ಧಾರವಾಡ: ಅಭಿಷೇಕ್ ಸಾವಿಗೆ ನ್ಯಾಯ ದೊರಕಿಸಿಕೊಡಲು ಆಗ್ರಹಿಸಿ ಪ್ರತಿಭಟನೆ ಕೈಗೊಂಡ ಚಿಕ್ಕಮಗಳೂರು ಹಾಗೂ ಶೃಂಗೇರಿಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪೊಲೀಸ್ ಅಧಿಕಾರಿ ಅಣ್ಣಾಮಲೈ ದೌರ್ಜನ್ಯ ನಡೆಸಿದ ಕ್ರಮ ಖಂಡಿಸಿ ನಗರದಲ್ಲಿ ಅಭಾವಿಪ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಜ್ಯುಬ್ಲಿ ವೃತ್ತದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ರಸ್ತೆಯ ಸಂಚಾರ ಸ್ಥಗಿತಗೊಳಿಸಿ ಕೆಲ ಕಾಲ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ, ಗೃಹಮಂತ್ರಿ ಪರಮೇಶ್ವರ ಹಾಗೂ ದೌರ್ಜನ್ಯ ನಡೆಸಿದ ಪೊಲೀಸ್ ಅಧಿಕಾರಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಎಬಿವಿಪಿ ರಾಜ್ಯ ವಿಶ್ವವಿದ್ಯಾಲಯಗಳ ಸಂಚಾಲಕ ಜಗದೀಶ ಮಾನೆ ಮಾತನಾಡಿ, ಪೊಲೀಸ್ ಅಧಿಕಾರಿ ಅಣ್ಣಾಮಲೈ ದೌರ್ಜನ್ಯ ನಡೆಸಿದ್ದು ಖಂಡನೀಯ. ಪೊಲೀಸರ ಈ ರೀತಿಯ ವರ್ತನೆ ಗೂಂಡಾ ಪ್ರವೃತ್ತಿ ಎತ್ತಿ ತೋರಿಸುತ್ತದೆ ಎಂದರು. 20ಕ್ಕೂ ಅಧಿಕ ವಿದ್ಯಾರ್ಥಿಗಳ ಮೇಲೆ ದೈಹಿಕ ಹಲ್ಲೆ ಮಾಡಿದ್ದಲ್ಲದೇ ಬಂಧಿಸಲಾಗಿದೆ.
ತಕ್ಷಣ ಅವರನ್ನು ಬಂಧನದಿಂದ ಮುಕ್ತಗೊಳಿಸಬೇಕು. ಅವರ ಮೇಲೆ ಹಾಕಲಾದ ಪ್ರಕರಣ ಹಿಂಪಡೆಯಬೇಕು. ಇಲ್ಲವಾದಲ್ಲಿ ಎಬಿವಿಪಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಎಬಿವಿಪಿ ರಾಜ್ಯ ಸದಸ್ಯ ಪವನ ಕರಿಕಟ್ಟಿ, ನಗರ ಸಹ ಕಾರ್ಯದರ್ಶಿ ಸೂರಜ ಕಟಗಿ, ಅಭಿಷೇಕ, ವಿದ್ಯಾರ್ಥಿ ಮುಖಂಡ ಶಿವಾಣಿ ಮಳಿಮಠ, ಅಮರನಾಥ ಸೇರಿದಂತೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಇದ್ದರು.