Advertisement

ರೈತರ ಸಂಕಷಕ್ಟೆ ಆತ್ಮಹತ್ಯೆಪರಿಹಾರವಲ್ಲ: ಪುಷ್ಪಲತಾ

03:23 PM Nov 05, 2021 | Team Udayavani |

ಧಾರವಾಡ: ರೈತರ ಸಂಕಷ್ಟಕ್ಕೆ ಆತ್ಮಹತ್ಯೆ ಪರಿಹಾರವಲ್ಲ. ಆತ್ಮಹತ್ಯೆಗೆ ಶರಣಾಗಿ ಹೆಂಡತಿ, ಮಕ್ಕಳು, ಪಾಲಕರು ಮತ್ತು ನಂಬಿದವರನ್ನು ಇನ್ನಷ್ಟು ಸಂಕಷ್ಟಕ್ಕೆ ಗುರಿ ಮಾಡುವುದು ಸರಿಯಾದ ಮಾರ್ಗವಲ್ಲ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪುಷ್ಪಲತಾ ಸಿ.ಎಂ. ಹೇಳಿದರು.

Advertisement

ಕುಂದಗೋಳ ತಾಲೂಕಿನ ಇನಾಂಕೊಪ್ಪ ಗ್ರಾಮದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಲದ ಹೊರೆ, ಬೆಲೆ ಕುಸಿತ, ಅತಿವೃಷ್ಟಿ ಮತ್ತು ಅನಾವೃಷ್ಟಿ, ದುಬಾರಿ ಪರಿಕರಗಳು, ಅಸ್ಥಿರ ಮಾರುಕಟ್ಟೆ ಮುಂತಾದ ಸಂಕಷ್ಟಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಾದ ಮಾರ್ಗವಲ್ಲ. ಇಂತಹ ಸಂಕಷ್ಟಗಳಿಗೆ ಪರಿಹಾರ ಸೂಚಿಸಲು ಸರಕಾರ, ಸಮಾಜ, ನ್ಯಾಯಾಲಯ, ಸಂಘಟನೆಗಳು ನಿಮ್ಮೊಂದಿಗಿವೆ ಎಂದರು.

ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್‌ ವಕೀಲ ಸೋಮಶೇಖರ ಜಾಡರ ಮಾತನಾಡಿ, ಸಮಾಜದಲ್ಲಿ ಹಿರಿಯ ನಾಗರಿಕರಿಗೆ ಗೌರವಿಸುವ ಪರಿಪಾಠವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಸ್ತಿ- ಅಂತಸ್ತುಗಳಿಗಿಂತ ಮಾನವೀಯ ಮೌಲ್ಯಗಳು ಶ್ರೇಷ್ಠವಾಗಿವೆ. ಇದನ್ನು ಅರಿತಾಗ ಮಾತ್ರ ಹೆಚ್ಚುತ್ತಿರುವ ವೃದ್ಧಾಶ್ರಮಗಳಿಗೆ ಮುಕ್ತಿ ದೊರಕಲಿದೆ ಎಂದರು.

ದೇಶದ ಕಾನೂನು ಎಲ್ಲಾ ನಾಗರಿಕರಿಗೆ ಸಮಾನವಾಗಿದೆ. ಕಾನೂನು ಅರಿತಿಲ್ಲ ಎಂದರೆ ಅದಕ್ಕೆ ಕ್ಷಮೆ ಇಲ್ಲ. ದೇಶದ ಕಟ್ಟಕಡೆಯ ವ್ಯಕ್ತಿ ಕಾನೂನು ಅರಿತಾಗ ದೇಶದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ದೈನಂದಿನ ಚಟುವಟಿಕೆ, ಜೀವನ ಸಾಗಿಸಲು ಸುಗಮವಾಗುತ್ತದೆ ಎಂದರು.ಗ್ರಾಪಂ ಅಧ್ಯಕ್ಷೆ ಚನ್ನವ್ವಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಹನುಮರಡ್ಡಿ ನಾಗಾವಿ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮ ನಂತರ ಮನೆ ಮನೆಗೆ ತೆರಳಿ ಕರಪತ್ರ ಹಂಚುವುದರ ಮೂಲಕ ಕಾನೂನು ಅರಿವು ಮೂಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next