Advertisement

ಬೆಳೆ ಕಟಾವು ಪ್ರಯೋಗ ನಿಖರವಾಗಿ ದಾಖಲಿಸಿ

05:55 PM Jul 05, 2022 | Team Udayavani |

ಹಾವೇರಿ: ಪ್ರಸಕ್ತ ಮುಂಗಾರು ಹಂಗಾಮಿನ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಕೈಗೊಳ್ಳುವ ಬೆಳೆ ಕಟಾವು ಪ್ರಯೋಗಗಳನ್ನು ಅತ್ಯಂತ ನಿಖರವಾಗಿ ಯಾವುದೇ ಗೊಂದಲಗಳಿಲ್ಲದಂತೆ ದಾಖಲಿಸುವಂತೆ ನಿಯೋಜಿತ ಸಮೀಕ್ಷಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ 2022-23ನೇ ಸಾಲಿನ ಮುಂಗಾರು ಋತುವಿನ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳೆವಿಮೆ ನೋಂದಣಿ ಹಾಗೂ ಬೆಳೆಹಾನಿ ಸಮೀಕ್ಷೆ ಗಂಭೀರವಾಗಿ ಪರಿಗಣಿಸಬೇಕು. ನಿಖರವಾಗಿ ಸಮೀಕ್ಷೆ ಕೈಗೊಳ್ಳಬೇಕು. ಕಾಲಮಿತಿಯೊಳಗೆ ಆ್ಯಪ್‌ ಗಳಲ್ಲಿ ಫೋಟೋ ಸಹಿತ ದಾಖಲಿಸುವಂತೆ ಸೂಚನೆ ನೀಡಿದರು.

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ 3,468 ಬೆಳೆ ಕಟಾವು ಪ್ರಯೋಗಗಳು ನಿಯೋಜಿತವಾಗಿವೆ. ಮೊಬೈಲ್‌ ಆ್ಯಪ್‌ ಬಳಿಸಿ ನಿಯಮನುಸಾರ ಕಾರ್ಯ ನಿರ್ವಹಿಸಿ. ಯಾವುದೇ ಬೆಳೆ ಪ್ರಯೋಗ ನಷ್ಟವಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ ಅವರು, ಬೆಳೆ ಸಮೀಕ್ಷೆ ಆಧರಿಸಿ ಬೆಳೆ ಕ್ಷೇತ್ರ ಮರು ಹೊಂದಾಣಿಕೆ ವರದಿ ಮಾರ್ಗಸೂಚಿ ಪ್ರಕಾರ ತಯಾರಿಸಿ ಋತುವಾರು ನಿಗದಿತ ಅವಧಿಯಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ನೀರಾವರಿ ಇಲಾಖೆ ಅಕಾರಿಗಳು ಜಂಟಿಯಾಗಿ ತಾಲೂಕು ಮಟ್ಟದ ವರದಿ ಕಾಲಮಿತಿಯೊಳಗೆ ಸಲ್ಲಿಸಲು ಸೂಚಿಸಿದರು.

ಜಿಲ್ಲಾ ಮಟ್ಟದ ಮಾದರಿಯಲ್ಲಿ ಮುಂಗಾರು ಋತುವಿನ ಬೆಳೆ ಅಂಕಿ-ಅಂಶಗಳ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ಜು.5ರಂದು ಜಿಲ್ಲೆಯ ತಹಶೀಲ್ದಾರ್‌ಗಳು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸಂಜೆಯೊಳಗೆ ನಡಾವಳಿ ವರದಿ ಕಳುಹಿಸಿಕೊಡಬೇಕು. ಮುಂದಿನ 10 ದಿನಗಳಲ್ಲಿ ಮತ್ತೂಂದು ಸಭೆ ನಡೆಸಿ ನಿಗದಿತ ಅವಧಿಯಲ್ಲಿ ಸಮೀಕ್ಷಾ ಕಾರ್ಯ ಕೈಗೊಳ್ಳಲು ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.

