ಬೆಳಗಾವಿ: ಪ್ರವಾಹದಲ್ಲಿ ಹಾನಿಯಾದ ಬೆಳೆಗೆ ಲಕ್ಷ ರೂ. ಪರಿಹಾರಕ್ಕೆ ಕೇಳಿದ್ದ ರೈತರಿಗೆ ತಮ್ಮದು 80 ಎಕರೆ ಬೆಳೆ ಹಾನಿಯಾಗಿದೆ 80 ಲಕ್ಷ ರೂ. ಪರಿಹಾರ ಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ರೈತರು 180 ರೂ. ದೇಣಿಗೆ ಸಂಗ್ರಹಿಸಿ ಸವದಿ ಅವರಿಗೆ ಕೋರಿಯರ್ ಮೂಲಕ ಕಳುಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ರೈತ ಸಂಘದ ಮುಖಂಡರು, ಪ್ರತಿಭಟನಾಕಾರರಿಂದ ಹಣ ಸಂಗ್ರಹಿಸಿದರು. 180 ರೂ. ಹಣವನ್ನು ಕೋರಿಯರ್ ಮೂಲಕ ಸವದಿ ಅವರ ವಿಳಾಸಕ್ಕೆ ಕಳುಹಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಪ್ರತಿ ಎಕರೆಗೆ 50 ಸಾವಿರ ರೂ.ದಿಂದ 1 ಲಕ್ಷ ರೂ. ಬೆಳೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತರು ಕೆಲ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಳಗಾವಿಗೆ ಆಗಮಿಸಿದಾಗ ಮುತ್ತಿಗೆ ಹಾಕಲು ಯತ್ನಿಸಿದ್ದರು. ಆಗ ಪೊಲೀಸರು ರೈತರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದರು.
ಶನಿವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮತ್ತೆ ಪ್ರತಿಭಟನೆ ಆರಂಭಿಸಿದ ರೈತ ಮುಖಂಡರು ಯಡಿಯೂರಪ್ಪ ಹಾಗೂ ಲಕ್ಷ್ಮಣ ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದಿಂದ ಪರಿಹಾರ ತರುವಲ್ಲಿ ರಾಜ್ಯದ ಸಂಸದರು ವಿಫಲರಾಗಿದ್ದಾರೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೆರೆ ಸಂತ್ರಸ್ತರ ಬೆನ್ನಿಗೆ ನಿಂತು ಕೆಲಸ ಮಾಡುವುದು ಅನುಮಾನ ವ್ಯಕ್ತವಾಗುತ್ತಿದೆ ಎಂದು ದೂರಿದರು.