Advertisement

ವಾಟ್ಸಾಪ್‌ ನಲ್ಲೇ ಪೌರ ಸಮಸ್ಯೆಗಳಿಗೆ ಫ‌ಟಾಫ‌ಟ್‌ ಸ್ಪಂದನೆ

04:40 PM Sep 23, 2021 | Team Udayavani |

ಚಾಮರಾಜನಗರ: ಜನಪ್ರತಿನಿಧಿಗಳಾದವರಲ್ಲಿ ಅನೇಕರು ತಮ್ಮನ್ನು ಆರಿಸಿದ ಮತದಾರರ ಸಮಸ್ಯೆ ಕೇಳುವು ದಿಲ್ಲ. ಮತದಾರರ ಫೋನ್‌ ಕರೆ ಕೂಡ ಸ್ವೀಕರಿಸುವುದಿಲ್ಲ. ಆದರೆ ಇಲ್ಲೊಬ್ಬ ನಗರಸಭಾ ಸದಸ್ಯರು ವಾರ್ಡ್‌ ಮತದಾರರ ವಾಟ್ಸಾಪ್‌ ಗ್ರೂಪ್‌ ರಚಿಸಿಕೊಂಡು ನಿತ್ಯ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸುತ್ತಿದ್ದಾರೆ. ಜನರು ಹಾಕಿದ ದೂರುಗಳನ್ನು ಪರಿಹರಿಸಿ ಅದರ ಫೋಟೋಗಳನ್ನು ಅಲ್ಲೇ ಪೋಸ್ಟ್‌ ಮಾಡುತ್ತಾರೆ.

Advertisement

ನಗರಸಭೆ ಸದಸ್ಯೆ ಕುಮುದಾ ಕೇಶವಮೂರ್ತಿ ಅವರು, 26ನೇ ವಾರ್ಡ್‌ ಸದಸ್ಯೆಯಾಗಿ ಬಿಜೆಪಿ ಯಿಂದ ಆರಿಸಿಬಂದಿದ್ದಾರೆ. ಈ ವ್ಯಾಪ್ತಿಗೆ ವಾರ್ಡ್‌ ವ್ಯಾಪ್ತಿಗೆ ನಗರದ ಹೌಸಿಂಗ್‌ ಬೋರ್ಡ್‌ ಕಾಲೋನಿ, ಪಿಡಬ್ಲೂಡಿ ಕಾಲೋನಿ, ನ್ಯಾಯಾಲಯ ರಸ್ತೆ, ಮಾರುತಿ ಲೇಔಟ್‌, ವಿವೇಕನಗರ, ಅಭಿ ಲೇಔಟ್‌, ಸಿದ್ಧಾರ್ಥ ನಗರ ಇತ್ಯಾದಿ ಪ್ರದೇಶಗಳು ಒಳಪಡುತ್ತವೆ. ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾಡಳಿತದ ಅಧಿಕಾರಿಗಳ ವಸತಿಗೃಹಗಳು ಈ ವಾರ್ಡ್‌ ವ್ಯಾಪ್ತಿಗೊಳಪಡುತ್ತವೆ.

