ಶಹಾಬಾದ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದ್ದು, ಕೂಡಲೇ ರಾಜ್ಯ ಸರ್ಕಾರ ಹಸಿ ಬರಗಾಲ ಘೋಷಿಸಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ನಗರದ ಬಸವೇಶ್ವರ ವೃತ್ತದಿಂದ ನೆಹರು ವೃತ್ತದ ವರೆಗೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಆನಂತರ ತಹಶೀಲ್ದಾರ್ ಸುರೇಶ ವರ್ಮಾ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿ, ಅತಿವೃಷ್ಟಿ ಮಳೆಯಿಂದ ಪ್ರಕೃತಿ ವಿಕೋಪ ಸಂಭವಿಸಿದ್ದು, ಸರ್ಕಾರ ಕೂಡಲೇ ಹಸಿ ಬರಗಾಲ ಎಂದು ಘೋಷಿಸಬೇಕು, ಪ್ರತಿ ಎಕರೆಗೆ 25ಸಾವಿರ ರೂ. ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಾದ್ಯಂತ ರೈತರು ಸಿಕ್ಕಾಪಟ್ಟೆ ಲಾಗೋಡಿ ಮಾಡಿ ಮುಂಗಾರು ಬಿತ್ತನೆ ಮಾಡಿದ್ದಾರೆ. ಬೀಜ ಮತ್ತು ರಸಗೊಬ್ಬರ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯಿಂದ ರೈತರು ಕಂಗಾಲಾಗಿದ್ದಾರೆ. ತೊಗರಿ ನಾಡಿನಲ್ಲಿ ವಾಣಿಜ್ಯ ಬೆಳೆಗಳಾದ ತೊಗರಿ ಬೆಳೆ, ಹೆಸರು, ಉದ್ದು, ಸೋಯಾ, ಎಳ್ಳು, ಸಜ್ಜೆ, ಹೈಬ್ರಿಡ್ ಜೋಳ, ಹತ್ತಿ ಬೆಳೆಗಳು ಸಂಪೂರ್ಣ ಹಾನಿಯಾಗಿವೆ ಎಂದು ಅಳಲು ತೋಡಿಕೊಂಡರು.
ಮುಂದಿನ ಹಿಂಗಾರು ಬೆಳೆಗಳಿಗೆ ಭೂಮಿ ಹದ ಮಾಡಲು, ಕಸ ತೆಗೆಯಲು, ತೊಗರಿಗೆ ಎಣ್ಣೆ ಹೊಡೆಯಲು ಲಾಗೋಡಿ ಮಾಡಲು ಆಸರೆಯಾಗುತ್ತಿದ್ದ ರೈತರಿಗೆ ರೊಕ್ಕದ ಮಾಲು ಕೈಕೊಟ್ಟಂತಾಗಿದೆ. ಹೀಗಾಗಿ ಅನ್ನದಾತರಿಗೆ ದಿಕ್ಕು ತೋಚದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸತತವಾಗಿ ಮಳೆ ಸುರಿದರೂ ಸಹ ಸರ್ಕಾರ ಹಾಗೂ ಈ ಭಾಗದ ಜನಪ್ರತಿನಿಧಿಗಳು ಲಕ್ಷ್ಯ ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಭತ್ತ 478 ಹೆಕ್ಟೇರ್, ಜೋಳ 405ಹೆಕ್ಟೇರ್, ಮೆಕ್ಕೆಜೋಳ 1194, ಸಜ್ಜೆ 1352, ಸಿರಿಧಾನ್ಯ 104, ತೊಗರಿ 480983, ಉದ್ದು 27221, ಹೆಸರು 46922, ಅವರೆ 17, ಅಲಸಂದಿ 41, ಶೇಂಗಾ 293, ಸೋಯಾ 37326 ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ. 39 ದಿನಗಳ ಕಾಲ ಸತತವಾಗಿ ಧಾರಾಕಾರ ಮಳೆ ಸುರಿದು ಬೆಳೆ ನಷ್ಟವಾದರೂ ಇಲ್ಲಿಯವರೆಗೆ ಬೆಳೆ ಸಮೀಕ್ಷೆ ಮಾಡದೇ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.
ಅತಿವೃಷ್ಟಿ ಮಳೆಯಿಂದ ಹಾನಿಗೊಳಗಾದ ಬೆಳೆಗಳಿಗೆ ಮತ್ತು ಬಸವನ ಹುಳುಗಳು, ಶಂಕದ ಹುಳುಗಳು ಮೊಳಕೆ ತಿಂದು ಹಾನಿಯಾದ ಬೆಳೆಗಳಿಗೂ ಬೆಳೆ ವಿಮೆ ಮತ್ತು ಬೆಳೆ ನಷ್ಟ ಪರಿಹಾರ ನೀಡಬೇಕು. ಹಿಂಗಾರು ಬಿತ್ತನೆಗಾಗಿ ಬೀಜ, ರಸಗೊಬ್ಬರದ ಸಹಾಯಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ಕುರುಬ ಸಮಾಜದ ತಾಲೂಕಾಧ್ಯಕ್ಷ ಮಲ್ಕಪ್ಪ ಮುದ್ದಾ, ಸಾಯಿಬಣ್ಣ ಗುಡುಬಾ, ರಾಯಪ್ಪ ಹುರಮುಂಜಿ, ವೀರಯ್ಯಸ್ವಾಮಿ ತರನಳ್ಳಿ, ವಿಶ್ವರಾಜ μರೋಜಾಬಾದ, ಮಹಾದೇವ ತರನಳ್ಳಿ, ಮಲ್ಲಣ್ಣ ಕಾರೊಳ್ಳಿ, ನಾಗಪ್ಪ ರಾಯಚೂರಕರ್ ಮುಂತಾದವವರು ಪಾಲ್ಗೊಂಡಿದ್ದರು.