Advertisement
ಬೈಂದೂರು: ಸುವರ್ಣ ಸಂಭ್ರಮದಲ್ಲಿರುವ “ಉದಯವಾಣಿ’ಯು ಮಕ್ಕಳ ದಿನಾಚರಣೆಯ ಪ್ರಯುಕ್ತ ನ.13ರಂದು ಆಯೋಜಿಸಿದ ವಿವಿಧ ವೃತ್ತಿಗಳ ಸಾಧಕರ “ಜೀವನ ಕಥನ’ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಜಾನ್ ಸಿ. ಥಾಮಸ್ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಸುವರ್ಣ ಮಹೋತ್ಸವ ಹೊಸ್ತಿಲ್ಲಲ್ಲಿರುವ ಬೈಂದೂರಿನ ರತ್ತುಬಾೖ ಜನತಾ ಪ್ರೌಢಶಾಲೆಯಲ್ಲಿ ಈ ಕಾರ್ಯಕ್ರಮ ನಡೆಯಿತು.
ಪ್ರೇರಣಾದಾಯಕ ಸಂವಾದ
ಅಧ್ಯಕ್ಷತೆ ವಹಿಸಿದ್ದ ರತ್ತುಬಾೖ ಜನತಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಮಂಜು ಕಾಳಾವರ ಮಾತನಾಡಿ, “ಉದಯವಾಣಿ’ ದೈನಿಕ ಮತ್ತು ನಮ್ಮ ರತ್ತುಬಾೖ ಶಾಲೆಗಳೆರಡೂ ಇದೇ ವರ್ಷ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಸುಯೋಗ. ಈ ಸುಸಂದರ್ಭ ದಲ್ಲಿಯೇ ದೇಶದ ನೈಜ ಹೀರೋಗಳಾಗಿರುವ ಸೈನಿಕರೊಂದಿಗೆ ಭವಿಷ್ಯದ ಪ್ರಜೆಗಳಿರುವ ಮಕ್ಕಳೊಂದಿಗೆ ಸಂವಾದ ನಡೆಸುತ್ತಿ ರುವುದು, ಪ್ರೇರಣಾದಾಯಕ, ಸ್ಪೂರ್ತಿ ತುಂಬುವ ಕಾರ್ಯಕ್ರಮವಾಗಿದೆ ಎಂದರು. ಕುಂದಾಪುರದ ಹಿರಿಯ ವರದಿಗಾರ ಪ್ರಶಾಂತ್ ಪಾದೆ ಪ್ರಾಸ್ತವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಾರುಕಟ್ಟೆ ವಿಭಾಗದ ಪ್ರತಿನಿಧಿ ಹರೀಶ್ ಜಾಲಾಡಿ ಸ್ಮರಣಿಕೆ ನೀಡಿದರು. ವರದಿಗಾರರಾದ ಅರುಣ್ ಕುಮಾರ ಶಿರೂರು ಕಾರ್ಯಕ್ರಮ ನಿರ್ವಹಿಸಿದರು. ಕೃಷ್ಣ ಬಿಜೂರು ವಂದಿಸಿದರು. ಗಿರೀಶ್ ಶಿರೂರು ಸಹಕರಿಸಿದರು.
ಪ್ರಶ್ನೆಗಳ ಸುರಿಮಳೆ
ಸಂವಾದದಲ್ಲಿ ಸೇನೆಯ ಬಗ್ಗೆ, ಸೈನಿಕರ ಕುರಿತು, ಎಷ್ಟು ಓದಿರಬೇಕು, ಹೇಗೆ ಸೈನ್ಯಕ್ಕೆ ಸೇರಬೇಕು ಎನ್ನುವುದರ ಕುರಿತ ಕುತೂಹಲಕಾರಿಯಾದ ಪ್ರಶ್ನೆಗಳ ಸುರಿಮಳೆ ಮಕ್ಕಳಿಂದ ಬಂತು.
