Advertisement

“ರೈತರೇ,ಸರ್ಕಾರ ಸದಾ ನಿಮ್ಮೊಂದಿಗಿದೆ’

06:00 AM Nov 19, 2018 | Team Udayavani |

ಬೆಂಗಳೂರು : ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಕುಗ್ಗಿ ಹೋಗಿರುವ ರೈತರು ಆಧುನಿಕ ಕೃಷಿಗೆ ಹೊಂದಿಕೊಳ್ಳಲು ಮಾನಸಿಕವಾಗಿ ಸಿದ್ಧವಾದರೆ, ಸರ್ಕಾರ ಎಷ್ಟು ಸಾವಿರ ಕೋಟಿ ರೂ. ಬೇಕಾದರೂ ಖರ್ಚು ಮಾಡಲು ತಯಾರಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಬೆಂಗಳೂರು ಕೃಷಿ ವಿವಿಯಿಂದ ಜಿಕೆವಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ರೈತರು ಭೂಮಿಯಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿ ಮುಂದುವರಿಸಿಕೊಂಡು ಬರುತ್ತಿರುವುದರಿಂದ ಆದಾಯ ಇಲ್ಲದೆ ಕುಗ್ಗಿ ಹೋಗಿದ್ದಾರೆ. ಆಧುನಿಕತೆಗೆ ತಕ್ಕಂತೆ ಕೃಷಿ ಪದ್ಧತಿ ಬದಲಾಗಬೇಕು. ಇದರಿಂದ ಕೃಷಿಕ ಆರ್ಥಿಕ ಸದೃಢತೆ ಸಾಧಿಸಲು ಸಾಧ್ಯ ಎಂದು ತಿಳಿಸಿದರು.

ಕೃಷಿ ಪ್ರತಿ ಕುಟುಂಬಕ್ಕೂ ಆದಾಯ ತಂದುಕೊಡುವ ವಾತಾವರಣ ನಿರ್ಮಾಣವಾಗಬೇಕು. ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಮೇಲೆ ರೈತರು ವಿಶ್ವಾಸವಿಟ್ಟು, ಕೃಷಿ ಪದ್ಧತಿ ಬದಲಾವಣೆಗೆ ಮಾನಸಿಕ ಸಿದ್ಧವಾದರೆ, ಸರ್ಕಾರವೇ ಆರ್ಥಿಕ ನೆರವು ನೀಡಲಿದೆ. ಖಾಸಗಿ ವಲಯದಿಂದ ಸಾಲ ಪಡೆಯದೆ ಅಧುನಿಕ ಕೃಷಿ ಪದ್ಧತಿಗೆ ಬೇಕಾದ ಎಲ್ಲ ಸೌಲಭ್ಯ ಸರ್ಕಾರವೇ ಒದಗಿಸಲಿದೆ ಎಂದು ಭರವಸೆ ನೀಡಿದರು.

ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು. ಬೆಳೆ ಬೆಳಯುವ ಪದ್ಧತಿ ಬದಲಾವಣೆ ತರಬೇಕು. ಸರಾಸರಿ ಮಳೆ ಆಧಾರದ ಮೇಲೆ ಭೂಮಿ ಫ‌ಲವತ್ತತೆಯಂತೆ ಕೃಷಿ ಮಾಡಬೇಕು. ಇದಕ್ಕಾಗಿ ಕೃಷಿ ಇಲಾಖೆ ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ರೈತರ ಬೆಳೆಗೆ ಸೂಕ್ತ ಮಾರುಕಟ್ಟೆ, ಬೆಳೆ ಸಂರಕ್ಷಣೆ, ರಫ್ತು ಶ್ರೇಷ್ಠ ಬೆಳೆಯ ಉತ್ಪಾದನೆಯಾಗಬೇಕು ಎಂದು ಹೇಳಿದರು.

