ಫರೂಕಾಬಾದ್/ಲಕ್ನೋ: ಉತ್ತರ ಪ್ರದೇಶದ ಫರೂಕಾಬಾದ್‌ನಲ್ಲಿ ಗೋರಖ್‌ಪುರ ಮಾದರಿ ದುರಂತ ಸಂಭವಿಸಿದೆ. ಅಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಜು.20 ರಿಂದ ಆ.21ರ ವರೆಗೆ 49 ಮಕ್ಕಳು ಆಮ್ಲಜನಕ ಕೊರತೆಯಿಂದ ಅಸುನೀಗಿವೆ. ಕೂಡಲೇ ಮಧ್ಯಪ್ರವೇಶ ಮಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ, ಮುಖ್ಯ ಮೆಡಿಕಲ್ ಸೂಪರಿಂಟೆಂಡೆಂಟ್ ಮತ್ತು ಮತ್ತೂಬ್ಬ ಹಿರಿಯ ವೈದ್ಯರನ್ನು ವಜಾ ಮಾಡಿದ್ದಾರೆ.
ಗಮನಾರ್ಹ ಅಂಶವೆಂದರೆ ಜಿಲ್ಲಾಧಿಕಾರಿ ರವೀಂದ್ರ ಕುಮಾರ್‌ರನ್ನೂ ವರ್ಗಾಯಿಸಲಾಗಿದೆ. ಘಟನೆ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ಭಾನುವಾರ ವರದಿಗಳು ಪ್ರಕಟವಾಗಿದ್ದವು. ಅದನ್ನು ಆಧರಿಸಿ ಸಿಎಂ ಆದಿತ್ಯನಾಥ್‌ರ ಕಚೇರಿ ಸ್ವಯಂಪ್ರೇರಿತ ಕ್ರಮ ಕೈಗೊಂಡಿದೆ. ಮುಖ್ಯ ವೈದ್ಯಾಧಿಕಾರಿ ಮತ್ತು ಮುಖ್ಯ ಮೆಡಿಕಲ್ ಸೂಪರಿಂಟೆಂ ಡೆಂಟ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಫರೂಕಾಬಾದ್‌ನ ರಾಮ್ ಮನೋಹರ್ ಲೋಹಿಯಾ ಜಿಲ್ಲಾಸ್ಪತ್ರೆಯ ನವಜಾತ ಶಿಶುಗಳ ತುರ್ತು ಚಿಕಿತ್ಸಾ ವಿಭಾಗದಲ್ಲಿ 30 ಮತ್ತು 19 ಮಂದಿ ಮಕ್ಕಳು ಅಸುನೀಗಿವೆ. ಘಟನೆ ಬಗ್ಗೆ ಉನ್ನತ ಮಟ್ಟದ ತನಿಖಾ ತಂಡವನ್ನು ಲಕ್ನೋದಿಂದ ಕಳುಹಿಸಲಾಗಿದೆ.
468 ಹೆರಿಗೆಗಳು: ಜಿಲ್ಲಾಸ್ಪತ್ರೆಯಲ್ಲಿ ಜು.20ರಿಂದ ಆ.21ರ ವರೆಗೆ 468 ಹೆರಿಗೆಗಳು ನಡೆದಿವೆ. ಈ ಪೈಕಿ 19 ಪ್ರಕರಣಗಳಲ್ಲಿ ಗರ್ಭದಲ್ಲಿಯೇ ಮಗು ಸಾವಿಗೀಡಾದ ವಿಚಾರ ಬೆಳಕಿಗೆ ಬಂದಿದೆ. ಫರೂಕಾಬಾದ್ ಉಪ ವಿಭಾಗಾಧಿಕಾರಿ ಅಜಿತ್ ಕುಮಾರ್ ಸಿಂಗ್ ಮತ್ತು ನಗರ ಮ್ಯಾಜಿಸ್ಟ್ರೇಟ್ ಜಯೇಂದ್ರ ಕುಮಾರ್ ಜೈನ್ ಆರಂಭಿಕ ತನಿಖೆ ನಡೆಸಿದ್ದು, ಅದರ ಪ್ರಕಾರ ಹೆಚ್ಚಿನ ಸಾವು ಉಸಿರು ಕಟ್ಟಿಯೇ ಸಂಭವಿಸಿದೆ ಎಂದು ಕಂಡುಕೊಂಡಿದ್ದಾರೆ. ಪೋಷಕರೂ ಕೂಡ ಆಮ್ಲಜನಕ ಪೂರೈಕೆ ಯಲ್ಲಿ ವಿಳಂಬ ಉಂಟಾಗಿರುವ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದ್ದರು. ಮುಖ್ಯ ವೈದ್ಯಾಧಿಕಾರಿ, ಮುಖ್ಯ ಮೆಡಿಕಲ್ ಸೂಪರಿಟೆಂಡೆಂಟ್ ತನಿಖೆಗೆ ಸಹಕರಿಸ ಲಿಲ್ಲ ಎಂದೂ ಪ್ರತಿಪಾದಿಸಿದ್ದಾರೆ. ಆದರೆ ಗರ್ಭದಲ್ಲಿಯೇ 19 ಮಕ್ಕಳು ಸಾವಿ ಗೀಡದ ಬಗ್ಗೆ ಅವರಿಬ್ಬರು ಯಾವುದೇ ಕಾರಣಗಳನ್ನು ಉಲ್ಲೇಖೀಸಿಲ್ಲ.
ಸಂಬಂಧವೇ ಇಲ್ಲ: ಘಟನೆ ಬಗ್ಗೆ ತರಾತುರಿಯಲ್ಲಿ ಸುದ್ದಿಗೋಷ್ಠಿ ಕರೆದಿರುವ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ತಿವಾರಿ, ಆಮ್ಲಜನಕ ಕೊರತೆಗೂ ಸಾವಿಗೂ ಸಂಬಂಧವಿಲ್ಲ. ಮಕ್ಕಳ ಸಾವಿಗೆ ಬೇರೆ ಕಾರಣವಿದೆ ಎಂದು ಸಮರ್ಥನೆ ನೀಡಿದ್ದಾರೆ.
ಕಳೆದ ವರ್ಷ ಗೋರಖ್‌ಪುರ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಪರಿಸ್ಥಿತಿ ಬಗ್ಗೆ ಎಚ್ಚರಿಕೆ ನೀಡಿದ್ದೆ. ಅಲ್ಲಿಗೆ ಹಣಕಾಸಿನ ನೆರವು ಬೇಕೆಂ ದೂ ಹೇಳಿದ್ದೆ. ಏಕೆಂದರೆ ಬಿಗ್ ಬಾಸ್ (ಪ್ರಧಾನಿ ಮೋದಿ) ಇಲ್ಲಿಯೇ ಇರುತ್ತಾರಲ್ಲ? ಆದರೆ ಏನೂ ಆಗಲಿಲ್ಲ.
– ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