Advertisement

ಗೋವಿನಜೋಳ ಪರಿಹಾರ ಯಾರಿಗೆ?

01:50 PM Jun 15, 2020 | Suhan S |

ಧಾರವಾಡ: ಕೋವಿಡ್ ಮಹಾಮಾರಿಯಿಂದ ಉಂಟಾದ ಲಾಕ್‌ಡೌನ್‌ನಿಂದ ಸಂಕಷ್ಟದ ಸುಳಿಗೆ ಸಿಲುಕಿದ್ದ ಗೋವಿನಜೊಳ ಬೆಳೆಗಾರರಿಗೆ ಸರ್ಕಾರ ಐದು ಸಾವಿರ ರೂ. ಪರಿಹಾರ ಘೋಷಿಸಿದೆ. ಆದರೆ ಇದೀಗ ಸರ್ಕಾರದ ನಿರ್ದಿಷ್ಟ ಮಾರ್ಗಸೂಚಿಗಳು ಮತ್ತು ಆದೇಶಗಳ ಕೊರತೆಯಿಂದ ಅರ್ಧಕ್ಕಿಂತ ಹೆಚ್ಚು ಗೋವಿನಜೋಳ ಬೆಳೆಗಾರರು ಪರಿಹಾರದಿಂದ ವಂಚಿತರಾಗುತ್ತಿದ್ದು, ಇದಕ್ಕೆ ಸೂಕ್ತ ನಿರ್ದೇಶನಕ್ಕಾಗಿ ರೈತರು ಕಾಯುತ್ತಿದ್ದಾರೆ.

Advertisement

ಹೌದು. ಕಳೆದ ವರ್ಷದ ಮುಂಗಾರಿನಲ್ಲಿ ಅತಿವೃಷ್ಟಿಯಿಂದ ಮತ್ತು ಹಿಂಗಾರಿಯಲ್ಲಿ ತೀವ್ರ ಸುಳಿ ಕೊರಕ ಹುಳುವಿನ ರೋಗದಿಂದ ಸಂಕಷ್ಟಕ್ಕೆ ಸಿಲುಕಿರುವ ಗೋವಿನಜೋಳ ಬೆಳೆಗಾರರು ಮಾರ್ಚ್‌ ತಿಂಗಳಿನಲ್ಲಿ ಎದುರಾದ ಕೋವಿಡ್ ರೋಗದಿಂದ ಉಂಟಾದ ಬೆಲೆಕುಸಿತದ ಸುಳಿಯಲ್ಲಿ ಸಿಲುಕಿ ಕಂಗಾಲಾಗಿದ್ದಾರೆ.

ಮುಂಗಾರು ಮತ್ತು ಹಿಂಗಾರು ಎರಡೂ ಅವಧಿಯ ಗೋವಿನಜೋಳ ಹೆಚ್ಚಾಗಿ ಮಾರಾಟವಾಗುವುದು ಕುಕ್ಕುಟೋದ್ಯಮ, ಹೈನುಗಾರಿಕೆ ಮತ್ತು ಕುರಕಲು ತಿಂಡಿ ತಿನಿಸು ತಯಾರಿಸುವ ಕೈಗಾರಿಕೆಗಳಿಗೆ. ಮಾರ್ಚ್‌ನಲ್ಲಿ ಉಂಟಾದ ಲಾಕ್‌ಡೌನ್‌ನಲ್ಲಿ ಮೊದಲುಕುಕ್ಕುಟೋದ್ಯಮ ನೆಲಕಚ್ಚಿದ್ದರಿಂದ ಶೇ.50 ಗೋವಿನಜೋಳದ ಮಾರಾಟ ಕುಸಿತ ಕಂಡಿತು.