ತಾವು ಸದಸ್ಯರಾಗಿ ಮೊದಲ ರಿಸಿ ಬಂದ ಬಳಿಕ, ವಾಟ್ಸಾಪ್‌ನಲ್ಲಿ ವಾರ್ಡ್‌ ನಂ. 26 ಕೌನ್ಸಿಲರ್‌ ಕುಮುದಾ ಎಂಬ ಗ್ರೂಪ್‌ ರಚಿಸಿದ್ದಾರೆ. ಈ ವಾಟ್ಸಾಪ್‌ ಗುಂಪಿನಲ್ಲಿ ವಾರ್ಡ್‌ನ ಮತದಾರರನ್ನು ಸೇರಿಸಲಾಗಿದೆ. ಅಲ್ಲದೇ ನಗರಸಭೆ ಅಧ್ಯಕ್ಷರು, ಆಯುಕ್ತರು, ಅಧಿಕಾರಿಗಳು, ಸಂಬಂಧಿಸಿದ ವಾರ್ಡಿನ ದಫೇದಾರ್‌, ಪೌರಕಾರ್ಮಿಕರು ಸಹ ಗ್ರೂಪಿನಲ್ಲಿದ್ದಾರೆ. ನಿವಾಸಿಗಳು ತಮ್ಮ ಬೀದಿಯಲ್ಲಿ, ಮನೆಯ ಬಳಿ ಯಾವುದಾದರೂ ನಾಗರಿಕ ಸಮಸ್ಯೆ ಇದ್ದರೆ, ಅದನ್ನು ಫೋಟೋ ಸಮೇತ ಗ್ರೂಪಿನಲ್ಲಿ ಹಂಚಿಕೊಳ್ಳುತ್ತಾರೆ. ಉದಾಹರಣೆಗೆ, ಆ ಬೀದಿಯಲ್ಲಿ ಕಸದ ರಾಶಿ ಬಿದ್ದಿದ್ದರೆ, ಅದರ ಫೋಟೋ ತೆಗೆದು, ಇಂತಹ ಜಾಗ ಇಲ್ಲಿ ಕಳೆದ ಎರಡು ದಿನಗಳಿಂದ ಕಸ ಎತ್ತಿಲ್ಲ ಎಂದು ನಿವಾಸಿಯೊಬ್ಬರು ಗ್ರೂಪಿನಲ್ಲಿ ಪೋಸ್ಟ್‌ ಮಾಡುತ್ತಾರೆ. ಅದನ್ನು ಕೆಲವೇ ನಿಮಿಷಗಳೊಳಗೆ ನೋಡಿದ ಸದಸ್ಯೆ ಕುಮುದಾ, ಅದೇ ಗ್ರೂಪಿನಲ್ಲಿ ನಗರಸಭೆ ಆರೋಗ್ಯಾಧಿಕಾರಿ, ದಫೇದಾರ್‌, ಪೌರಕಾರ್ಮಿ ಕರಿಗೆ ಈ ಸಮಸ್ಯೆ ಪರಿಹರಿಸಲು ಸೂಚಿಸುತ್ತಾರೆ.

ಇದನ್ನೂ ಓದಿ:ನ್ಯೂ ತರಗುಪೇಟೆ ಸ್ಫೋಟ ದುರಂತ: ಮೂವರ ಸಾವು, ಛಿದ್ರ ಛಿದ್ರವಾಗಿ ಬಿದ್ದ ದೇಹಗಳು!

ಸರಾಸರಿ ಒಂದು ಗಂಟೆಯೊಳಗೆ ಅಲ್ಲಿ ಕಸ ಸ್ವಚ್ಛ ಮಾಡಿ ಫೋಟೋ ಹಾಕಲಾಗುತ್ತದೆ! ಬಳಿಕ ಆ ಕೆಲಸ ನಿರ್ವ ಹಿಸಿದ ಅಧಿಕಾರಿ ಸಿಬ್ಬಂದಿ, ಪೌರಕಾರ್ಮಿಕರಿಗೂ ಸದಸ್ಯೆ ಕುಮುದಾ ವಾಯ್ಸ ಮೆಸೇಜ್‌ ಮೂಲಕ ಕೃತಜ್ಞತೆ ಸಲ್ಲಿಸುತ್ತಾರೆ. ಈ ಪ್ರಕ್ರಿಯೆ ಪ್ರತಿದಿನ ನಡೆಯುತ್ತದೆ! ರಸ್ತೆಯೇ ಇಲ್ಲ, ಚರಂಡಿ ನಿರ್ಮಿಸಿಲ್ಲ ಇಂಥ ಸಮಸ್ಯೆಗಳನ್ನು ಹಾಕಿದಾಗ, ಅವು ದೀರ್ಘ‌ ಕಾಲೀನ ಸಮಯ ಬೇಡುವುದರಿಂದ ಅವನ್ನು ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗುತ್ತದೆ. ಇಂಥ ಕೆಲಸಗಳನ್ನು ಹೊರತುಪಡಿಸಿದರೆ, ಕಸ ವಿಲೇವಾರಿ, ನಲ್ಲಿಯಲ್ಲಿ ನೀರು ಬಾರದಿರುವುದು, ಚರಂಡಿ ಕ್ಲೀನ್‌ ಮಾಡಿಸದೇ ಇರುವುದು, ಬೀದಿ ದೀಪ ಕೆಟ್ಟಿರುವುದು, ಕಳೆಗಿಡ ಬೆಳೆದಿರುವುದು ಇತ್ಯಾದಿ ಸಮಸ್ಯೆಗಳನ್ನು ಗ್ರೂಪಿನಲ್ಲಿ ಹಾಕಿದರೆ ಅದಕ್ಕೆ ಕೆಲವೇ ಗಂಟೆಗಳಲ್ಲಿ ಪರಿಹಾರ ದೊರಕುತ್ತಿದೆ.