Advertisement

ಹತ್ತಿ ಬೆಳೆಹಾನಿ: ಕಂಪನಿಯೊಂದು ಕಳಪೆ ಬೀಜ ವಿತರಿಸಿದ ಪರಿಣಾಮ ರೈತರು ನಷ್ಟ ಅನುಭವಿಸಿರುವ ಕುರಿತಂತೆ ವರದಿಯಾಗಿವೆ. ನೈಜತೆ ಕುರಿತಂತೆ ಪರಿಶೀಲನೆ ನಡೆಸಿ. ಒಂದೊಮ್ಮೆ ಹಾನಿಯಾಗಿದ್ದರೆ ಯಾವ ಕಂಪನಿ ಬೀಜ ವಿತರಿಸಿದೆ, ಪ್ರಮಾಣೀಕರಿಸದ ಬೀಜವೇ ಅಥವಾ ಇತರ ಬೀಜವೇ, ಮಾರಾಟ ಮಾಡಿದವರ ವಿವರ, ಹಾನಿಯಾದ ಬೆಳೆ ಪ್ರಮಾಣ, ನಷ್ಟ ಅನುಭವಿಸಿದ ವಿವರ ಸೇರಿದಂತೆ ಸಂಜೆಯೊಳಗೆ ವರದಿ ನೀಡಲು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಎಸ್‌.ಜಿ. ಮುಳ್ಳಳ್ಳಿ, ಹಾವೇರಿ ಉಪ ವಿಭಾಗಾ ಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರದೀಪ, ಜಿಲ್ಲಾ ಅಗ್ರಣೀಯ ಬ್ಯಾಂಕ್‌ ವ್ಯವಸ್ಥಾಪಕ ಪ್ರಭುದೇವ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಗದೀಶ ಪಾಟೀಲ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಕಳೆಪೆ ಬೀಜ-ಗೊಬ್ಬರದ ಜಾಗೃತಿ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಪ್ರಮಾಣೀಕರಿಸಿದ ಬೀಜ-ಗೊಬ್ಬರ ಹೊರತುಪಡಿಸಿ ಇತರ ಬಿತ್ತನೆ ಬೀಜ-ಗೊಬ್ಬರ ಖರೀದಿಸದಂತೆ ರೈತರಿಗೆ ಜಾಗೃತಿ ಮೂಡಿಸಿ. ಆಯಾ ಪ್ರದೇಶದ ಪ್ರಗತಿಪರ ರೈತರ ಸಂಪರ್ಕ ಇಟ್ಟುಕೊಂಡು ಕಳಪೆ ಬೀಜ-ಗೊಬ್ಬರ ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ. ಮಾನ್ಯತೆ ಇಲ್ಲದ ಬಿತ್ತನೆ ಬೀಜ, ಗೊಬ್ಬರ ಹಾಗೂ ಔಷಧ ಮಾರಾಟ ಮಾಡುವ ಏಜೆನ್ಸಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮವಹಿಸಿ. ಸ್ಥಳೀಯವಾಗಿ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿಶೇಷ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿತ್ತನೆ ಬೀಜ-ರಸಗೊಬ್ಬರದ ಕೊರತೆಯಾಗದಂತೆ ಕ್ರಮ ವಹಿಸಬೇಕು. ಸಹಕಾರಿ ಸಂಘಗಳ ಮೂಲಕ ಗೊಬ್ಬರಗಳ ವಿತರಣೆ ನಡೆಯುತ್ತಿದ್ದು, ತಹಶೀಲ್ದಾರ್‌ಗಳು ವಿತರಣೆ ಚಟುವಟಿಕೆ ಮೇಲೆ ಗಮನ ಹರಿಸಬೇಕು. ಬಿತ್ತನೆ ಬೀಜದ ಪೂರೈಕೆ ಕುರಿತಂತೆ ನಿಗಾವಹಿಸಿ ಅಭಾವ ಉಂಟಾದಲ್ಲಿ ತಕ್ಷಣ ಸಮಸ್ಯೆ ಬಗೆಹರಿಸಲು ಕೃಷಿ ಜಂಟಿ ನಿರ್ದೇಶಕರು ಕ್ರಮ ವಹಿಸಬೇಕು. –ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next