ಕ್ವಿಂಟಲ್‌ಗೆ 2100 ರೂ.ಇದ್ದ ಗೋವಿನಜೋಳದ ಬೆಲೆ ಇದ್ದಕ್ಕಿದ್ದಂತೆ 1300 ರೂ.ಗಳಿಗೆ ಇಳಿಕೆ ಕಂಡಿತು. ಇನ್ನು ಆಗಷ್ಟೇ ಮಾರುಕಟ್ಟೆಗೆ ಬಂದಿದ್ದ ಹಿಂಗಾರಿ ಗೋವಿನಜೋಳ ಬೆಳೆದ ರೈತರ ಫಸಲು ಹೊಲದಲ್ಲೇ ಕೊಳೆತು ಹೋಗುವ ಸ್ಥಿತಿ ಬಂದೊದಗಿತು. ಈ ಸಂಕಷ್ಟದ ಸ್ಥಿತಿಯಿಂದ ಹೊರ ಬಂದ ರೈತರು ಸುಧಾರಿಸಿಕೊಳ್ಳುವುದಕ್ಕೆ ಪ್ರಯತ್ನ ನಡೆಸುತ್ತಿರುವಾಗಲೇ ಸರ್ಕಾರ ಕೊನೆಗೂ ಗೋವಿನಜೋಳ ಬೆಳೆದ ಪ್ರತಿಯೊಬ್ಬ ರೈತನಿಗೂ ಐದು ಸಾವಿರ ರೂ. ಪರಿಹಾರ ಘೋಷಿಸಿತು. ಇದರಿಂದ ಬೆಳೆಗಾರರು ಕೊಂಚ ನಿಟ್ಟುಸಿರು ಬಿಟ್ಟರು.

ಗ್ರಾಪಂಗೆ ಬಂದಿದ್ದು ಅಸಲಿ ಪಟ್ಟಿಯೇ?: ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಬಯಲು ಸೀಮೆ, ಮತ್ತು ಅರೆಮಲೆನಾಡು ತಾಲೂಕಿನೆಲ್ಲೆಡೆಯೂ ಹೆಚ್ಚಾಗಿ ಇದೀಗ ಸೋಯಾಬಿನ್‌ ಮತ್ತು ಗೋವಿನಜೋಳ ಬೆಳೆಯಲಾಗುತ್ತಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಮುಂಗಾರಿನಲ್ಲಿ 30 ಸಾವಿರ ಹೆಕ್ಟೇರ್‌ ನಲ್ಲಿ ಗೋವಿನಜೋಳ ಬೆಳೆದರೆ, ಹಿಂಗಾರಿನಲ್ಲಿ 15 ಸಾವಿರ ಹೆಕ್ಟೇರ್‌ನಲ್ಲಿ ಗೋವಿನಜೋಳ ಬೆಳೆಯಲಾಗಿತ್ತು. ಹೀಗೆ ಬೆಳೆದ ಎಲ್ಲಾ ರೈತರಿಗೂ ಇದೀಗ ಸರ್ಕಾರ ನಿಯಮಬದ್ಧವಾಗಿ ಪರಿಹಾರಧನ ನೀಡಬೇಕು. ಆದರೆ ಯಾವುದೇ ಮಾರ್ಗಸೂಚಿಗಳಿಲ್ಲದೇ ಸರ್ಕಾರವೇ ಗೋವಿನಜೋಳ ಫಲಾನುಭವಿಗಳ ಪಟ್ಟಿಯನ್ನು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಫಲಕಕ್ಕೆ ಹಾಕಿದ್ದು, ಅದರಲ್ಲಿ ಗೋವಿನಜೋಳ ಬೆಳೆದ ಶೇ.50 ರೈತರ ಹೆಸರೇ ನಮೂದಾಗಿಲ್ಲ. ಕೇವಲ ಎರಡು ಗುಂಟೆ, ಹತ್ತು ಗುಂಟೆ ಕರಾಬು ಜಮೀನು ಹೊಂದಿದವರು ಗೋವಿನಜೋಳ ಬೆಳೆದಿದ್ದಾರೆಂದು ಪಟ್ಟಿಯಲ್ಲಿ ಪ್ರಕಟಿಸಲಾಗಿದೆ. ಆದರೆ ಎಕರೆಗಟ್ಟಲೆ ಬೆಳೆದ ರೈತರು ಪರಿಹಾರದಿಂದ ವಂಚಿತರರಾಗಿದ್ದು, ಈ ಪಟ್ಟಿಯನ್ನು ಯಾವ ಮಾನದಂಡವಿಟ್ಟುಕೊಂಡು ಸಿದ್ಧಪಡಿಸಲಾಗಿದೆ ಎನ್ನುವ ಪ್ರಶ್ನೆ ರೈತರನ್ನು ಕಾಡುತ್ತಿದೆ.

