪ’ ಎನಿಸಿಕೊಳ್ಳುವುದೂ ಆ ಕೂಸು ಹುಟ್ಟಿದ ದಿನದಂದೇ. ಆ ಕೂಸಿನ ಹುಟ್ಟಿನೊಂದಿಗೆ ಒಬ್ಬ ತಾಯಿ ಹುಟ್ಟುತ್ತಾಳೆ ಎಂಬಂತೆ ಒಬ್ಬ ತಂದೆಯ ಜನ್ಮದಿನವೂ ಅಂದೇ ಅಲ್ಲವೇ?

ಈಗ ಈ ತಂದೆಯ ಸ್ಥಾನದ ವ್ಯಕ್ತಿಯ ಬಗ್ಗೆ ಮಾತನಾಡುವ. ಇಂದಿನ ವಿಷಯಕ್ಕೆ ಬದಲಾಗಿ, ಅಂದಿನ ತಂದೆಯ ಬಗ್ಗೆ ಆಲೋಚಿಸಿದರೆ, ಮಕ್ಕಳು ಏಳುವ ಮುನ್ನವೇ ಫ್ಯಾಕ್ಟರಿಯ ಮೊದಲ ಶಿಫ್ಟ್ ಗೆ ತೆರಳಿರುವ ವ್ಯಕ್ತಿ. ಶಾಲೆಯಿಂದ ಮನೆಗೆ ಬಂದಿರುವ ವೇಳೆಯಲ್ಲಿ ಬಹುಶ: ಬೇರೆಲ್ಲೋ ಲೆಕ್ಕ ಬರೆಯುವ ಕೆಲಸದಲ್ಲೂ ಇರುವ ವ್ಯಕ್ತಿ. ಇದೊಂದು ಬಡ ಅಥವಾ ಕೆಳಮಧ್ಯಮವರ್ಗದ ಮನೆತನದ ಚಿತ್ರಣ. ಇನ್ನು ಮಧ್ಯಮವರ್ಗದ ಚಿತ್ರಣ ಎಂದರೆ ಒಂದು ನಿಗದಿತ ಸಮಯದ ಫ್ಯಾಕ್ಟರಿ ಅಥವಾ ಮತ್ಯಾವುದೋ ಸರಕಾರೀ ಕೆಲಸದಲ್ಲಿರುವ ವ್ಯಕ್ತಿ. ಸಂಜೆಯ ಹೊತ್ತಿಗೆ ತನ್ನಷ್ಟಕ್ಕೆ ತಾನಿರುವ ವ್ಯಕ್ತಿ. ಹೆಚ್ಚಿನ ವೇಳೆಯಲ್ಲಿ ಗಂಭೀರ, ಅತಿಗಂಭೀರ ವ್ಯಕ್ತಿ. ಅಪ್ಪ ಎಂದರೆ ಭೀತಿಯ ನೆರಳಲ್ಲೇ ಇರುವ, ಆತನ ಮುಂದೆ ಏನೂ ಕೇಳಲಾಗದ ಅಥವಾ ಹೇಳಲಾಗದ ಮಕ್ಕಳಿಗೆ ಅಮ್ಮನೇ ಮಾಧ್ಯಮ.

ಅಪ್ಪ ಎಂದರೆ ಸುಪ್ರೀಂಕೋರ್ಟ್‌ ಎಂಬಂತೆ. ತಪ್ಪು ಮಾಡಿದರೆ ಕೈಗೆ ಸಿಕ್ಕಿದ್ರಲ್ಲೇ ಬಡಿವವ ಎಂಬಂತೆ. ಎಂಥಾ ಕ್ರೂರಿ ಎಂದೋ, ಎಂಥಾ ಜವಾಬ್ದಾರಿ ರಹಿತ ಎಂದೋ ಅನ್ನಿಸಬಹುದು ಆದರೆ ಎಲ್ಲಕ್ಕೂ ಏನೋ ಹಿನ್ನೆಲೆ ಇದೆ. ತಾನಾಯ್ತು ತನ್ನದಾಯ್ತು ಎಂಬ ನಿರ್ಲಿಪ್ತ ಮನದ ಹಿಂದೆ ಯಾರೂ ಅರಿಯದ ದುಗುಡ ಇರಬಹುದು. ತೀರಾ ಗಂಭೀರ ವ್ಯಕ್ತಿಯ ಹೃದಯದ ಆಳದಲ್ಲಿ ತಮ್ಮ ಕಷ್ಟಗಳನ್ನು ಇನ್ನೊಬ್ಬರ ಮುಂದೆ ಹೇಳಿಕೊಳ್ಳಲಾಗದ ಪರಿಸ್ಥಿಯ ಮರೆಮಾಚುವಿಕೆ ಇರಬಹುದು. ತಾನು ಸಂತಸದಿಂದ ಇದ್ದೇನೆ ಎಂಬುದು ಸರೀಕರಲ್ಲಿ ಇರುವ ತೋರಿಕೆಯೂ ಆಗಿರಬಹುದು.

