Advertisement

Farmers Protest: ಅಶ್ರುವಾಯು, ಜಲಫಿರಂಗಿ ಬಳಕೆ: ರೈತರ ಕಾಲ್ನಡಿಗೆ ಜಾಥಾಗೆ ಮತ್ತೆ ತಡೆ

04:33 AM Dec 09, 2024 | Team Udayavani |

ಚಂಡೀಗಢ: ಎಂಎಸ್‌ಪಿಗೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ದಿಲ್ಲಿಗೆ ತೆರಳುತ್ತಿದ್ದ 101 ಮಂದಿ ರೈತರ ಕಾಲ್ನಡಿಗೆ ಜಾಥಾವನ್ನು ಭಾನುವಾರವೂ ಹರ್ಯಾಣ ಪೊಲೀಸರು ತಡೆದಿದ್ದಾರೆ.

Advertisement

ಹರ್ಯಾಣ-ದೆಹಲಿ ಪ್ರವೇಶ ಸ್ಥಳ ಶಂಭು ಗಡಿಯಿಂದ ರೈತರು ಕೊಂಚ ದೂರ ಬರುತ್ತಿದ್ದಂತೆಯೇ ಅವರ ಮೇಲೆ ಅಶ್ರುವಾಯು, ಜಲ ಫಿರಂಗಿಗಳನ್ನು ಪ್ರಯೋಗಿಸಲಾಗಿದೆ. ಘಟನೆಯಲ್ಲಿ 6 ರಿಂದ 8 ಮಂದಿ ರೈತರು ಗಾಯಗೊಂಡಿದ್ದು, ಓರ್ವ ರೈತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ರೈತರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

ರೈತ ಸಂಘಟನೆಗಳಾದ ಸಂಯುಕ್ತ ಕಿಸಾನ್‌ ಮೋರ್ಚಾ, ಕಿಸಾನ್‌ ಮಜದೂರ್‌ ಮೋರ್ಚಾ ಸೋಮವಾರ ಸಭೆ ನಡೆಸಲಿವೆ. ಆ ಸಭೆಯಲ್ಲೇ ಜಾಥಾ ಮುಂದುವರಿಯಬೇಕೇ? ಅಥವಾ ಬೇರೆ ಕ್ರಮಗಳನ್ನು ಕೈಗೊಳ್ಳಬೇಕೇ ಎಂಬುದರ ಬಗ್ಗೆ ನಿರ್ಧರಿಸಲಾಗುವುದು ಎಂದು ರೈತ ನಾಯಕ ಸರ್ವನ್‌ ಸಿಂಗ್‌ ಪಂಧೇರ್‌ ಹೇಳಿದ್ದಾರೆ.

ರೈತರ ಮೇಲೆ ಹೂ ಮಳೆ:
ಅಶ್ರುವಾಯು ಪ್ರಯೋಗಿಸಿದ್ದ ಬೆನ್ನಲ್ಲೇ ಪ್ರತಿಭಟನಾ ನಿರತ ರೈತರಿಗೆ ಟೀ- ಬಿಸ್ಕೆಟ್‌ ನೀಡಿದ್ದಲ್ಲದೆ, ಅವರ ಮೇಲೆ ಪೊಲೀಸರು ಹೂ ಮಳೆಗರೆದಿದ್ದಾರೆ! “ರೈತರ ಮೇಲೆ ನಮಗೆ ಯಾವುದೇ ಸಿಟ್ಟಿಲ್ಲ, ಅವರು ದಿಲ್ಲಿಗೆ ಹೋಗಬೇಕಾದರೆ ಅಲ್ಲಿನ ಅನುಮತಿ ಬೇಕು. ಅಲ್ಲಿವರೆಗೂ ಜಾಥ ಮುಂದುವರಿಸಲು ಬಿಡಲಾಗದು ಎಂದು ಪೊಲೀಸರು ಹೇಳಿದ್ದಾರೆ. ಇದು ಸರ್ಕಾರದ ಕಣ್ಣೊರೆಸುವ ತಂತ್ರ ಎಂದು ರೈತ ನಾಯಕರು ಸಿಟ್ಟಾಗಿದ್ದಾರೆ.

Advertisement

ಕೇಂದ್ರದ ಜತೆ ಸಿಎಂ ಭಗವಂತ್‌ ಮಾನ್‌ ರಹಸ್ಯ ಒಪ್ಪಂದ: ಫ‌ಂದೇರ್‌
ಕೇಂದ್ರ ಸರ್ಕಾರದ ಜತೆಗೆ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಯಾವುದೋ ರಹಸ್ಯ ಒಪ್ಪಂದ ಮಾಡಿಕೊಂಡಂತಿದೆ. ಹಿಂದೆ ನಾವು ಕೇಂದ್ರದ ವಿರುದ್ಧ ಮಾತ್ರ ಪ್ರತಿಭಟಿಸುತ್ತಿದ್ದೆವು. ಈಗ ರಾಜ್ಯವೂ ನಮ್ಮ ಎದುರಾಳಿ ಆಗಿದೆ. ಕೇಂದ್ರ ಎಸಗುತ್ತಿರುವ ಕೃತ್ಯವನ್ನು ಮರೆ ಮಾಚಲು ಮಾನ್‌ ಪ್ರಯತ್ನಿಸುತ್ತಿದ್ದಾರೆ. ಹಾಗಾಗಿಯೇ ಮಾಧ್ಯಮಗಳನ್ನು ಇಲ್ಲಿಗೆ ಬರಲು ಬಿಡುತ್ತಿಲ್ಲ. ಈ ಬಗ್ಗೆ ಖುದ್ದು ಮಾನ್‌ ಮತ್ತು ಕೇಜ್ರಿವಾಲ್‌ ಉತ್ತರಿಸಬೇಕು ಎಂದು ರೈತ ನಾಯಕ ಫ‌ಂದೇರ್‌ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next