Advertisement

ರೈತ ಪರ ಪಕ್ಷಕ್ಕೆ ಮತ ನೀಡಲು ರೈತಸಂಘ ಮನವಿ

09:26 AM Apr 09, 2019 | Lakshmi GovindaRaju |

ಮೈಸೂರು: ಈ ಲೋಕಸಭಾ ಚುನಾವಣೆಯಲ್ಲಿ ರೈತರು, ಜನರ ಸಮಸ್ಯೆಗಳು ಚರ್ಚೆಯಾಗುತ್ತಿಲ್ಲ. ಎಲ್ಲಾ ರಾಜಕೀಯ ಪಕ್ಷಗಳೂ ಭಾವನಾತ್ಮಾಕ ವಿಷಯಗಳನ್ನೇ ದೊಡ್ಡದು ಮಾಡುತ್ತಿರುವ ಕಾರಣ, ರೈತರು ಹಾಗೂ ಗ್ರಾಮೀಣ ಜನರ ಸಂಕಷ್ಟಗಳನ್ನು ಪರಿಹರಿಸುವ ಭರವಸೆ ನೀಡುವವರಿಗೆ ಮತ ನೀಡಬೇಕೆಂದು ರಾಜ್ಯ ರೈತಸಂಘ, ಹಸಿರು ಸೇನೆ ಹಾಗೂ ದೇಶಕ್ಕಾಗಿ ನಾವು ಸಂಘಟನೆಗಳು ಮನವಿ ಮಾಡಿವೆ.

Advertisement

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯದ 156 ತಾಲೂಕುಗಳು ಬರ ಪೀಡಿತ ಎಂದು ಸರ್ಕಾರವೇ ಘೋಷಿಸಿದೆ. ಬರ ಪರಿಸ್ಥಿತಿಯಿಂದಾಗಿ ಜನ-ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ರೈತರ ಆತ್ಮಹತ್ಯೆ ನಿರಂತರವಾಗಿ ಆಗುತ್ತಿದೆ.

ರೈತರ ಸಾಲಮನ್ನಾ ಸಮರ್ಪಕವಾಗಿ ಆಗಿಲ್ಲ. ಕೇಂದ್ರ ಸರ್ಕಾರ ಸ್ವಾಮಿನಾಥನ್‌ ವರದಿ ಅನುಷ್ಠಾನಕ್ಕೆ ಮುಂದಾಗಿಲ್ಲ. ಈ ಯಾವ ಸಮಸ್ಯೆಗಳೂ ಈ ಚುನಾವಣೆಯಲ್ಲಿ ಚರ್ಚೆಯಾಗುತ್ತಿಲ್ಲ. ಬದಲಿಗೆ ವ್ಯಕ್ತಿಗತ ಚರ್ಚೆ ನಡೆಯುತ್ತಿದೆ.

ಮಂದಿರ-ಮಸೀದಿ, ಧರ್ಮದ ವಿಚಾರಗಳ ಚರ್ಚೆ ಸಾಕು, ಹೀಗಾಗಿ ದೇಶಕ್ಕಾಗಿ ನಾವು ಸಂಘಟನೆ ವಿವಿಧ ಕ್ಷೇತ್ರದ ತಜ್ಞರಿಂದ ಬರೆಸಿರುವ ಜನತಂತ್ರದ ಮರುದಾವೆ ಕಿರು ಹೊತ್ತಿಗೆಯನ್ನು ಎಲ್ಲಾ ರಾಜಕೀಯ ಪಕ್ಷಗಳವರಿಗೂ ಕಳುಹಿಸಿಕೊಟ್ಟು, ಪರಸ್ಪರ ವ್ಯಕ್ತಿಗತ ಆರೋಪಗಳು, ಭಾವನಾತ್ಮಕ ವಿಚಾರಗಳು ಹಾಗೂ ಅನಗತ್ಯ ಚರ್ಚೆಯನ್ನು ನಿಲ್ಲಿಸಿ, ನಾಡಿನ ರೈತರ ಮತ್ತು ಗ್ರಾಮೀಣ ಜನರ ಸಂಕಷ್ಟ ಪರಿಹಾರದ ಕುರಿತು ಚರ್ಚೆಯಾಗಬೇಕೆಂದು ಆಗ್ರಹಿಸುತ್ತೇವೆ ಎಂದರು.

ಹಕ್ಕೊತ್ತಾಯಗಳು: ಸಂಸತ್ತಿನಲ್ಲಿ ಈಗಾಗಲೇ ಮಂಡನೆಯಾಗಿರುವ ಸಾಲ ಮುಕ್ತಿ ಕಾಯ್ದೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಜಾರಿಗೆ ತರುತ್ತೀರೋ ಇಲ್ಲವೋ ಎಂಬುದನ್ನು ಎಲ್ಲಾ ರಾಜಕೀಯ ಪಕ್ಷಗಳೂ ಸ್ಪಷ್ಟಪಡಿಸಬೇಕು.

Advertisement

ರಾಷ್ಟ್ರೀಯ ರೈತ ಆಯೋಗದ ಶಿಫಾರಸಿನಂತೆ ದೇಶದ ಕೃಷಿ ಉತ್ಪನ್ನಗಳಿಗೆ ಸಂಪೂರ್ಣ ಉತ್ಪಾದನಾ ವೆಚ್ಚದ ಮೇಲೆ ಶೇ.50 ಲಾಭ ಖಾತರಿಪಡಿಸಲು ಸಂಸತ್ತಿನಲ್ಲಿ ಮಂಡನೆಯಾಗಿರುವ ಖಾಸಗಿ ಮಸೂದೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಜಾರಿಗೆ ತರುತ್ತೀರೋ ಇಲ್ಲವೋ ಎಂಬುದನ್ನು ಪಕ್ಷಗಳು ಘೋಷಿಸಬೇಕು.

