ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಿಜವಾದ ಭಾರತೀಯ ಸಂಸ್ಕೃತಿ ಶಿಕ್ಷಣದ ಚಿತ್ರವು ಕಣ್ಣ ಮುಂದೆ ಕಟ್ಟಿದಂತೆ ಕಾಣುವುದು. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮೆಲ್ಲ ಸಾಧನೆಗೆ ಮೆಟ್ಟಿಲಾದ ತಂದೆ-ತಾಯಿ, ಗುರು- ಹಿರಿಯರಿಗೆ ಗೌರವ ನೀಡಿ ಬದುಕುವುದೇ ನಿಜವಾದ ಯಶಸ್ಸು ಎಂದು ತುಳು ರಂಗಭೂಮಿ ಕಲಾವಿದ, ಚಲನಚಿತ್ರ ನಟ ಅರವಿಂದ ಬೋಳಾರ್ ಹೇಳಿದರು. ಎ. 5ರಂದು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ 2018- 19ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜ್ಞಾನಿಗಳ ಪರಂಪರೆ
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಭಾರತ ಇಂದು ಜಗತ್ತಿನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಬೆಳೆದು ನಿಂತಿರುವ ಪ್ರಮುಖ ರಾಷ್ಟ್ರಗಳ ಪೈಕಿ ಒಂದಾಗಿದೆ. ಇಲ್ಲಿನ ವಿಜ್ಞಾನಿಗಳ ಸಾಧನೆ ದೇಶದ ಎತ್ತರ ವನ್ನು ಇನ್ನಷ್ಟು ಮೇಲಕ್ಕೇರಿಸಿರುವುದು ಹೆಮ್ಮೆಯ ವಿಷಯ. ಇಂತಹ ಜ್ಞಾನಿಗಳ ಪರಂಪರೆಯೇ ನಮ್ಮದು ಎಂಬ ಭಾವ ಸದಾ ನಮ್ಮಲ್ಲಿರಲಿ ಎಂದರು.
ಪುತ್ತೂರು ವಿವೇಕಾನಂದ ಕಾಲೇಜು ಸಂಚಾಲಕ ಜಯರಾಮ ಭಟ್, ಕಲ್ಲಡ್ಕ ಶ್ರೀರಾಮ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿಧರ ಮಾರ್ಲ, ಆಡಳಿತ ಮಂಡಳಿ ಸದಸ್ಯೆ ಶೋಭಾ ಕೊಳತ್ತಾಯ, ಸಿವಿಲ್ ಎಂಜಿನಿಯರ್ ರಾಮಪ್ರಸಾದ್ ಕೊಂಬಿಲ, ಉದ್ಯಮಿ ಚಂದ್ರಶೇಖರ ರೈ, ನಾರಾಯಣ ನಾಯಕ್ ದಂಡೆಮಾರ್ ಮತ್ತು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕ ರಮೇಶ್ ಎನ್. ಉಪಸ್ಥಿತರಿದ್ದರು.
ಕಾಲೇಜು ವಾರ್ಷಿಕೋತ್ಸವ ಪ್ರಯುಕ್ತ ಪ್ರದೀಪ್ತ ಸಾಂಸ್ಕೃತಿಕ ಸಂಘ ಹಾಗೂ ಪ್ರತಾಪ ಕ್ರೀಡಾ ಸಂಘದ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು.
ಶೈಕ್ಷಣಿಕ ವರ್ಷದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಪೂಜಾನೃತ್ಯ, ಕಂಸಾಳೆ, ರಾಜಸ್ಥಾನದ ಬಂಜಾರಾ, ಗುಜರಾತಿನ ದಾಂಡಿಯಾ, ಶಿವತಾಂಡವ, ಯಕ್ಷಗಾನ ಮುಂತಾದ ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು.
ಬಹುಮಾನ ಪಟ್ಟಿಯನ್ನು ಉಪನ್ಯಾಸಕಿ ಶುಭಲತಾ, ಶೈಲಜಾ ಹಾಗೂ ಗಂಧರ್ವ ವಾಚಿಸಿದರು. ಪ್ರಾಂಶುಪಾಲ ಕೃಷ್ಣಪ್ರಸಾದ್ ಸ್ವಾಗತಿಸಿ, ವಿದ್ಯಾರ್ಥಿಗಳಾದ ಸಂತೋಷ್ ವಂದಿಸಿದರು. ವರದರಾಜ್, ಜಯರಾಜ್ ಕಾರ್ಯಕ್ರಮ ನಿರೂಪಿಸಿದರು.