Advertisement

ಉಪವಾಸ ಆರೋಗ್ಯ ರಕ್ಷಣೆಗೊಂದು ದಾರಿ

08:04 AM Jan 22, 2019 | |

ಉಷ್ಣವಲಯ ದಲ್ಲಿರುವವರು ಸಂಪೂರ್ಣ ಉಪವಾಸ ಮಾಡುವುದು ಒಳ್ಳೆಯದಲ್ಲ. ಶೀತವಲಯದಲ್ಲಿರುವವರು ಯಾವುದೇ ಶಾರೀರಿಕ ಸಮಸ್ಯೆಗಳು ಇಲ್ಲದಿದ್ದರೆ ಸಂಪೂರ್ಣ ಉಪವಾಸ ಮಾಡ ಬಹುದು.

Advertisement

ಸಮಸ್ಯೆ ಬಂದ ಬಳಿಕ ತಲೆಕೆಡಿಸಿಕೊಳ್ಳುವ ಬದಲು ಸಮಸ್ಯೆ ಬಾರದಂತೆ ತಡೆಯುವುದು ಮುಖ್ಯ ಎಂಬ ಮಾತಿದೆ. ಅಂತೆಯೇ ಆರೋಗ್ಯ ಸಮಸ್ಯೆಗಳು ಬರುವ ಮುನ್ನವೇ ಬಾರದಂತೆ ಮುಂಜಾಗೃತೆ ವಹಿಸುವುದು ಅಗತ್ಯ. ಸಮಯಕ್ಕೆ ಸರಿಯಾಗಿ ಮಿತವಾದ ಆಹಾರ, ವ್ಯಾಯಮ ಮೊದಲಾದವುಗಳಿಂದ ಆರೋಗ್ಯವನ್ನು ಸುಸ್ಥಿರವಾಗಿಡಲು ಪ್ರಯತ್ನಿಸಬೇಕಾಗಿದೆ.

ನಮ್ಮ ಜೀವನಶೈಲಿಯಿಂದ ದಿನದಿಂದ ದಿನಕ್ಕೆ ಕೈ ತಪ್ಪುತ್ತಿರುವ ದೇಹದ ಆರೋಗ್ಯವನ್ನು ಸುಧಾರಿಸಲು ಉಪವಾಸ ಮಾಡುವುದು ಅತ್ಯಗತ್ಯ. ಉಪವಾಸವು ಪರಮ ಔಷಧ ಎಂದು ಆಯುರ್ವೇದದಲ್ಲಿ ಹೇಳುತ್ತಾರೆ. ಹಾಳಾದ ಜೀರ್ಣಕ್ರಿಯೆಯಿಂದಲೇ ಎಲ್ಲ ಕಾಯಿಲೆಗಳು ಶುರುವಾಗುತ್ತವೆ ಎನ್ನುವುದನ್ನು ಆಯುರ್ವೇದ ಬಲವಾಗಿ ನಂಬುತ್ತದೆ. ಈ ಹಾಳಾದ ಜೀರ್ಣಕ್ರಿಯೆಯನ್ನು ಸರಿಪಡಿಸುವ ಸುಲಭ ಉಪಾಯವೇ ಉಪವಾಸ. ಹಾಗಾಗಿ ಉಪವಾಸಕ್ಕೆ ಎಲ್ಲ ಕಾಯಿಲೆಗಳನ್ನು ಪರಿಹರಿಸುವ ಸಾಮರ್ಥ್ಯ ಇದೆ.

ಉಪವಾಸ ಹೇಗಿರಬೇಕು?

ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಉಪವಾಸ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಉಪವಾಸ ಮಾಡುವುದರಿಂದ ಅಡ್ಡ ಪರಿಣಾಮಗಳು ಆಗಬಹುದೆ ಎನ್ನುವುದರ ಬಗ್ಗೆ ತಿಳುವಳಿಕೆ ಇರಬೇಕು. ಉಪವಾಸ ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣಕ್ಕಾಗಿ ಯಾರ ಸಲಹೆಯೂ ಪಡೆಯದೆ ಉಪವಾಸ ಮಾಡಿದರೆ ಆರೋಗ್ಯ ಸಮಸ್ಯೆ ಉಲ್ಬಣಿಸುವುದರಲ್ಲಿ ಸಂಶಯವಿಲ್ಲ.