Related Articles
ಸರಕಾರಿ ಮಾದರಿ ಹಿ.ಪ್ರಾ. ಶಾಲೆ ಬೈಂದೂರು, ಜೂನಿಯರ್ ಕಾಲೇಜು ಬೈಂದೂರು, ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗ ಉಪ್ಪುಂದ, ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗ ಖಂಬದಕೋಣೆ, ಸರಕಾರಿ ಹಿ.ಪ್ರಾ. ಶಾಲೆ ಮುಲ್ಲಿಬಾರು ಶಿರೂರಿನ ವಿದ್ಯಾರ್ಥಿಗಳು, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಯ ಸಂಯೋಜನಾಧಿಕಾರಿ ಅಬ್ದುಲ್ ರವೂಫ್, ಬೈಂದೂರಿನ ರತ್ತುಬಾೖ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Advertisement
ಸೈನಿಕರ ಕುಟುಂಬ“ಜೀವನ ಕಥನ’ದ ಸಾಧಕ ಯಡ್ತರೆ ಗ್ರಾಮದ ಮಧ್ದೋಡಿಯ ಜಾನ್ ಸಿ. ಥಾಮಸ್ ಅವರದು ಸೈನಿಕ ಕುಟುಂಬ. ತಂದೆ ಎಂ.ವಿ. ಥಾಮಸ್ ಬ್ರಿಟಿಶ್ ಸೇನೆಯಲ್ಲಿ ಸೈನಿಕರಾಗಿದ್ದು, ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಪರ ಭಾರತವನ್ನು ಪ್ರತಿನಿಧಿಸಿದ್ದರು. ಜಾನ್ ಅವರು 1971ರಲ್ಲಿ ಭೂಸೇನೆಗೆ ಸೇರಿದ್ದು, 1971ರ ಬಾಂಗ್ಲಾ ಯುದ್ಧ ಮತ್ತು 1984ರ ಆಪರೇಶನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. 1987ರಲ್ಲಿ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡರು. ಸದ್ಯ ಕೃಷಿಕರಾಗಿದ್ದಾರೆ. ಪುತ್ರ ರಂಜಿತ್ ಕುಮಾರ್ ಪ್ರಸ್ತುತ ವಾಯುಪಡೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದು, ಸೊಸೆ ಸೈನಿ ರಂಜಿತ್ ಸೇನೆಯಲ್ಲಿ ವೈದ್ಯೆಯಾಗಿದ್ದಾರೆ. ಮಾಜಿ ಸೈನಿಕರೊಂದಿಗೆ ಸಂವಾದ
ಪ್ರ: ಸೇನೆಗೆ ಸೇರಬೇಕಾದರೆ ಎಷ್ಟು ಓದಿರಬೇಕು?
– ವಿಶ್ವಾಸ್,(ಕಂಬದಕೋಣೆ ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗ)
ಉ: ಕನಿಷ್ಠ ಎಸೆಸೆಲ್ಸಿ ಓದಿರಲೇಬೇಕು. ಆದರೆ ಅವರವರ ವಿದ್ಯಾರ್ಹತೆಗೆ ಅನುಗುಣವಾಗಿ ಸೇನೆಯಲ್ಲಿ ವಿವಿಧ ಹುದ್ದೆಗಳನ್ನು ನೀಡಲಾಗುತ್ತದೆ. ಪ್ರ: ಸೈನ್ಯಕ್ಕೆ ಸೇರಿದ ನಿಮ್ಮ ಆರಂಭಿಕ ದಿನಗಳು ಹೇಗಿದ್ದವು?
– ಸುದರ್ಶನ್ (ರತ್ತುಬಾೖ ಜನತಾ ಪ್ರೌಢಶಾಲೆ)
ಉ:1970ರಲ್ಲಿ 19-20 ವರ್ಷದವನಿದ್ದಾಗ ಸೇನೆಗೆ ಸೇರಿದೆ. 71ರಲ್ಲಿ ಬಾಂಗ್ಲಾ ಯುದ್ಧದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಆದರೆ ಆಗ ಹೆದರಿಕೆ, ಸಾವು – ನೋವಿನ ಭಯವೇ ಇರಲಿಲ್ಲ. ಯೌವ್ವನದ ಉತ್ಸಾಹವಿತ್ತು. ಪ್ರ: ಎನ್.ಎಸ್.ಜಿ. ಕಮಾಂಡೋ ಕಾರ್ಯ ಹೇಗೆ?
– ಶ್ರೀವತ್ಸ , (ಉಪ್ಪುಂದ ಪ್ರೌಢಶಾಲೆ)
ಉ: ವಿಶೇಷ ಸಂದರ್ಭಗಳಲ್ಲಿ ಬಳಸುವ ಭಯೋತ್ಪಾದನ ನಿಗ್ರಹ ದಳವಿದು. ಈ ಪಡೆಗೆ ಅತ್ಯುತ್ತಮ ದೇಹದಾಡ್ಯì ಇರುವವರನ್ನು ಮಾತ್ರ ನಿಯೋಜಿಸಲಾಗುತ್ತದೆ. ದೇಶದಲ್ಲಿ ಉಗ್ರರ ದಾಳಿಯಾದಾಗ, ಆಂತರಿಕ ಭದ್ರತೆಗೆ ಸವಾಲಾಗಿರುವ ಸಂದರ್ಭಗಳಲ್ಲಿ ಇವರ ಪಾತ್ರ ಪ್ರಮುಖವಾಗಿರುತ್ತದೆ. ಪ್ರ: ಸೈನಿಕರಿಗೆ ಆರಂಭದಲ್ಲಿ ತರಬೇತಿ ಹೇಗಿರುತ್ತದೆ?