ತನಗಿಂತಾ ಆರ್ಥಿಕ ಪರಿಸ್ಥಿತಿಯಲ್ಲಿ ಚೆನ್ನಾಗಿರುವ ಸ್ನೇಹ ವಲಯದಲ್ಲಿ ತನಗೇ ಏಕೆ ಹೀಗೆ ಎಂಬ ಚಿಂತೆ ಇರಬಹುದು. ಇದರಾಚೆಯ ವಿಷಯ ಎಂದರೆ, ಹೆಂಡತಿಯಿಂದಲೇ ಮೂದಲಿಕೆ ಅನುಭವಿಸುತ್ತಿರುವ ಬೆಂದ ಹೃದಯ ಇರಬಹುದು. ಸಾಮಾನ್ಯವಾಗಿ ಇಂಥವನ್ನು ಅನುಭವಿಸುವ ತಂದೆಯ ಸ್ಥಾನದಲ್ಲಿರುವ ವ್ಯಕ್ತಿ ದಿನನಿತ್ಯದಲ್ಲಿ ಒಳಗೊಳಗೇ ಕುದಿಯುತ್ತಿರುವ ಅಗ್ನಿಪರ್ವತ. ಇಂಥಾ ಪರಿಸ್ಥಿತಿಯಲ್ಲಿರುವ ತಂದೆಯು ನಿವೃತ್ತನಾದ ಎಂದ ಅರ್ಧಜೀವ ಕಳೆದುಕೊಂಡಂತೆ ಆಗುತ್ತಾನೆ. ತಾನು ಪರಾವಲಂಬಿ ಎಂಬ ಒತ್ತಡಕ್ಕೆ ಒಳಗಾಗುತ್ತಾನೆ.

ಪಾಪ ಬಡ ಹೃದಯ ಎಷ್ಟೆಂದು ಅನುಭವಿಸೀತು? ಮೊದಲೇ ಗಂಡು ಎಂಬ ಅಹಂಭಾವ. ಕಣ್ಣೀರು ಹಾಕಲೂ ಆಗದ ಇಸಂ. ತಲೆಬಾಗಿದರೆ ಯಾರು ನಗಬಹುದೋ ಎಂಬ ಭೀತಿಯಲ್ಲೇ ಸುಟ್ಟು ಬೇಗ ಪಟವೇರುತ್ತಾನೆ. ಈ ವಿಷಯದಲ್ಲಿ “ಅಪ್ಪ ಹಿಂದುಳಿಯದೇ ಮುಂದಿರುತ್ತಾನೆ’. ಇಂಥಾ ಅಂದಿನ ಅಪ್ಪನಿಗೆ, ಮತ್ತು ಒತ್ತಡವನ್ನೇ ಹಾಸುಹೊದ್ದು ಮಲಗುವ ಇಂದಿನ ಅಪ್ಪಂದಿರಿಗೆ ಕವಚ ತೊಡಿಸುವ ಬನ್ನಿ. ಇದೊಂದು ರಕ್ಷಣ ಕವಚ. ಆಂಗ್ಲದಲ್ಲಿ ಶಿಲ್ಡ್‌ ಎನ್ನುವ ಈ ಕವಚ ಒಂದು acronym ಅಥವಾ ಸಂಕ್ಷಿಪ್ತರೂಪ. ಏನಿದು ಶೀಲ್ಡ್‌? ಅಂದ ಹಾಗೆ, ಈ ಕವಚವು ಕೇವಲ ಅಪ್ಪನಿಗೆ ಅಂತೇನಲ್ಲ ಆದರೆ ಅಪ್ಪಂದಿರ ದಿನಕ್ಕೆ ಅಪ್ಪನಿಗೆ ಕೊಡುಗೆಯಾಗಿ ನೀಡುವ. SHIELD ಎಂಬುದರ ವಿಸ್ಕೃತ ರೂಪ ಹೀಗಿದೆ.