ಕನಿಷ್ಠ ಆದಾಯ ಖಾತ್ರಿ: ಪ್ರತಿಯೊಂದು ಕುಟುಂಬಕ್ಕೆ ದುಡಿದು ಘನತೆಯಿಂದ ಬದುಕಲು ಬೇಕಾದ ಕನಿಷ್ಠ ಆದಾಯ ಖಾತರಿಗೆ ಬೇಕಾದ ಯೋಜನೆ ರೂಪಿಸಬೇಕು. ಈಗಾಗಲೇ ಭೂಹೀನರು ಉಳುಮೆ ಮಾಡುತ್ತಿರುವ ಸರ್ಕಾರಿ ಭೂಮಿಯನ್ನು ಅವರಿಗೇ ಮಂಜೂರು ಮಾಡಬೇಕು. ಭೂಮಿ ಲಭ್ಯವಿರುವ ಕಡೆ ಅದನ್ನು ಶೋಷಿತ ಸಮುದಾಯಗಳ ಕೃಷಿ ಕುಟುಂಬಗಳಿಗೆ ಆದ್ಯತೆ ಮೇಲೆ ಹಂಚಿಕೆ ಮಾಡಬೇಕು.

ವಿಶೇಷ ಪ್ಯಾಕೇಜ್‌: ಗ್ರಾಮೀಣ ಉದ್ಯೋಗ ಸೃಷ್ಟಿಯನ್ನು ಪ್ರೋತ್ಸಾಹಿಸಬೇಖು. ನರೇಗಾ ಯೋಜನೆಯನ್ನು ವಾರ್ಷಿಕ ಪ್ರತಿ ವ್ಯಕ್ತಿಗೆ 150 ದಿನಗಳಿಗೆ ವಿಸ್ತರಿಸಬೇಕು. ಕೃಷಿ ಕೂಲಿಗಳ ಹಾಗೂ ಸಣ್ಣ ರೈತರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಬೇಕು. ಉಪ ಕೃಷಿ ಉದ್ದಿಮೆಗಳನ್ನು ಪ್ರೋತ್ಸಾಹಿಸಬೇಕು. ಸಹಕಾರಿ ಮತ್ತು ನೈಸರ್ಗಿಕ ಕೃಷಿಗೆ ಬೆಂಬಲವಾಗಿ ವಿಶೇಷ ಪ್ಯಾಕೇಜ್‌ ಘೊಷಿಸಬೇಕು.

ದೇಶದ ಕೃಷಿ ಹಾಗೂ ಗ್ರಾಮೀಣ ಭಾಗವನ್ನು ಮತ್ತುಷ್ಟು ದುಸ್ಥಿತಿ ತಳ್ಳುವ ಎಲ್ಲಾ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ರದ್ದುಗೊಳಿಸಬೇಕು. ಭವಿಷ್ಯದಲ್ಲೂ ಅಂತಹ ಒಪ್ಪಂದಗಳನ್ನು ಮಾಡಿಕೊಳ್ಳಬಾರದು ಎಂದು ಆಗ್ರಹಿಸಿದರು.

ಸ್ವರಾಜ್‌ ಇಂಡಿಯಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಶಬ್ಬೀರ್‌ ಮುಸ್ತಫ‌, ಅಭಿರುಚಿ ಗಣೇಶ್‌, ಸಂಚಾಲಕರಾದ ಎಚ್‌.ಎ.ನಂಜುಂಡಸ್ವಾಮಿ, ಉಗ್ರನರಸಿಂಹೇಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಮಂಡ್ಯದಲ್ಲಿ ಮಾತ್ರ ಸುಮಲತಾಗೆ ಬೆಂಬಲ: ಕಾಂಗ್ರೆಸ್‌ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳೂ ರೈತರ ಪರವಾಗಿಲ್ಲ. ಚುನಾವಣೆಯಲ್ಲಿ ಮತಪಡೆಯಲ್ಲಷ್ಟೇ ನಾವು ರೈತರ ಪರ ಎನ್ನುತ್ತಾರೆ. ಹೀಗಾಗಿ ಈ ಚುನಾವಣೆಯಲ್ಲಿ ರೈತಸಂಘ ಬಹಿರಂಗವಾಗಿ ಯಾವುದೇ ಪಕ್ಷವನ್ನೂ ಬೆಂಬಲಿಸುತ್ತಿಲ್ಲ.

ಸಂಘದ ಸದಸ್ಯರು ಸ್ಥಳೀಯವಾಗಿ ಯಾರು ಕಡಿಮೆ ಅಪಾಯಕಾರಿ ಅವರನ್ನು ಆರಿಸಿಕೊಳ್ಳಲಿದ್ದಾರೆ. ಮಂಡ್ಯದ ರಾಜಕೀಯ ಚಿತ್ರಣವೇ ಬೇರೆ. ಹೀಗಾಗಿ ಅಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಅವರಿಗೆ ಬೆಂಬಲ ನೀಡಿದ್ದೇವೆ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next