Advertisement

ಪಹಣಿಯಲ್ಲಿದೆ, ಪಟ್ಟಿಯಲ್ಲಿಲ್ಲ: ಇನ್ನು ಜಿಲ್ಲೆಯ ಸಾವಿರಕ್ಕೂ ಅಧಿಕ ರೈತರ ಪಹಣಿ ಪತ್ರದಲ್ಲಿ 2019 ಮುಂಗಾರು ಮತ್ತು ಹಿಂಗಾರಿನಲ್ಲಿ ಮೆಕ್ಕಜೋಳ ಬೆಳೆಯಲಾಗಿದೆ ಎಂದು ನಮೂದಿಸಲಾಗಿದೆ. ಆದರೂ ಕೂಡ ಅಂತಹ ರೈತರ ಹೆಸರು ಸರ್ಕಾರ ಪ್ರಕಟಿಸಿರುವ ಪರಿಹಾರಧನ ಪಟ್ಟಿಯಲ್ಲಿ ಇಲ್ಲ. ಕೆಲವಷ್ಟು ಜನ ರೈತರ ಹೆಸರನ್ನು ಬೀಜ ಖರೀದಿಸಿದ ಕಳೆದ ವರ್ಷದ ಪಟ್ಟಿಗೆ ಅನುಗುಣವಾಗಿ ಮಾಡಲಾಗಿದೆ ಎನ್ನುವಮಾತುಗಳು ಕೇಳಿ ಬರುತ್ತಿವೆ. ಹಾಗಾದರೆ ಸರ್ಕಾರ ಹೊರತುಪಡಿಸಿ ಖಾಸಗಿ ಕಂಪನಿಗಳು ಮತ್ತು ಮನೆಯಲ್ಲೇ ಬೀಜ ಸಂರಕ್ಷಣೆ ಮಾಡಿಟ್ಟುಕೊಂಡು ಗೋವಿನಜೋಳ ಬೆಳೆದ ರೈತರು ಏನು ಮಾಡಬೇಕೆನ್ನುವ ಪ್ರಶ್ನೆ ಹಾಕುತ್ತಿದ್ದಾರೆ ಮೆಕ್ಕೆಜೋಳ ಬೆಳೆಗಾರರು. ಸರ್ಕಾರ ಈಗಾಗಲೇ ಹೂವು ಬೆಳೆಗಾರರಿಗೆ ಹೆಕ್ಟೇರಿಗೆ 25 ಸಾವಿರ ರೂ. ಪರಿಹಾರ ನೀಡಿದೆ. ಇನ್ನುಳಿದಂತೆ ಕಾರ್ಮಿಕರಿಗೆ ತಲಾ ಐದು ಸಾವಿರ ರೂ. ಪರಿಹಾರ ನೀಡಿದೆ. ಆಟೋ ಚಾಲಕರು ಸೇರಿದಂತೆ ಎಲ್ಲರಿಗೂ ಪರಿಹಾರ ನೀಡಿದ್ದು, ಇದೀಗ ರೈತರ ವಿಚಾರದಲ್ಲಿ ಇಂತಹ ಗೊಂದಲ ಸೃಷ್ಟಿಸಿರುವುದರಿಂದ ಅನ್ನದಾತರು ಆತಂಕದಲ್ಲಿದ್ದಾರೆ. ಸಾಲ ಮಾಡಿ ಮುಂಗಾರು ಬೀಜ, ಗೊಬ್ಬರ ಕೊಂಡು ಹಾಕಿರುವ ರೈತರಿಗೆ ಮೆಕ್ಕೆಜೋಳ ಪರಿಹಾರ ಬಂದರೆ ಎಷ್ಟೋ ಅನುಕೂಲವಾಗುತ್ತಿತ್ತು. ಇದೀಗ ಪಟ್ಟಿ ಸಿದ್ಧಪಡಿಸುವಲ್ಲಿಯೇ ಗೊಂದಲ ಸೃಷ್ಟಿಯಾದರೆ ಹೇಗೆ ? ಎನ್ನುತ್ತಿದ್ದಾರೆ ರೈತ ಮುಖಂಡರು.