Advertisement

ಕುಮುದಾ ಮತ್ತು ಅವರ ಪತಿ ಕೇಶವಮೂರ್ತಿ ಅವರು ವಾರ್ಡ್‌ನ ಸಮಸ್ಯೆಗಳನ್ನು ಪರಿಹರಿಸಲು ಸ್ಥಳಕ್ಕೆ ತೆರಳಿ, ಕೆಲಸ ಮಾಡಿಸುತ್ತಿರುವುದನ್ನು ನಿವಾಸಿಗಳು ಪ್ರಶಂಸಿಸುತ್ತಾರೆ. ಗಿಡಗಂಟಿಗಳು ಬೆಳೆದು ನಿಂತ ಕಡೆ ಜೆಸಿಬಿ ಕರೆಸಿ, ಅಲ್ಲಿ ನಿಂತು ಅವನ್ನು ತೆರವುಗೊಳಿಸುವುದು, ಪೌರಕಾರ್ಮಿಕರ ಜೊತೆ ನಿಂತು ಕೆಲಸ ಮಾಡಿಸುವುದು, ನಲ್ಲಿ ನೀರಿನ ಸರಬರಾಜು ಪೈಪು ರಿಪೇರಿ ಮಾಡಿಸುವುದರಲ್ಲಿ ತೊಡಗಿರುತ್ತಾರೆ.

