Advertisement

ಗೊಬ್ಬರ ಖರೀದಿಗೆ ರೈತರ ನೂಕುನುಗ್ಗಲು

03:51 PM Jul 21, 2022 | Team Udayavani |

ಮುಂಡಗೋಡ: ತಾಲೂಕಿನಲ್ಲಿ ಯೂರಿಯಾ ಕೊರತೆ ಉಂಟಾಗಿದ್ದು ಸಕಾಲದಲ್ಲಿ ಗೊಬ್ಬರ ಸಿಗದಿದ್ದಕ್ಕೆ ರೈತರು ಹರಸಾಹಸ ಪಡುತ್ತಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತಾಲೂಕಿನಲ್ಲಿ ಗೋವಿನ ಜೋಳ ಬೆಳೆಗಾರರ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ಯೂರಿಯಾ ಗೊಬ್ಬರ ಅತ್ಯವಶ್ಯವಾಗಿದೆ. ಬೇಡಿಕೆಗೆ ತಕ್ಕಂತೆ ಯೂರಿಯಾ ಸರಬರಾಜು ಮಾಡುವಲ್ಲಿ ಕಂಪನಿಗಳು ಮತ್ತು ಅಧಿಕಾರಿಗಳು ವಿಫಲವಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಕಳೆದ 15 ದಿಗಳಿಂದ ತಾಲೂಕಿನಾದ್ಯಂತ ನಿರಂತರ ಮಳೆಯಿಂದ ಕೆಲ ಗದ್ದೆಯಲ್ಲಿ ಮಳೆ ನೀರು ನಿಂತು ಭತ್ತ, ಗೋವಿನ ಜೋಳ ಬೆಳೆಗೆ‌ ಬೇರು ಕೋಳೆ ರೋಗ, ಹಳದಿ ರೋಗಗಳು ಕಾಣಿಸುತ್ತಿದೆ. ಕಳೆದೆರಡು ದಿನದಿಂದ ಬಿಸಿಲು ಬಿದ್ದ ಕಾರಣ ಸಕಾಲದಲ್ಲಿ ಯೂರಿಯಾ ಗೊಬ್ಬರ ಹಾಕಲು ರೈತರು ಹವಣಿಸುತ್ತಿದ್ದಾರೆ. ಆದರೆ ತಾಲೂಕಿನ ಕೆಲ ಸೊಸೈಟಿಯಲ್ಲಿ ಯೂರಿಯಾ ಗೊಬ್ಬರ ಕೊರತೆಯಾಗಿದೆ. ಅಲ್ಲದೆ ಖಾಸಗಿ ಅಂಗಡಿಗಳಲ್ಲಿ ಹೆಚ್ಚಿನ ದರಕ್ಕೆ ಮಾರಾಟಾ ಮಾಡುತ್ತಿದ್ದಾರೆ. ಆದರೆ ಇಲ್ಲಿನ ಟಿಎಸ್‌ಎಸ್‌ ಕೃಷಿ ಸೂಪರ್‌ ಮಾರ್ಕೆಟ್‌ನಲ್ಲಿ 10 ಚೀಲ ಯೂರಿಯಾ ಪಡೆದ ರೈತರಿಗೆ ಒಂದು ಚೀಲ ಬೇವಿನಹಿಂಡಿ ಲಿಂಕ್‌ ಇಲ್ಲವೇ ರೈತನಿಗೆ ಬೇಕಾದ ಗೊಬ್ಬರ ನೀಡುತ್ತಿದ್ದಾರೆ ಎಂಬ ವಿಷಯ ತಿಳಿದು ಒಮ್ಮೆಲೆ ನೂರಾರು ರೈತರು ಮುಗಿಬಿದ್ದಿದ್ದಾರೆ.

ಪಟ್ಟಣದ ಟಿಎಸ್‌ಎಸ್‌ ಕೃಷಿ ಸೂಪರ್‌ ಮಾರ್ಕೆಟ್‌ ನಲ್ಲಿ ರೈತರು ಯೂರಿಯಾ ಗೊಬ್ಬರಕ್ಕಾಗಿ ಕಾದು ಕುಳಿತರೂ ಗೊಬ್ಬರ ನೀಡದೆ ವಾಪಸ್‌ ಕಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಎದುರು ಜಮಾಯಿಸಿ ಆಕ್ರೋಶ ವ್ಯಕ್ತ ಪಡಿಸಿದರು.ಪ್ರತಿಭಟನೆ ಮಾಡಲು ಮುಂದಾದಾಗ ಈ ಬಗ್ಗೆ ಕೃಷಿ ಅಧಿಕಾರಿ ಎಂ.ಎಸ್‌. ಕುಲಕರ್ಣಿ ಫೋನ್‌ ಕರೆ ಮಾಡಿ ಹೇಳಿದಾಗ ರೈತರನ್ನು ಸಮಾಧಾನಪಡಿಸಿ ಟಿಎಸ್‌ಎಸ್‌ಗೆ ಕೆರೆ ಮಾಡಿ ಹೇಳಿದರು. ನಂತರ ರೈತರಿಗೆ ಯೂರಿಯಾ ಗೊಬ್ಬರ ವಿತರಿಸಿದರು.