ಜನಸಮುದಾಯಕ್ಕೆ ಬಿಸಿ ಮುಟ್ಟಿಸಿದ ಕೋವಿಡ್ :  ಕೋವಿಡ್ ಲಾಕ್‌ಡೌನ್‌ ಒಂದಲ್ಲ ಒಂದು ರೀತಿಯಲ್ಲಿ ಎಲ್ಲಾ ಜನ ಸಮುದಾಯಕ್ಕೂ ಬಿಸಿ ಮುಟ್ಟಿಸಿದೆ. ಈ ಪೈಕಿ ಆಯ್ದ ಕೆಲವರಿಗೆ ವಿವಿಧ ವಿಚಾರಗಳ ಅಡಿಯಲ್ಲಿ ಪರಿಹಾರ ನೀಡಲಾಗಿದೆ. ಆದರೆ ರೈತರಿಗೆ ಬರೀ ಇಂತಹದೊಂದೇ ಬೆಳೆನಾಶಕ್ಕೆ ಪರಿಹಾರ ಎಂದು ಲೆಕ್ಕ ಹಾಕುತ್ತಿರುವುದು ವಿಷಾದನೀಯ. ಲಾಕ್‌ಡೌನ್‌ ಲೆಕ್ಕಿಸದೇ ಹಗಲುರಾತ್ರಿ ಹೊಲದಲ್ಲಿ ಕೆಲಸ ಮಾಡಿದ ರೈತ ಸಂಕುಲ ತರಕಾರಿ ಹಾನಿ, ಬೆಳೆಹಾನಿ, ಬೆಲೆ ಇಳಿಕೆ, ಇದ್ದ ಉತ್ಪನ್ನಗಳ ಮಾರಾಟವಾಗದೇ ಹಾನಿಯಾಗಿದ್ದು ಸೇರಿದಂತೆ ಅನೇಕ ತೊಂದರೆ ಎದುರಿಸಿದೆ. ಈಗ ರೈತರಿಗೆ ಅದು ಇದು ಎನ್ನದೇ ನೇರವಾಗಿ ಖಾತೆವಾರು ಒಂದಿಷ್ಟು ಪರಿಹಾರ ನೀಡುವುದು ಸೂಕ್ತ ಎನ್ನುತ್ತಿದ್ದಾರೆ ರೈತ ಮುಖಂಡರು.

ಮೆಕ್ಕೆಜೋಳ ಬೆಳೆದ ರೈತರಿಂದ ಯಾವ ದಾಖಲೆ ಪಡೆಯಬೇಕೆನ್ನುವ ಕುರಿತು ಸದ್ಯಕ್ಕೆ ಮಾರ್ಗಸೂಚಿಗಳು ಬಂದಿಲ್ಲ. ಆದರೆ ರೈತರ ಪಹಣಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಕೃಷಿ ಇಲಾಖೆಗೆ ಸಲ್ಲಿಸಲು ಗ್ರಾಪಂಗಳ ಮೂಲಕ ಕೋರಲಾಗಿದೆ.  –ರಾಜಶೇಖರ, ಜಂಟಿ ನಿರ್ದೇಶಕ, ಕೃಷಿ ಇಲಾಖೆ,ಧಾರವಾಡ.

ನಾವು ಹತ್ತು ಎಕರೆ ಗೋವಿನಜೋಳ ಬೆಳೆದಿದ್ದು, ಎಲ್ಲರೂ ಕೋವಿಡ್ ದಿಂದ ಉತ್ತಮ ಬೆಲೆ ಸಿಗದೇ ಹಾನಿಯಾಯಿತು. ಈಗ ಸರ್ಕಾರದ ಪಟ್ಟಿಯಲ್ಲಿ ನಮ್ಮ ಹೆಸರೂ ಇಲ್ಲ. ಹೀಗಾದರೆ ಹೇಗೆ? ಇದನ್ನು ಸರ್ಕಾರ ಸರಿಪಡಿಸಬೇಕು. ರಾಯನಗೌಡ ಪಾಟೀಲ ಜಮ್ಯಾಳ ಗ್ರಾಮಸ್ಥ

 

ಬಸವರಾಜ ಹೊಂಗಲ್

Advertisement

Udayavani is now on Telegram. Click here to join our channel and stay updated with the latest news.

Next