Advertisement

ಉಪವಾಸವನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ದೇಹವನ್ನು ಕಾಪಾಡುತ್ತದೆ. ಆದರೆ ಇದೇ ಉಪವಾಸವನ್ನು ಸರಿಯಾಗಿ ಪಾಲಿಸದಿದ್ದರೆ ಅನಾರೋಗ್ಯ ನಮ್ಮನ್ನು ಕಾಡುವುದು ಖಂಡಿತ. ನಮ್ಮ ಚಟುವಟಿಕೆ ಮತ್ತು ದೇಹದಲ್ಲಿನ ಆರೋಗ್ಯದ ಪರಿಸ್ಥಿತಿಯನ್ನು ಪರಿಗಣಿಸಿ ಉಪವಾಸವನ್ನು ಆಚರಿಸಬೇಕಾಗುತ್ತದೆ. ಕೆಲವರು ಇವು ಯಾವುದನ್ನೂ ಲೆಕ್ಕಿಸದೆ ಉಪವಾಸವನ್ನು ಆಚರಿಸುತ್ತಾರೆ. ಇದರಿಂದ ದೇಹ ಕ್ಷೀಣಿಸುವುದರ ಜತೆಗೆ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಅನೇಕ ವಿಧ

ಉಪವಾಸದಲ್ಲಿ ಅನೇಕ ವಿಧಗಳಿವೆ. ಫಲಾಹಾರ, ದ್ರವಾಹಾರ, ಒಪ್ಪೊತ್ತು ಅಥವಾ ಸಂಪೂರ್ಣ ಉಪವಾಸ. ನಮ್ಮ ಆರೋಗ್ಯ ಮತ್ತು ಋತುಮಾನಕ್ಕೆ ಅನುಸಾರವಾಗಿ ಇದರಲ್ಲಿ ಯಾವುದಾದರೂ ಒಂದು ರೀತಿಯ ಉಪವಾಸವನ್ನು ಕೈಗೊಳ್ಳಬಹುದು. ಉಷ್ಣವಲಯದಲ್ಲಿರುವವರು ಸಂಪೂರ್ಣ ಉಪವಾಸ ಮಾಡುವುದು ಒಳ್ಳೆಯದಲ್ಲ. ಈ ವಲಯದವರಿಗೆ ದ್ರವಾಹಾರ ಉಪವಾಸ ತುಂಬಾ ಒಳ್ಳೆಯದ್ದು. ಇನ್ನು ಶೀತವಲಯದಲ್ಲಿರುವವರು ಯಾವುದೇ ಶಾರೀರಿಕ ಸಮಸ್ಯೆಗಳು ಇಲ್ಲದಿದ್ದರೆ ಸಂಪೂರ್ಣ ಉಪವಾಸ ಮಾಡಬಹುದು. ಉಪವಾಸವನ್ನು ಆಚರಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ಉಪವಾಸದಿಂದ ಹೊರಗೆ ಬರುವ ಕ್ರಮ. ದಿನವಿಡೀ ಉಪವಾಸವಿದ್ದು ರಾತ್ರಿಯ ವೇಳೆ ಕೆಲವರು ಹೊಟ್ಟೆ ತುಂಬಾ ಊಟ ಮಾಡಿ ಮಲಗುತ್ತಾರೆ. ಇದು ಆರೋಗ್ಯಕ್ಕೆ ಹಾನಿಕಾರಕ. ಉಪವಾಸದ ಅಂತ್ಯ ಸರಿಯಾದಲ್ಲಿ ದೇಹವು ಇನ್ನಷ್ಟು ಬಲಶಾಲಿಯಾಗುತ್ತದೆ. ಉಪವಾಸ ಮಾಡುವಾಗ ನಮ್ಮ ಜೀರ್ಣಶಕ್ತಿ ಮತ್ತು ನಮ್ಮ ಜೀರ್ಣಾಳ ತುಂಬಾ ದುರ್ಬಲವಾಗಿರುತ್ತದೆ. ಈ ರೀತಿ ದುರ್ಬಲವಾದ ಜೀರ್ಣಕ್ರಿಯೆ ಇದ್ದಾಗ ಹೊಟ್ಟೆ ತುಂಬಾ ತಿನ್ನುವುದರಿಂದ ಜೀರ್ಣಾಕ್ರಿಯೆ ನಾಶವಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಉಪವಾಸ ಮುರಿಯುವಾಗ ಅಲ್ಪ ಪ್ರಮಾಣದ, ಜೀರ್ಣಕ್ರಿಯೆಯನ್ನು ವೃದ್ಧಿಸುವ ಆಹಾರವನ್ನು ಸೇವಿಸಿ ಮಲಗಬೇಕು. ಉಪವಾಸ ಮುಗಿದ ಮರುದಿನದ ಆಹಾರವೂ ಕೂಡ ಜೀರ್ಣಕ್ರಿಯೆಯನ್ನು ವೃದ್ಧಿಸುವಂತಹದ್ದಿರಬೇಕು. ಬೇಯಿಸಿದ ತರಕಾರಿ, ಹಸಿ ತರಕಾರಿಯನ್ನು ಅಧಿಕ ಪ್ರಮಾಣದಲ್ಲಿ ತಿನ್ನಬೇಕು. ಜಿಡ್ಡಿರುವ ಆಹಾರ, ಸಂಸ್ಕರಿಸಿದ ಆಹಾರಗಳನ್ನು ಒಂದು ವಾರದವರೆಗೆ ವರ್ಜಿಸಬೇಕು. ಉಪವಾಸದ ಮರುದಿನ ಸರಿಯಾಗಿ ಮಲಶೋಧನೆಯಾಗುವುದು ಅತ್ಯಗತ್ಯ. ಫಲಾಹಾರದಿಂದ ಉಪವಾಸ ಮಾಡುವವರು ಆಯಾ ಋತುಮಾನಕ್ಕೆ ಮತ್ತು ಆಯಾ ಪ್ರದೇಶದಲ್ಲಿ ಬೆಳೆಯುವ ಹಣ್ಣುಗಳನ್ನೇ ತಿನ್ನಬೇಕು.