ಈವರೆಗೆ 842.95 ಟನ್‌ ಯೂರಿಯಾ ಗೊಬ್ಬರ ಮಾರಾಟ ಮಾಡಲಾಗಿದೆ. ರೈತರ ಇಚ್ಛೆ ಮೇರೆಗೆ ಗೊಬ್ಬರ ವಿತರಿಸಲಾಗುತ್ತಿದೆ. ಯೂರಿಯಾ ದಾಸ್ತಾನು ಇಲ್ಲದ ಕಾರಣ ಮತ್ತೆ ಗೊಬ್ಬರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬರುವ ನಾಲ್ಕೈದು ದಿನಗಳಲ್ಲಿ ಯೂರಿಯಾ ಗೊಬ್ಬರ ದಾಸ್ತಾನು ಮಾಡಲಾಗುವುದು. –ಅನಂತ ಭೋಮಕರ, ಟಿಎಸ್‌ಎಸ್‌ ಕೃಷಿ ಸೂಪರ್‌ ಮಾರ್ಕೆಟ್‌ ವ್ಯವಸ್ಥಾಪಕ

Advertisement

ಸೊಸೈಟಿಗಳ್ಳಲ್ಲಿ ಗೊಬ್ಬರ ಸೀಗುತ್ತಿಲ್ಲ. ಕೃಷಿ ಅಧಿಕಾರಿ ಲಿಂಕ್‌ ಯಾವುದೂ ಕೊಡುವುದು ಬೇಡವೆಂದು ಹೇಳಿದಾಗ ಒಪ್ಪಿಕೊಂಡಿದ್ದರು. ಆದರೆ ಈಗ 15-20 ಚೀಲ ಯೂರಿಯಾ ಗೊಬ್ಬರದ ಜೊತೆ ಬೇವಿನ ಹಿಂಡಿ ಕೊಡುತ್ತಿದ್ದಾರೆ. 5 ಚೀಲಗಳ ಜೊತೆ ಒಂದು ಮಿಕ್ಸ್‌ ಕೊಡುತ್ತಿದ್ದಾರೆ. ಖಾಸಗಿ ಆಗ್ರೋ ಕೇಂದ್ರಗಳಲ್ಲಿಯೂ ಲಿಂಕ್‌ ಮಾಡಿಯೇ ಹೆಚ್ಚಿನ ದರಕ್ಕೆ ಯೂರಿಯಾ ಗೊಬ್ಬರ ವಿತರಿಸುತ್ತಿದ್ದಾರೆ. ಯೂರಿಯಾ ಗೊಬ್ಬರವನ್ನೇ ಕಷ್ಟಪಟ್ಟು ಖರೀದಿಸುತ್ತಿರುವಾಗ ಲಿಂಕ್‌ ಗೊಬ್ಬರ ಖರೀದಿಸುವುದು ನಮಗೆ ತುಂಬಾ ತೊಂದರೆಯಾಗಿದೆ. -ಕಲ್ಲಪ್ಪ ಗಲಬಿ, ಕೊಪ್ಪ ಗ್ರಾಮದ ರೈತ

ತಾಲೂಕಿನಲ್ಲಿ ಯೂರಿಯಾ ಗೊಬ್ಬರ ದಾಸ್ತುನು ಇದೆ. ಕಳೆದೆರಡು ದಿನಗಳ ಹಿಂದೆ ಸಂಘ-ಸಂಸ್ಥೆ ಹಾಗೂ ಖಾಸಗಿ ರಸಗೊಬ್ಬರ ಅಂಗಡಿಯಲ್ಲಿ ಯೂರಿಯಾ ಗೊಬ್ಬರ 417.33 ಟನ್‌ ದಾಸ್ತಾನು ಇತ್ತು. ಎರಡು ದಿನಗಳಲ್ಲಿ ರೈತರು ಗೊಬ್ಬರ ಖರೀದಿಸಿದ್ದಾರೆ. ಸುಮಾರು 150 ರಿಂದ 160 ಟನ್‌ ದಾಸ್ತುನು ಇದೆ. ಯೂರಿಯಾ ಗೊಬ್ಬರದ ಕೊರತೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಕಾರ್ಮಿಕ ಸಚಿವರ ಗಮನಕ್ಕೆ ತಂದಿದ್ದೇನೆ. ಈ ತಿಂಗಳ ಅಂತ್ಯದವರೆಗೆ ತಾಲೂಕಿಗೆ 300 ಟನ್‌ ಯೂರಿಯಾ ಗೊಬ್ಬರ ಬೇಕೆಂದು ಬೇಡಿಕೆ ಸಲ್ಲಿಸಿದ್ದೇನೆ. ಹಂತ ಹಂತವಾಗಿ ಬರುತ್ತದೆ ಎಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.  -ಎಂ.ಎಸ್‌. ಕುಲಕರ್ಣಿ, ಸಹಾಯಕ ಕೃಷಿ ನಿರ್ದೇಶಕ.

-ಮುನೇಶ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next