ಇದು ಜನರ ಸರ್ಕಾರ
ಇದು ಕಾಂಗ್ರೆಸ್‌ ಅಥವಾ ಜೆಡಿಎಸ್‌ ಸರ್ಕಾರವಲ್ಲ. ನಾಡಿನ ಆರುವರೆ ಕೋಟಿ ಜನರ ಸರ್ಕಾರ. ನಾಲ್ಕೈದು ವರ್ಷದಲ್ಲಿ ರೈತರ ಬೆಳೆಯ ನಷ್ಟದ ಪ್ರಮಾಣ 50 ರಿಂದ 65 ಸಾವಿರ ಕೋಟಿ ದಾಟಿದೆ. ರೈತರ ಸಮಸ್ಯೆಗೆ ಸಾಲಮನ್ನಾ ಶಾಶ್ವತ ಪರಿಹಾರ ಅಲ್ಲ ಎಂಬುದು ಗೊತ್ತಿಲ್ಲ.  45 ಸಾವಿರ ಕೋಟಿಗೂ ಹೆಚ್ಚಿನ ಬೆಳೆ ಸಾಲ ಮನ್ನಾ ಮಾಡಿದ್ದೇವೆ. ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸಹಕಾರಿ, ಗ್ರಾಮೀಣ, ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ ಬೆಳೆ ಸಾಲ ಮುಂದಿನ ಜೂನ್‌ ಅಂತ್ಯದೊಳಗೆ ಮನ್ನಾವಾಗಲಿದೆ. ಇದಕ್ಕಾಗಿ ವಿಶೇಷ ಘಟಕ ಸ್ಥಾಪಿಸಿ, ಐಎಎಸ್‌ ಅಧಿಕಾರಿಯೊಬ್ಬರನ್ನು ನೇಮಿಸಿ, ಕೆಲಸ ಆರಂಭಿಸಿದ್ದೇವೆ. ಅಪಪ್ರಚಾರ, ಸುಳ್ಳಗಳಿಗೆ ರೈತರು ಗಮನ ಕೊಡಬಾರದು ಎಂದರು.

Advertisement

ಕೃಷಿಕರು ಪ್ರಚೋದನೆಗೆ ಒಳಗಾಗ ಬಾರದು. ಆತ್ಮಹತ್ಯೆಗೆ ಒಳಗಾಗುವುದಿಲ್ಲ ಎಂದು ಪಣ ತೊಡಬೇಕಿದೆ. ಸಾಲ ಮನ್ನಾದ ಮೂಲಕ ಜನರ ತೆರಿಗೆ ಹಣವನ್ನು ಜನರಿಗೆ ತಲುಪಿಸುತ್ತಿದ್ದೇವೆ. ಇದರಿಂದ ಆರ್ಥಿಕ ಅಶಿಸ್ತು ಆಗುವುದಿಲ್ಲ. ಸರ್ಕಾರದ ಮೇಲೆ ವಿಶ್ವಾಸ ಇರಲಿ ಎಂದು ಮನವಿ ಮಾಡಿದರು.

ರೈತ ಕೃಷಿಯ ಜತೆಗೆ ಉಪಕಸುಬುಗಳನ್ನು ಆರಂಭಿಸಿದರೆ ಅಧಿಕ ಲಾಭ ಗಳಿಸಬಹುದು. ಐಟಿ, ಬಿಟಿ ಕಂಪನಿಗಳಲ್ಲಿದ್ದು ನೆಮ್ಮದಿಯ ಜೀವನ ನಡೆಸಬಹುದು ಎಂಬ ಭ್ರಮೆಯಿಂದ ವಿದ್ಯಾವಂತ ಯುವಕರು ಹೊರಬರಬೇಕು. ಕೃಷಿ ಅದಕ್ಕಿಂತ ನೆಮ್ಮದಿಯ ಜೀವನ ನೀಡುತ್ತದೆ ಎಂದರು.

ರಾಜ್ಯದ ಸಮ್ಮಿಶ್ರ ಸರ್ಕಾರ ಬಗ್ಗೆ ಯಾವುದೇ ಸಂಶಯ ಬೇಡ. ಇದು ಕುಮಾರಸ್ವಾಮಿ, ಕಾಂಗ್ರೆಸ್‌, ಜೆಡಿಎಸ್‌ ಅಥವಾ ಯಾವುದೋ ಜಾತಿ, ಪ್ರಾಂತ್ಯಕ್ಕೆ ಸೀಮಿತವಾದ ಸರ್ಕಾರವಲ್ಲ. ಉತ್ತರ, ಮಧ್ಯ, ಹೈದರಬಾದ್‌ ಹಾಗೂ ಹಳೇ ಕರ್ನಾಟಕ ಸೇರಿದಂತೆ ಸಮಸ್ತ ಕನ್ನಡಿಗರ ಸರ್ಕಾರ ಎಂದು ಹೇಳಿದರು.