ಶ್ಲಾಘನೆ: ಕುಮುದಾ ಕಾರ್ಯವೈಖರಿ ಕುರಿತು ವಿವೇಕ ನಗರ ನಿವಾಸಿಯಾದ ಸೋಮು ಪ್ರತಿಕ್ರಿಯಿಸಿದ್ದು, “ನಾವಿರುವ ವಿವೇಕನಗರ ರಾಮಸ್ವಾಮಿ ಲೇಔಟ್‌ನಲ್ಲಿ ನಮ್ಮ ಮನೆ ಆಸುಪಾಸು ಮುಳ್ಳಿನ ಗಿಡಗಳು ಬೆಳೆದು ಓಡಾಡಲು ತೊಂದರೆಯಾಗಿತ್ತು. 26ನೇ ವಾರ್ಡ್‌ ಗ್ರೂಪಿನಲ್ಲಿ ಈ ಸಮಸ್ಯೆ ಹಾಕಿದ ಒಂದೇ ಗಂಟೆಯೊಳಗೆ ಜೆಸಿಬಿ ಕರೆಸಿ, ಅಲ್ಲಿ ಮುಳ್ಳಿನ ಗಿಡಗಳನ್ನು ತೆರವು ಮಾಡಿ, ಸ್ವತ್ಛಗೊಳಿಸಿದರು. ನನಗೇ ಇದು ಆಶ್ಚರ್ಯ ತರಿಸಿತು’ ಎಂದು ಶ್ಲಾಘಿಸಿದ್ದಾರೆ. ಸದಸ್ಯರ ಈ ಕಾಳಜಿಗೆ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಆಯುಕ್ತರು, ಅಧಿಕಾರಿಗಳು ಬೆಂಬಲ ನೀಡುತ್ತಿದ್ದಾರೆ. ತಮ್ಮ ವಾರ್ಡ್‌ ಸದಸ್ಯರ ಈ ಸ್ಪಂದನೆಗೆ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಪ್ರತಿದಿನ ಅಹವಾಲುಗಳ ಸ್ವೀಕಾರ
ನಗರಸಭಾ ಸದಸ್ಯರಾದವರಿಗೆ ಜನರ ದೂರುಗಳು ಬೆಟ್ಟದಷ್ಟಿರುತ್ತವೆ. ಪ್ರತಿ ನಿತ್ಯ ನೀರು ಬಂದಿಲ್ಲ, ಕಸ ಎತ್ತಿಲ್ಲ, ದೀಪ ಉರಿಯುತ್ತಿಲ್ಲ, ಚರಂಡಿ ನೀರು ನಿಂತಿದೆ. ಇಂಥವೇ ದೂರುಗಳನ್ನು ನಿವಾಸಿಗಳು ಹೇಳುತ್ತಿರುತ್ತಾರೆ. ಈ ದೂರುಗಳ ಸರಮಾಲೆ ತಪ್ಪಿಸಿಕೊಳ್ಳಲು, ಎಷ್ಟೋ ನಗರಸಭೆ, ಪುರಸಭೆ ಸದಸ್ಯರು ಜನರ ಫೋನನ್ನೇ ತೆಗೆಯುವುದಿಲ್ಲ. ಹೀಗಿರುವಾಗ ಸಮಸ್ಯೆ ಹೇಳಿಕೊಳ್ಳುವ ಜನರಿಗಾಗಿ ವಾಟ್ಸಾಪ್‌ ಗ್ರೂಪ್‌ ರಚಿಸಿ, ಪ್ರತಿನಿತ್ಯ ದೂರುಗಳನ್ನು ಆಹ್ವಾನಿಸಿ, ಅದನ್ನು ಪರಿಹರಿಸುವುದು ಸುಲಭದ ಮಾತಲ್ಲ.

ನಾವು ರಚಿಸಿದ ವಾಟ್ಸಾಪ್‌ ಗ್ರೂಪ್‌ಗೆ ವ್ಯಾಪಕ ಮೆಚ್ಚುಗೆ ದೊರೆತಿದೆ. ನಮ್ಮನ್ನು ಗೆಲ್ಲಿಸಿದ ಮತದಾರರ ಸಮಸ್ಯೆಗಳಿಗೆ ಸ್ಪಂದಿಸುವುದು ನಾವು ಮಾಡಬೇಕಾದ ಕನಿಷ್ಠ ಕರ್ತವ್ಯ. ನಮಗಿರುವ ಸೀಮಿತ ಅಧಿಕಾರದಲ್ಲಿ ಪೌರ ಸಮಸ್ಯೆಗಳಿಗೆ ಸ್ಪಂದಿಸಿ ಅದನ್ನು ಪರಿಹರಿಸಲು ಯತ್ನಿಸುತ್ತಿದ್ದೇನೆ. ನನ್ನ ಪತಿ ಕೇಶವಮೂರ್ತಿ ನನ್ನ ಕೆಲಸಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ನಗರಸಭೆ ಆಡಳಿತಕ್ಕೆ ಅಧಿಕಾರಿಗಳಿಗೆ, ಪೌರಕಾರ್ಮಿಕರಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ.
-ಕುಮುದಾ ಕೇಶವಮೂರ್ತಿ, 26ನೇ ವಾರ್ಡ್‌ ಸದಸ್ಯ

– ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next