– ದರ್ಶನ್, (ರತ್ತುಬಾೖ ಜನತಾ ಪ್ರೌಢಶಾಲೆ)
ಉ: ಸೈನ್ಯಕ್ಕೆ ಸೇರಿದ ಅನಂತರ ಮೊದಲಿಗೆ 6 ತಿಂಗಳು ತರಬೇತಿ ನೀಡಲಾಗುತ್ತದೆ. ಅಲ್ಲಿ ಸೇನೆ, ಸೈನಿಕರ ಶಿಸ್ತು ಅಂದರೆ ಏನು ಎನ್ನುವುದು ತಿಳಿಯುತ್ತದೆ. ಆ 6 ತಿಂಗಳ ಕಾಲ ಪ್ರತಿ ದಿನ ಸಶಾಸ್ತ್ರ ಸಹಿತ ವಿವಿಧ ತರಬೇತಿ ನೀಡಲಾಗುತ್ತದೆ. ಪ್ರ: ಸೈನಿಕರನ್ನು ರಾಜಕಾರಣಿಗಳು ದುರ್ಬಳಕೆ ಮಾಡುತ್ತಿರುವುದು ಸರಿಯೇ?
-ಸಫಾಮವಾ, (ರತ್ತುಬಾೖ ಜನತಾ ಪ್ರೌಢಶಾಲೆ)
ಉ: ಕೆಲವು ಸಂದರ್ಭಗಳಲ್ಲಷ್ಟೇ ಇಂತಹ ಪ್ರಕರಣಗಳು ನಡೆಯುತ್ತವೆ. ಆದರೆ ಸೇನೆಗೆ ಅದರದೇ ಆದ ಪರಮಾಧಿಕಾರವಿದೆ. ಆದರೂ ಸೈನಿಕರಿಗೆ ನಿವೃತ್ತಿಯಾದ ಬಳಿಕ ಸಿಗಬೇಕಾದ ನಿವೇಶನ, ಜಾಗ ಸಿಗುವುದಿಲ್ಲ. ಅದನ್ನು ಪಡೆಯಲು ಕಚೇರಿ, ಜನಪ್ರತಿನಿಧಿಗಳ ಬಳಿ ಅಲೆಯಬೇಕಾಗುವುದು ದುರದೃಷ್ಟಕರ. ಪ್ರ: ಸೇನೆಗೆ ಸೇರಲು ನಿಮಗೆ ಯಾರು ಸ್ಫೂರ್ತಿ?
– ರಂಜಿತಾ, (ರತ್ತುಬಾೖ ಜನತಾ ಪ್ರೌಢಶಾಲೆ)
ಉ:ಬ್ರಿಟಿಷ್ ಸೇನೆಯಲ್ಲಿದ್ದ ತಂದೆಯೇ ನನಗೆ ಪ್ರೇರಣೆ. ಆಗ ತಂದೆಗೆ ಕೊಡುತ್ತಿದ್ದ ಗೌರವ, ಊರಲ್ಲಿ ಸಿಗುತ್ತಿದ್ದ ಮನ್ನಣೆ ನನ್ನನ್ನು ಸೇನೆಗೆ ಸೇರುವಂತೆ ಮಾಡಿತು. ಪ್ರ: ವೀರ ಮರಣ ಹೊಂದಿದ ಸೈನಿಕರಿಗೆ ಸರಕಾರ ಏನು ಪರಿಹಾರ ಕೊಡುತ್ತದೆ ?
– ಸುರೇಂದ್ರ (ರತ್ತುಬಾೖ ಜನತಾ ಪ್ರೌಢಶಾಲೆ)
ಉ: ಹಿಂದೆ ಆ ಯೋಧನ ಮನೆಗೆ 10 ಲಕ್ಷ ರೂ. ನೀಡುತ್ತಿದ್ದರು. ಈಗ ಅದನ್ನು 25 ಲಕ್ಷ ರೂ.ಗೆ ಏರಿಸಲಾಗಿದೆ. ಮನೆಯವರಿಗೆ ಯಾರಿಗಾದರೂ ಸರಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ನಿವೇಶನ ಕೊಡುತ್ತಾರೆ. ಪ್ರ: ಸೇನೆಗೆ ಸೇರಬೇಕಾದರೆ ಪ್ರತ್ಯೇಕ ತರಬೇತಿ ಬೇಕೇ?
– ಸೃಜನ್ (ಸರಕಾರಿ ಶಾಲೆ ಬೈಂದೂರು )
ಉ: ಪ್ರತ್ಯೇಕ ತರಬೇತಿಯೇನೂ ಬೇಡ. ಆದರೆ ಶಾಲಾ ದಿನಗಳಲ್ಲಿ ಎನ್‌ಸಿಸಿಯಲ್ಲಿರುವಾಗ ಸಿ- ಪ್ರಮಾಣಪತ್ರ ಪಡೆದಲ್ಲಿ ಸ್ವಲ್ಪ ಮಟ್ಟಿಗೆ ಪ್ರಯೋಜನವಾಗುತ್ತದೆ. ಉಳಿದಂತೆ ಸೇನೆಗೆ ಸೇರಿದ ಅನಂತರ ಮೊದಲ 6 ತಿಂಗಳು ತರಬೇತಿ ನೀಡಲಾಗುತ್ತದೆ.