ರೈತವಿಮೆಗೆ ಚಿಂತನೆ :
ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಮಾತನಾಡಿ, ತೆಲಂಗಾಣ ಮಾದರಿಯಲ್ಲಿ “ರೈತ ವಿಮೆ’ ಕಾರ್ಯಕ್ರಮ ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಶೂನ್ಯ ಬಂಡವಾಳ ಕೃಷಿ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಕೃಷಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎಂ. ವೀರಪ್ಪ ಮೊಯ್ಲಿ ಮಾತನಾಡಿ, ಕೃಷಿ ಕ್ಷೇತ್ರದ ಹೊಸ ಪ್ರಯೋಗಗಳನ್ನು ಗುರುತಿಸಿ ಸರ್ಕಾರ ಬಹುಮಾನ ನೀಡಿದರೆ ರೈತರಿಗೆ ಮತ್ತಷ್ಟು ಪ್ರೋತ್ಸಾಹ ಸಿಗಲಿದೆ. ಸಂಶೋಧನೆಗಳು ಕೆಲವೇ ಹೊಲಗಳು, ವಿಶ್ವವಿದ್ಯಾಲಯದ ದ್ವೀಪಕ್ಕೆ ಸೀಮಿತವಾಗದೆ, ವಿಸ್ತಾರವಾಗಿ ಬೆಳೆದಾಗ ಕೃಷಿಕರಿಗೆ ಲಾಭದಾಯಕವಾಗಲಿದೆ ಎಂದು ಹೇಳಿದರು.
ಪಂಚಾಯತ್‌ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಕೃಷಿ ವಿವಿ ಕುಲಪತಿ ಡಾ. ಎಸ್‌. ರಾಜೇಂದ್ರ ಪ್ರಸಾದ್‌, ವಿವಿ ಸಂಶೋಧನಾ ನಿರ್ದೇಶಕ ಡಾ. ವೈ.ಜಿ. ಷಡಕ್ಷರಿ ಮೊದಲಾದವರು ಇದ್ದರು.

ಕಾರ್ಯಕ್ರಮದಲ್ಲಿ ಮಣ್ಣಿನ ಫ‌ಲವತ್ತತೆ, ಗುಣಲಕ್ಷಣಗಳನ್ನು ತಿಳಿಸುವ ಮೊಬೈಲ್‌ ಆ್ಯಪ್‌ “ಬೆಳೆ ಸ್ಪಂದನೆ’ ಹಾಗೂ “ಬೀಜ್‌ ಆಧಾರ್‌’ಗೆ ಭಾನುವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಿದರು.

ಬೀಜ್‌ಆಧಾರ್‌ :
ರೈತರು ಬಿತ್ತನೆ ಬೀಜದ ಸಂಪೂರ್ಣ ಮಾಹಿತಿ ಇನ್ಮುಂದೆ ಮೊಬೈಲ್‌ ಆ್ಯಪ್‌ ಮೂಲಕವೇ ಪಡೆಯಬಹುದು. ಬೆಂಗಳೂರು ಕೃಷಿ ವಿವಿಯಿಂದ ಬೀಜ್‌ ಆಧಾರ್‌ ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಪಡಿಸಿದೆ. ಎಷ್ಟು ವಿಧದ ಬೆಳೆಗಳು ಮತ್ತು ಅದಕ್ಕೆ ಅಗತ್ಯವಾದ ಪೌಷ್ಠಿಕಾಂಶ ಯುಕ್ತ ಬೀಜಗಳು, ಅವುಗಳು ದೊರೆಯುವ ಸ್ಥಳ ಮತ್ತು ರೈತರಿಗೆ ಸಮೀಪದಲ್ಲಿ ಸಿಗಬಹುದಾದ ಸಾಧ್ಯತೆ, ಹೇಗೆ ಬೆಳೆಯಬೇಕು ಎಂಬಿತ್ಯಾದಿ ಎಲ್ಲ ಮಾಹಿತಿ ಈ ಆ್ಯಪ್‌ನಲ್ಲಿದೆ ಎಂದು ಕುಲಪತಿ ಡಾ.ರಾಜೇಂದ್ರ ಪ್ರಸಾದ್‌ ಮಾಹಿತಿ ನೀಡಿದರು.