ಏನು ಪ್ರಯೋಜನ?

ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜೀವನಶೈಲಿಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಉಪವಾಸವೇ ಸೂಕ್ತ ಮಾರ್ಗ. ಮುಖ್ಯವಾಗಿ

• ಉಪವಾಸದಿಂದ ದೇಹಕ್ಕೆ ಹೊಸ ಚೈತನ್ಯ ಬರುತ್ತದೆ. ಅಲ್ಲದೆ ಅನೇಕ ಕಾಯಿಲೆಗಳು ಬರದಂತೆ ತಡೆಯುತ್ತದೆ.

•ಉಪವಾಸ ಮಾಡುವುದರಿಂದ ದುಶ್ಚಟ ಗಳಿಂದ ದೂರ ಇರಲು ಸಾಧ್ಯವಾಗುತ್ತದೆ.

• ಜೀರ್ಣಕ್ರಿಯೆಯ ಸಮಸ್ಯೆ, ಮಲಬದ್ಧತೆ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

•ಮಾನಸಿಕ ಆರೋಗ್ಯ ಎಲ್ಲಕ್ಕಿಂತ ಮಿಗಿಲಾದುದು. ಹಾಗಾಗಿ ಉಪವಾಸ ಮಾಡಿದರೆ ಮಾನಸಿಕ ಆರೋಗ್ಯವು ಸುಸ್ಥಿತಿಯಲ್ಲಿರುತ್ತದೆ.

•ತ್ವಚೆ ಸಮಸ್ಯೆ ಹೋಗಲಾಡಿಸುವಲ್ಲಿ ಉಪವಾಸ ತುಂಬಾ ಪರಿಣಾಮಕಾರಿಯಾಗಿದೆ.

•ಉಪವಾಸದಿಂದ ದೇಹದ ತೂಕವನ್ನು ಸಮಪ್ರಮಾಣದಲ್ಲಿ ಇಡಲು ಸಹಕಾರಿಯಾಗಿದೆ.

ಉಪವಾಸದಿಂದ ಆರೋಗ್ಯ ಸ್ಥಿರ

‘ಲಂಘನಂ ಪರಮೌಷಧಂ’ ಅಂದರೆ ಉಪವಾಸವು ಪರಮ ಔಷಧ ಎಂದು ಆಯುರ್ವೇದದಲ್ಲಿ ಹೇಳುತ್ತಾರೆ. ಸಮಯಕ್ಕೆ ಸರಿಯಾಗಿ ಸೂಕ್ತ ಮಾಹಿತಿಯೊಂದಿಗೆ ಉಪವಾಸವನ್ನು ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ದೂರಮಾಡಬಹುದು.
– ಡಾ| ಸುಬೋಧ್‌ ಭಂಡಾರಿ, ವೈದ್ಯರು

,,ಪ್ರಜ್ಞಾಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next