S – Sleep – ಏಳು ಘಂಟೆಗಳ ಕಾಲದ ನಿದ್ರೆಯಲ್ಲಿ ಕನಿಷ್ಠ ಪಕ್ಷ ಐದು ಘಂಟೆಯಾದರೂ ಅಬಾಧಿತ ನಿದ್ದೆ ಮಾಡಿ.
H – How to handle stress? ಒತ್ತಡ ನಿರ್ವಹಣೆ ಹೇಗೆ ? ಇದಕ್ಕೆ ಇಂಥದ್ದೇ ಎಂಬ ಮಾರ್ಗಗಳು ಅಥವಾ ಸೂತ್ರಗಳಿಲ್ಲ. ಧ್ಯಾನ, ಸಂಗೀತ ಹೀಗೆ ಯಾವುದೂ ಆಗಬಹುದು.
I – Interaction – ಜನರೊಂದಿಗೆ ಬೆರೆಯಿರಿ. ಸ್ನೇಹವಲಯ ಹೆಚ್ಚಿಸಿಕೊಳ್ಳಿ. ಮುಕ್ತವಾಗಿ ಮಾತನಾಡಿ, ನಗೆಯಾಡಿ.
E – Exercise – ವ್ಯಾಯಾಮ. ದಿನಕ್ಕೆ ನಾಲ್ಕು ಘಂಟೆಗಳ ಕಾಲ ನೂರು ಕಿಲೋ ಚಕ್ರಗಳನ್ನು ಎತ್ತುವುದು ಬೇಡ. ಉಂಡಾನ್ನ ಕರಗಿಸುವ ಯತ್ನ ಮಾಡಿದರೆ ಸಾಕು.
L & Learn– ಹೊಸ ಕಲಿಕೆಗಳು ಉಸಿರಾಗಬೇಕು. ಜಾಗಕ್ಕೆ ಉಪಯುಕ್ತ ಅಲ್ಲದಿದ್ದರೂ ನಿಮಗೆ ಉಪಯೋಗವಾಗುವಂಥದ್ದಾದರೂ ಸಾಕು.
D – Diet – ಕೈಲಾಗುವುದಕ್ಕಿಂತಲೂ ಹೆಚ್ಚಿಗೆ ಕೆಲಸ ಮಾಡುವುದು ಹೇಗೆ ತಪ್ಪೋ ಅದರಂತೆಯೇ ಜೀರ್ಣವಾಗುವುದಕ್ಕಿಂತಾ ಹೆಚ್ಚು ತಿನ್ನುವುದೂ ಅಷ್ಟೇ ತಪ್ಪು. ನಿಯಮಿತ ಆಹಾರ ಎಂಬುದಕ್ಕಿಂತಲೂ ಉಣ್ಣುವ ಆಹಾರವನ್ನೇ ಜೀರ್ಣವಾಗುವಷ್ಟು ತಿನ್ನಬೇಕು ಅಂತ.

ಅಪ್ಪಂದಿರ ದಿನದಂದು ಅಪ್ಪನ ಸ್ಥಾನದಲ್ಲಿದ್ದು ನಿಮ್ಮ ಕಾರ್ಯನಿರ್ವಹಿಸುತ್ತಿರುವ ವಿಷಯವಾಗಿ ಅಭಿನಂದನೆಗಳು. ಅಪ್ಪನ ಅಪ್ಪ ಆ ತಿಮ್ಮಪ್ಪ, ಭರಮಪ್ಪ, ಹನುಮಪ್ಪ ಯಾವುದೇ ದೇವಪ್ಪನಾಗಲಿ ನಿಮ್ಮನ್ನು ಹರಸಲಿ.

*ಶ್ರೀನಾಥ್‌ ಭಲ್ಲೇ, ರಿಚ್ಮಂಡ್‌

 

Advertisement

Udayavani is now on Telegram. Click here to join our channel and stay updated with the latest news.

Next