ಮಣ್ಣಿನ ಫ‌ಲವತ್ತೆಗೆ ಆ್ಯಪ್‌ :
ರೈತರು ಮಣ್ಣಿನ ಫ‌ಲವತ್ತತೆಯನ್ನು ಇನ್ಮುಂದೆ ಮೊಬೈಲ್‌ ಆ್ಯಪ್‌ ಮೂಲಕವೇ ತಿಳಿದುಕೊಳ್ಳಬಹುದಾಗಿದೆ. ಈ ಮೂಲಕ ಅನಗತ್ಯ ರಸಗೊಬ್ಬರ ಬಳಕೆಗೆ ಸಾಕಷ್ಟು ಕಡಿವಾಣ ಬೀಳಲಿದ್ದು, ಶೇ. 40ರಷ್ಟು ರಾಸಾಯನಿಕ ವೆಚ್ಚ ತಗ್ಗಿಸಬಹುದು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗವು ತುಮಕೂರು  ಸಿದ್ದಗಂಗಾ ತಾಂತ್ರಿಕ ಸಂಸ್ಥೆ ಸಹಯೋಗದಲ್ಲಿ “ಮಣ್ಣು ಪರೀಕ್ಷೆ ಬೆಳೆ ಸ್ಪಂದನೆ ಪ್ರಾಯೋಜನೆ’ಯಲ್ಲಿ ಮೊಬೈಲ್‌ ಆ್ಯಪ್‌ ಸಿದ್ಧಪಡಿಸಲಾಗಿದೆ. ರೈತರು ತಮ್ಮ ಜಮೀನಿನಲ್ಲಿ ನಿಂತು ಮೊಬೈಲ್‌ನಲ್ಲಿರುವ “ಕಂಪಾಸ್‌’ ಮೇಲೆ ಕ್ಲಿಕ್‌ ಮಾಡಿದರೆ ಸಾಕು, ಎರಡೂ ತುದಿಗಳಲ್ಲಿ ಅಕ್ಷಾಂಶ-ರೇಖಾಂಶಗಳು ಕಾಣಿಸುತ್ತವೆ. ಅದನ್ನು ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ “ಕೃಷಿ ಗಣಕ’ದಲ್ಲಿ ನಮೂದಿಸಿದರೆ, ಜಮೀನಿನ ಫ‌ಲವತ್ತತೆಯ ಇಡೀ ಚಿತ್ರಣ ಸಿಗುತ್ತದೆ.

ರೈತ ಪ್ರಶಸ್ತಿ ಪ್ರದಾನ
ಕೃಷಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಹೊಸ ಪ್ರಯೋಗಗಳ ಮೂಲಕ ಗಮನ ಸೆಳೆದಿರುವ ಪ್ರಗತಿಪರ ರೈತರನ್ನು ಗುರುತಿಸಿ ವಿವಿಧ ಪ್ರಶಸ್ತಿಗಳನ್ನು ನೀಡಲಾಯಿತು. ತಲಾ 25 ಸಾವಿರು ರು. ನಗದು, ಪ್ರಶಸ್ತಿ, ಫ‌ಲಕ ನೀಡಿ ಗೌರವಿಸಲಾಯಿತು.ಸಿ. ಬೈರೇಗೌಡ ರಾಜ್ಯಮಟ್ಟದ ಅತ್ಯುತ್ತಮ ಪ್ರಶಸ್ತಿ- ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ದುಂಡಪ್ಪ ಯಂಕಪ್ಪಹಳ್ಳಿ, ಡಾ. ಆರ್‌. ದ್ವಾರಕೀನಾಥ್‌ ಪ್ರಶಸ್ತಿ- ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಜಿ. ರಮೇಶ, ಡಾ. ಆರ್‌. ದ್ವಾರಕೀನಾಥ್‌ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ- ತುಮಕೂರಿನ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ. ಕೆ.ಆರ್‌. ಶ್ರೀನಿವಾಸ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ರೈತ ಪ್ರಶಸ್ತಿ- ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ರಮೇಶ್‌ ಹಾಗೂ ದಾವಣಗೆರೆ ದೊಡ್ಡಬಾತಿ ಮಂಜುನಾಥ್‌ ಅವರಿಗೆ ಪ್ರಶಸ್ತಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next